ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರಪೀಡಿತ ಜಗಳೂರಿನ ಕೆರೆಗಳಿಗೆ ಹರಿದ ‘ತುಂಗಭದ್ರಾ’

ಪ್ರಾಯೋಗಿಕವಾಗಿ 15 ಕೆರೆಗಳಿಗೆ ಯಶಸ್ವಿಯಾಗಿ ಹರಿದ ನೀರು; ನೋಡಲು ಮುಗಿಬಿದ್ದ ಗ್ರಾಮಸ್ಥರು
ಡಿ. ಶ್ರೀನಿವಾಸ್
Published 6 ಜುಲೈ 2024, 7:35 IST
Last Updated 6 ಜುಲೈ 2024, 7:35 IST
ಅಕ್ಷರ ಗಾತ್ರ

ಜಗಳೂರು: ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆಯಡಿ ಮೊದಲ ಬಾರಿಗೆ ಜಗಳೂರಿನ ಐತಿಹಾಸಿಕ ಕೆರೆ ಸೇರಿ ಕ್ಷೇತ್ರದ 15 ಕೆರೆಗಳಿಗೆ ಶುಕ್ರವಾರ ನೀರು ಹರಿದು ಬಂದಿದ್ದು, ಜನರು ಮುಗಿಬಿದ್ದು ವೀಕ್ಷಿಸಿದರು.

ನಾಲ್ಕು ದಶಕಗಳಿಂದ ಭರ್ತಿಯಾಗದ, ಶತಮಾನಗಳಷ್ಟು ಹಳೆಯದಾದ ಜಗಳೂರು ಕೆರೆ ಸೇರಿ 15 ಕೆರೆಗಳಿಗೆ ಪೈಪ್‌ಗಳ ಮೂಲಕ ನದಿ ನೀರು ಹರಿದುಬಂತು. ಈ ಅಪರೂಪದ ಕ್ಷಣವನ್ನು ಆಸುಪಾಸಿನ ಗ್ರಾಮಗಳ ಜನರು ಗುಂಪುಗುಂಪಾಗಿ ಆಗಮಿಸಿ ವೀಕ್ಷಿಸಿ ಸಂಭ್ರಮಿಸಿದರು.

ಹರಿಹರ ತಾಲ್ಲೂಕಿನ ತುಂಗಭದ್ರಾ ತಟದ ದೀಟೂರಿನಿಂದ‌ ಜಾಕ್‌ವೆಲ್‌ ಮೂಲಕ 57 ಕೆರೆಗಳಿಗೆ ನೀರು ಹರಿಸುವ ₹ 670 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿ 5 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಪರೀಕ್ಷಾರ್ಥ ಪ್ರಯೋಗದ ಮೂಲಕ ಯಶಸ್ವಿಯಾಗಿ 15 ಕೆರೆಗಳಿಗೆ ನೀರು ಹರಿದಿದೆ. ಬರದಿಂದ ಬತ್ತಿಹೋಗಿದ್ದ ಕೆರೆಗಳಿಗೆ ನೀರು ಬರುತ್ತಿದ್ದು, ರೈತರ ನಿರೀಕ್ಷೆಗಳು ಗರಿಗೆದರಿವೆ.

ಮೊದಲ ಹಂತದಲ್ಲಿ 30 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಶುಕ್ರವಾರ 15 ಕೆರೆಗಳಿಗೆ ನೀರು ಹರಿದುಬಂದಿದೆ. ಶನಿವಾರ 15 ಕೆರೆಗಳಿಗೆ ನೀರು ಹರಿಯಲಿದೆ. ತುಂಗಭದ್ರಾ ನದಿಯಲ್ಲಿ ಪ್ರಸ್ತುತ ಹೆಚ್ವಿನ ಹರಿವು ಇರುವುದರಿಂದ ಜಗಳೂರು ಕೆರೆ, ಬಿಳಿಚೋಡು ಕೆರೆ, ತುಪ್ಪದಹಳ್ಳಿ ಕೆರೆ, ಆಸಗೋಡು, ಕಾಟೇನಹಳ್ಳಿ,ಮಾದೇನಹಳ್ಳಿ, ಚದರಗೊಳ್ಳ, ಗೋಡೆ, ತಾರೇಹಳ್ಳಿ, ಮರೀಕುಂಟೆ, ಮುಷ್ಟಿಗರಹಳ್ಳಿ, ಚನ್ನಾಪುರ,‌ ಬೈರನಾಯ್ಕನಹಳ್ಳಿ ಸೇರಿದಂತೆ ಶುಕ್ರವಾರ 15 ಕೆರೆಗಳಿಗೆ ಯಶಸ್ವಿಯಾಗಿ ನೀರು ಹರಿದಿದೆ. ಶನಿವಾರ ತಾಲ್ಲೂಕಿನ ಮೆದಗಿನಕೆರೆ, ಹಳವದಂಡೆ, ಕೊರಟಿಕೆರೆ ಲಂಬಾಣಿಹಟ್ಟಿ ಕೆರೆ, ಕೆಳಗೋಟೆ, ಕೆಚ್ಚೇನಹಳ್ಳಿ, ಗೌಡಗೊಂಡನಹಳ್ಳಿ ಹಾಗೂ ಕ್ಯಾಸೇನಹಳ್ಳಿ ಸೇರಿ 15 ಕೆರೆಗಳಿಗೆ ನೀರು ಹರಿಯಲಿದೆ.

‘ನದಿಯಲ್ಲಿ ಪ್ರಸ್ತುತ 30,000 ಕ್ಯುಸೆಕ್ ನೀರಿನ ಹರಿವು ಇರುವುದರಿಂದ ಮೊದಲ ಹಂತದಲ್ಲಿ ಜಗಳೂರು ಕ್ಷೇತ್ರದ 30 ಕೆರೆಗಳಿಗೆ ಟ್ರಯಲ್ ಅಂಡ್ ರನ್ ಮೂಲಕ ನೀರು ಹರಿಸಲಾಗುತ್ತಿದ್ದು, ಬಹುತೇಕ ಯಶಸ್ವಿಯಾಗಿದೆ. ಒಂದೆರೆಡು ಕಡೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸರಿಪಡಿಸಲಾಗಿದೆ’ ಎಂದು ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್ ‘ಪ್ರಜಾವಾಣಿ’ಗೆ ಮಾಹಿತಿ‌ ನೀಡಿದರು.

ನಿರಂತರ ಕಾಮಗಾರಿಯಿಂದ ಕೆರೆಗೆ ನೀರು ಕ್ಷೇತ್ರದ ಅತ್ಯಂತ ಮಹತ್ವದ 57 ಕೆರೆ ತುಂಬಿಸುವ ಯೋಜನೆ ಈ ಹಿಂದೆ ವಿಳಂಬವಾಗಿತ್ತು. ಒಂದು ವರ್ಷದಿಂದ ನಿರಂತರ ಕಾಮಗಾರಿ ಕೈಗೊಂಡಿದ್ದರಿಂದ 30 ಕೆರೆಗಳಿಗೆ ಮೊದಲ ಹಂತದಲ್ಲಿ ನೀರು ಹರಿದುಬರುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಹಂತಹಂತವಾಗಿ ಎಲ್ಲಾ 57 ಕೆರೆಗಳಿಗೆ ಪ್ರಾಯೋಗಿಕವಾಗಿ ಯಶಸ್ವಿಯಾಗಿ ಕೆರೆಗಳಿಗೆ ನೀರು ಹರಿಸಲಾಗುವುದು. ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ಪ್ರಸ್ತುತ ಮಳೆಗಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT