ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಶನಿವಾರ, ಜೂಲೈ 20, 2019
26 °C
ಐಎಂಎ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರಿಂದ ಜಿಲ್ಲಾಧಿಕಾರಿಗೆ ಮನವಿ

ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ದಾವಣಗೆರೆ: ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಹಣ ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಹಣ ಕಳೆದುಕೊಂಡವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಬಡವರ ಹಣವನ್ನು ದೋಚಿದ ಮನ್ಸೂರ್ ಖಾನ್ ಬಂಧನ ಆಗಲೇಬೇಕು’, ‘ನಮ್ಮ ಹಣ ವಾಪಸ್‌ ಕೊಡಿಸಿ’, ‘ಕೂಲಿ ಮಾಡಿದ ಬಡವರ ಹಣವನ್ನು ವಾಪಸ್ ನೀಡಬೇಕು’, ‘ನಮ್ಮ ಹಣಕ್ಕೆ ನ್ಯಾಯ ಬೇಕು’, ‘ತನಿಖೆಯನ್ನು ತೀವ್ರಗೊಳಿಸಬೇಕು’ ಎಂದು ಘೋಷಣೆ ಕೂಗಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ದಾದಾಪಿರ್ ಅಸಾದುಲ್ಲಾನಿಗೆ ಹರಪನಹಳ್ಳಿ, ಲೋಕಿಕೆರೆ, ಬಿ.ಎಂ. ಲೇಔಟ್‌ಗಳಲ್ಲಿ ₹25 ಕೋಟಿಗೂ ಹೆಚ್ಚು ಬೆಲೆ ಬಾಳುವ ಬೇನಾಮಿ ಆಸ್ತಿ ಇದೆ. ಎರಡು ವರ್ಷಗಳ ಹಿಂದೆ ಈತನ ಬಳಿ ಏನು ಇರಲಿಲ್ಲ. ಈಗ ಇವನ ಕುಟುಂಬದವರ ಬಳಿ ಕೆಜಿಗಟ್ಟಲೆ ಚಿನ್ನ ಆಸ್ತಿ, ಬಂಗಲೆ, ಇಂಟರ್‌ ನ್ಯಾಷನಲ್ ಸ್ಕೂಲ್‌ಗಳು ಇವೆ. ಇದು ಹೇಗೆ ಬಂತು ಎಂದು ತನಿಖೆ ಮಾಡಬೇಕು’ ಎಂದು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್‌ ಆಗ್ರಹಿಸಿದರು.

‘ಮಕ್ಕಳ ಭವಿಷ್ಯಕ್ಕಾಗಿ ₹ 8ಲಕ್ಷ ಹೂಡಿಕೆ ಮಾಡಿದ್ದೆ. 6 ತಿಂಗಳ ಆಯಿತು. ಈಗ ಹಣ ಇಲ್ಲದಂತಾಗಿದೆ. ನಮ್ಮ ಹಣ ವಾಪಸ್ ಬರಬೇಕು, ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು. ನಮ್ಮ ಕಷ್ಟಗಳಿಗೆ ಸರ್ಕಾರ, ಪೊಲೀಸರು ಸ್ಪಂದಿಸಿದ್ದಾರೆ’ ಎಂದು ಹಣ ಕಳೆದುಕೊಂಡಿರುವ ಮಿರ್ಜಾ ಕಲೀಂಉಲ್ಲಾ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ‘ಬಂಧಿತನಾಗಿರುವ ದಾದಾಪೀರ್  ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೇ ಆಸ್ತಿಯನ್ನು ಮಾರಾಟ ಮಾಡದಂತೆ ಕ್ರಮ ವಹಿಸಲಾಗುವುದು. ಸರ್ಕಾರ, ನ್ಯಾಯಾಲಯ ಏನು ಕ್ರಮ ಕೈಗೊಳ್ಳುತ್ತದೆಯೊ ಅದರಂತೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತನ್ವೀರ್ ಅಹಮದ್, ಉಮೇಶ್ ಪಾಟೀಲ್, ಅಬೀಬ್ ಸೇರಿ 50ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !