ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳು ಭರ್ತಿ: ಗದ್ದೆ ಜಲಾವೃತವಾಗುವ ಆತಂಕ

Last Updated 22 ಮೇ 2022, 2:19 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ದೇವಾಲಯದ ಕೆರೆ ಶನಿವಾರ ಭರ್ತಿಯಾಗಿ ಕೋಡಿ ಮೂಲಕ ಹೆಚ್ಚಿನ ನೀರು ಹರಿದು ಹೋಗುತ್ತಿದೆ.

ಪ್ರತಿಬಾರಿ ಮಳೆಗಾಲದ ಅಂತ್ಯಕ್ಕೆ ಭರ್ತಿಯಾಗುತ್ತಿದ್ದ 100 ಎಕರೆ ವಿಸ್ತೀರ್ಣದ ಕೆರೆ ಮೇ ತಿಂಗಳ ಮಧ್ಯ ಭಾಗದಲ್ಲಿ ಒಂದೇ ದಿನದಲ್ಲಿ 5 ಅಡಿ ನೀರು ಬಂದಿದ್ದು ಭರ್ತಿಯಾಗಲು ಮುಖ್ಯ ಕಾರಣ. ಕೆರೆ ಹಿಂಭಾಗದ ಹಾಲುವರ್ತಿ ಸರ, ರಾಮನಕಟ್ಟೆ ಗುಡ್ಡ ಪ್ರದೇಶ, ಅಗಸನಹಳ್ಳ ಭಾಗದಲ್ಲಿ ಸುರಿದ ಧಾರಾಕಾರ ಮಳೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು.

ಇನ್ನೂ ಮುಂದೆ 4 ತಿಂಗಳು ಮಳೆಗಾಲ ಬಾಕಿ ಇದ್ದು ಈಗಾಗಲೇ ಕೆರೆ ತುಂಬಿದೆ. ವರ್ಷಪೂರ್ತಿ ನೀರಿನ ಸಮಸ್ಯೆ ಇರುವುದಿಲ್ಲ. ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಸುತ್ತಮುತ್ತಲ ಪ್ರದೇಶದ ಕೊಳವೆ, ತೆರೆದಬಾವಿಗಳು ಮರುಪೂರಣವಾಗಿವೆ ಎಂದು ಗ್ರಾಮದ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್, ಐರಣಿ ಅಣ್ಣೇಶ್, ಮಹೇಶ್ ಸಂತಸ ವ್ಯಕ್ತಪಡಿಸಿದರು.

ಕೆರೆ ಹಿಂಭಾಗದ ಅಡಿಕೆ, ಬಾಳೆ ತೋಟ ಜಲಾವೃತವಾಗಿವೆ. ಶೀತಬಾಧೆಗೆ ತುತ್ತಾಗಿ ಹಾಳಾಗುವ ಆತಂಕ ತೋಟದ ಬೆಳೆಗಾರರದ್ದು. ಖುಷ್ಕಿ ಬೆಳೆ ಬಿತ್ತನೆ ಕೂಡ ಕಷ್ಟ ಎಂಬ ಆತಂಕ ಮೆಕ್ಕೆಜೋಳ ಬೆಳೆಯುವ ರೈತರದ್ದು.

ಈಗಾಗಲೇ ಹೆಚ್ಚಿನ ಪ್ರಮಾಣದ ನೀರು ಗುರುವಾರ ಹರಿದು ಹೋದ ಕಾರಣ ಸಾಕಷ್ಟು ಬೆಳೆ ಹಾಳಾಗಿವೆ. ಹೊಲದ ಬದುವು ದಂಡೆ ಕೊಚ್ಚಿ ಹೋಗಿವೆ. ಈಗ ಕೆರೆ ನೀರು ನುಗ್ಗಿದರೆ ತೋಟ, ಗದ್ದೆ ಜಲಾವೃತವಾಗುವುದು ಖಚಿತ ಎನ್ನುತ್ತಾರೆ ದಿಬ್ಬದಹಳ್ಳಿ, ಕೊಮಾರನಹಳ್ಳಿ ಕೃಷಿಕರು.

ದೇವಾಲಯದ ಆಡಳಿತಾಧಿಕಾರಿ ಉಪತಹಶೀಲ್ದಾರ್ ಆರ್‌. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ದೇವಾಲಯದ ಮುಜರಾಯಿ ಶಾನುಬೋಗ ಧರ್ಮರಾಜ್, ಗ್ರಾಮಸ್ಥರು ಕೋಡಿ ವೀಕ್ಷಣೆ ಮಾಡಿ ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಸಮೀಪದ ಹರಳಹಳ್ಳಿ ಕೆರೆ ಕೂಡ ಭರ್ತಿಯಾಗಿ ಕೋಡಿ ಬಿದ್ದಿದ್ದು ಹೆಚ್ಚಿನ ಪ್ರಮಾಣದ ನೀರು ಹಳ್ಳ ಸೇರುತ್ತಿದೆ. ಗ್ರಾಮ ಪಂಚಾಯತಿ ಪಿಡಿಒ ಶಾಂತಪ್ಪ ಹಾಗೂ ಸಿಬ್ಬಂದಿ, ಗ್ರಾಮಸ್ಥರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT