ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Last Updated 4 ನವೆಂಬರ್ 2020, 16:30 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಫುಟ್‌ಪಾತ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು ಹಾಗೂ ವ್ಯಾಪಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕ ದಾವಣಗೆರೆ ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘದ ಸದಸ್ಯರು ಎಐಟಿಯುಸಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಐದು ಸಾವಿರಕ್ಕೂ ಹೆಚ್ಚು ಮಂದಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದಾರೆ. ಸಾಲ ಮಾಡಿ ಅಲ್ಪಸ್ವಲ್ಪ ಬಂಡವಾಳದಲ್ಲಿ ಫುಟ್‍ಪಾತ್‍ಗಳಲ್ಲಿ ಬಿಸಿನೀರು, ಎಳನೀರು, ಗಂಜಿ, ತಿಂಡಿ, ಊಟ, ಹಣ್ಣುಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಗಲಿರುಳು ವ್ಯಾಪಾರ ಮಾಡಿದರೂ ಎರಡು ಹೊತ್ತಿನ ಗಂಜಿಗೂ ಸಾಕಾಗುತ್ತಿಲ್ಲ. ಈ ಮಧ್ಯೆ ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ನಗರದ ಸಿ.ಜಿ. ಆಸ್ಪತ್ರೆ ಹಿಂಭಾಗದ ಕಾಂಪೌಂಡ್‌ ಹಾಗೂ ಬಾಪೂಜಿ ಆಸ್ಪತ್ರೆ ಮುಂಭಾಗದ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಕಟ್ಟಿಸಿಕೊಡಬೇಕು. ಕಾಂಪೌಂಡ್ ಜೊತೆಗೆ ಮಳಿಗೆ ಕಟ್ಟಿಸಿಕೊಟ್ಟರೆ ಬೀದಿ ಬದಿ ವ್ಯಾಪಾರಸ್ಥರಿಗೆ ಶಾಶ್ವತ ಪರಿಹಾರ ಕೊಟ್ಟಂತಾಗುತ್ತದೆ. ನಗರದಲ್ಲಿ ಸ್ಥಳಗಳನ್ನು ಗುರುತಿಸಿ ವ್ಯಾಪಾರಕ್ಕೆ ಶಾಶ್ವತವಾಗಿ ಅವಕಾಶ ಕಲ್ಪಿಸಬೇಕು ಹಾಗೂ ಆಶ್ರಯ ಮನೆಗಳನ್ನು ಕಟ್ಟಿಸಿಕೊಡಬೇಕು’ ಎಂದು ಆಗ್ರಹಿಸಿದರು.

ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಮೇಯರ್ ಬಿ.ಜಿ.ಅಜಯ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಮಿಕ ಮುಖಂಡರಾದ ಎಚ್.ಕೆ.ರಾಮಚಂದ್ರಪ್ಪ, ಆವರೆಗೆರೆವಾಸು, ಎನ್.ಟಿ. ಬಸವರಾಜ್, ಎಸ್.ಕೆ. ರಹಮತ್ ಉಲ್ಲಾ, ಸಿದ್ದೇಶಿ, ಅಲ್ಲಾಭಕ್ಷಿ,ಶಾಂತಮ್ಮ, ವಾಜಿದ್ ಸಾಬ್, ಈರಮ್ಮ, ಎಚ್. ಸತ್ತಾರ್ ಸಾಬ್, ಗೌರಮ್ಮ, ಕೆರನಹಳ್ಳಿ, ಎ.ತಿಪ್ಪೇಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT