ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾನಗರ ಪಾಲಿಕೆ ವಾಹನ ಚಾಲಕರಿಗೆ ವೇತನ ನೀಡಲು ಕಾರ್ಮಿಕರ ಒತ್ತಾಯ

Published 10 ಫೆಬ್ರುವರಿ 2024, 7:56 IST
Last Updated 10 ಫೆಬ್ರುವರಿ 2024, 7:56 IST
ಅಕ್ಷರ ಗಾತ್ರ

ದಾವಣಗೆರೆ: 3 ತಿಂಗಳಾದರೂ ಮಹಾನಗರ ಪಾಲಿಕೆ ವಾಹನ ಚಾಲಕರಿಗೆ ವೇತನ ನೀಡದ ಹೊರಗುತ್ತಿಗೆ ಏಜೆನ್ಸಿಗಳನ್ನು ರದ್ದುಪಡಿಸಬೇಕು. ಶೀಘ್ರ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಜಮಾಯಿಸಿದ ಕಾರ್ಮಿಕರು ಹೊರಗುತ್ತಿಗೆ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯ ಕಸ ಸಾಗಾಣಿಕೆ, ಒಳಚರಂಡಿ ಹಾಗೂ ಇತರೆ ವಿಭಾಗದಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂರು ತಿಂಗಳಾದರೂ ವೇತನ ನೀಡಿಲ್ಲ. ವೇತನ ನೀಡುವ ಹೊರಗುತ್ತಿಗೆ ಏಜೆನ್ಸಿಯನ್ನು ಅಕ್ಟೋಬರ್‌ ತಿಂಗಳಲ್ಲಿ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿಯ ಆದರ್ಶ ಎಂಟರ್ ಪ್ರೈಸಸ್ ಅವರು ಟೆಂಡರ್‌ ಪಡೆದಿದ್ದು, ಇದುವರೆಗೂ ವೇತನ ನೀಡಿಲ್ಲ. ಈ ಏಜೆನ್ಸಿ ಹುಬ್ಬಳ್ಳಿಯಲ್ಲೂ ಪಾಲಿಕೆಯ ಚಾಲಕರಿಗೆ ವೇತನ ನೀಡಿಲ್ಲ ಎಂದು ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದುಗ್ಗೇಶ್ ಆರೋಪಿಸಿದರು.

ಏಜೆನ್ಸಿಯವರು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ವೇತನ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಶೀಘ್ರ ವೇತನ ನೀಡಬೇಕು. ಹೊರ ಜಿಲ್ಲೆಗಳ ಏಜೆನ್ಸಿಗೆ ಟೆಂಡರ್‌ ನೀಡದೇ ಸ್ಥಳೀಯ ಏಜೆನ್ಸಿಗಳಿಗೆ ಟೆಂಡರ್ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಂ. ವೀರೇಶ್, ಕಿರಣ್ ಕುಮಾರ್ ಟಿ., ಎಚ್.ಎಂ. ಪ್ರಭಾಕರ್, ಸಂತೋಷ್, ಪ್ರಕಾಶ್, ಕೊಟ್ರೇಶ್, ಸಿದ್ದಲಿಂಗೇಶ್ವರ್, ಚಿದಾನಂದ, ಮೈಲಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT