ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಚಕ್ರತೀರ್ಥ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ

Last Updated 1 ಜೂನ್ 2022, 4:05 IST
ಅಕ್ಷರ ಗಾತ್ರ

ದಾವಣಗೆರೆ: ಪಠ್ಯಕ್ರಮದಲ್ಲಿ ದ್ವೇಷ ಭಾವನೆ ಮೂಡಿಸುವ ಕೆಲಸಕ್ಕೆ ಮುಂದಾಗಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣ ಸಮಿತಿ ರದ್ಧುಪಡಿಸುವಂತೆ ಒತ್ತಾಯಿಸಿ ಚಕ್ರತೀರ್ಥ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ಬಳಿಕ ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಿಂದೆ ಸರ್ಕಾರವು ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಿದ್ದಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನು ತರಾತುರಿಯಲ್ಲಿ ಮರು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಷ್ಕರಣ ಸಮಿತಿ ನೇಮಿಸಿದೆ. ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳನ್ನು ಖಂಡನಾರ್ಹ ರೀತಿಯಲ್ಲಿ ಈ ಸಮಿತಿ ಬದಲಾವಣೆ ಮಾಡಿದೆ. ಈಗ ಮರು ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಹಂಚಲು ಸರ್ಕಾರ ಹೊರಟಿದೆ. ಈ ಕ್ರಮ ಬೇಜವಾಬ್ಧಾರಿತನದಿಂದ ಕೂಡಿದೆ. ಲಕ್ಷಾಂತರ ಮಕ್ಕಳ ಭವಿಷ್ಯ, ಶಿಕ್ಷಣ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ದೂರಿದರು.

ಹೆಮ್ಮೆಯ ಸಾಹಿತಿಗಳಾದ ಪಿ. ಲಂಕೇಶ್, ಸಾರಾ ಅಬೂಬಕರ್, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಅರವಿಂದ ಮಾಲಗತ್ತಿ, ಬಿ.ಟಿ. ಲಲಿತಾ ನಾಯಕ್ ಮೊದಲಾದವರ ಮೌಲಿಕ ಪಠ್ಯ ಕಿತ್ತು ಹಾಕಿ ಕನ್ನಡದ ಚಿಂತನೆಯನ್ನು ಅವಮಾನಿಸಲಾಗಿದೆ. 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಾಠ ತೆಗೆಯಲಾಗಿದೆ. ಇವುಗಳ ಬದಲಿಗೆ ಸಂಘ ಪರಿವಾರದ ಸಿದ್ಧಾಂತ, ಸಂಘಟನೆ ಪರವಾದ ಪಠ್ಯ ತುರುಕಲಾಗಿದೆ. ಈ ಪಾಠಗಳು ಕುವೆಂಪು ಹೇಳಿದ ವಿಶ್ವಮಾನತೆ ವಿರುದ್ಧ ದಿಕ್ಕಿನಲ್ಲಿವೆ ಎಂದು ಆರೋಪಿಸಿದರು.

ಸರ್ಕಾರವು ನೇಮಿಸಿದ ಸಮಿತಿಯಲ್ಲಿ ಶಿಕ್ಷಣ ತಜ್ಞರೂ ಇಲ್ಲ. ರೋಹಿತ ಚಕ್ರತೀರ್ಥ ಕನ್ನಡ ವಿರೋಧಿ ಕಿಡಿಗೇಡಿ. ಆತನ ಸಮರ್ಥನೆಗಾಗಿ ಶಿಕ್ಷಣ ಸಚಿವ ನಾಗೇಶ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ. ಐಐಟಿ, ಸಿಇಟಿ ಪ್ರಾಧ್ಯಾಪಕನೆಂದು ಹೇಳಿ ನಗೆಪಾಟಲಾಗಿದ್ದಾರೆ. ರೋಹಿತ್ ಚಕ್ರತೀರ್ಥ ಕನ್ನಡ ಧ್ವಜವನ್ನು ತನ್ನ ಒಳ ಚಡ್ಡಿಗೆ ಹೋಲಿಸಿಕೊಂಡು, ಕನ್ನಡದ ಅಸ್ಮಿತೆಗಳನ್ನು ಲೇವಡಿ ಮಾಡಿದ್ದ ವ್ಯಕ್ತಿ. ಕುವೆಂಪು ಬರೆದ ನಾಡಗೀತೆಯನ್ನೇ ವಿಕೃತಗೊಳಿಸಿದವನು. ಇಂಥವನಿಗೆ ಅವಕಾಶ ಕೊಟ್ಟ ಸರ್ಕಾರ ಕನ್ನಡಿಗರ ಕ್ಷಮೆ ಕೇಳಿ, ಸಮಿತಿ ರದ್ದುಪಡಿಸಬೇಕು. ಹಳೆ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಪಠ್ಯ ಪರಿಷ್ಕರಣೆ ಅಗತ್ಯವೆನಿಸಿದರೆ ಅರ್ಹರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.

ವೇದಿಕೆ ಮಹಿಳಾ ಅಧ್ಯಕ್ಷೆ ಬಸಮ್ಮ, ಶಾಂತಮ್ಮ, ಸಾಕಮ್ಮ, ಎನ್.ಟಿ. ಹನುಮಂತಪ್ಪ, ಜಿ.ಎಸ್. ಸಂತೋಷ್, ಗಜೇಂದ್ರ, ಅನಿಲ್, ಎನ್.ಬಿ.ಎ. ಲೋಕೇಶ, ಜಬೀವುಲ್ಲಾ. ಅಬ್ದುಲ್ ಗಫರ್, ಅಯೂಬ್, ಷಫೀವುಲ್ಲಾ, ನಾಗರಾಜ ಮೆಹರವಾಡೆ, ಮಂಜುಶ್ರೀ ಗೌಡ, ತಿಪ್ಪೇಶ, ಬಾಲಸುಬ್ರಹ್ಮಣ್ಯ, ಜಗಳೂರಿನ ಎಂ. ಮಹಾಂತೇಶ, ನವೀನ, ರಖೀಬ್, ಮುನ್ನಾ, ಬಸವನಕೋಟೆ ಬಸವರಾಜ, ಉಜ್ಜಪ್ಪ ವಡೆಯರಹಳ್ಳಿ ಪ್ರಶಾಂತ, ಸಿದ್ದೇಶ, ಮಾಲತೇಶ, ರಮೇಶ, ಗೌರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT