ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನಂಚಿನ ಬಿಳಿ ರಣಹದ್ದು ಪತ್ತೆ

ಪರಿಸರವನ್ನು ಚೊಕ್ಕಟವಾಗಿಡಿಸುವ ಹಕ್ಕಿ
Last Updated 14 ಮೇ 2022, 3:03 IST
ಅಕ್ಷರ ಗಾತ್ರ

ದಾವಣಗೆರೆ ಪಕ್ಷಿ ಸಂಕುಲಕ್ಕೊಂದು ಹೊಸ ಸೇರ್ಪಡೆ. ಬಹಳ ಅಪರೂಪದ ಬಿಳಿರಣಹದ್ದು ಚೆನ್ನಗಿರಿ ರಸ್ತೆಯ ಲೈಟ್ ಕಂಬದ ಮೇಲೆ ಕುಳಿತಿತ್ತು. ಜಿಟಿಜಿಟಿ ಮಳೆಯಲ್ಲಿ ತೊಯ್ದ ಹಕ್ಕಿ ಕ್ಯಾಮರಾದಲ್ಲಿ ಸೆರೆಯಾಯಿತು. ಇದನ್ನು ಆಂಗ್ಲಭಾಷೆಯಲ್ಲಿ ಈಜ್ಪಿಶಿಯನ್ ವಲ್ಚರ್ ಎಂದು, ಪ್ರಾಣಿಶಾಸ್ತ್ರೀಯವಾಗಿ ‘ನೆಪ್ರೊನ್ ಪರ್ಕನ್‌ಪೊಟರಿಸ್‌’ ಎಂದು ಕರೆಯುವರು.

ಗಾತ್ರದಲ್ಲಿ ಬೇರೆ ಹದ್ದುಗಳಿಗಿಂತ ಸ್ವಲ್ಪ ಚಿಕ್ಕದು (60ರಿಂದ 70 ಸೆಂಮೀ). ಹಳದಿ ಮುಖ, ತಲೆ ಮತ್ತು ಕೊಕ್ಕು. ಚೂಪಾದ ಮತ್ತು ತುದಿಯಲ್ಲಿ ತುಸು ಬಾಗಿದ ಕೊಕ್ಕು. ದೇಹವೆಲ್ಲ ಕೊಳಕಾದ ಬಿಳಿ ಬಣ್ಣ. ಉದ್ದವಾದ ರೆಕ್ಕೆಗಳು. ಹಾರುವಾಗ ರೆಕ್ಕೆಯ ಪುಕ್ಕಗಳ ಕಪ್ಪು ಬಣ್ಣ ಗೋಚರಿಸುವುದು. ಬೆಣೆಯಾಕಾರದ ಬಾಲ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸಗಳಿಲ್ಲ. ಮರಿಗಳು ಕಪ್ಪು ಮಿಶ್ರಿತ ಕಪ್ಪು ಬಣ್ಣದ್ದಾಗಿರುತ್ತವೆ. ಪರಿಸರವನ್ನು ಚೊಕ್ಕಟವಾಗಿಡಿಸುವ ಹಕ್ಕಿ. ಆಹಾರಕ್ಕಾಗಿ ಸತ್ತ ಪ್ರಾಣಿಗಳ ಮಾಂಸ, ಮನುಷ್ಯನ ಮಲ ಮುಂತಾದವುಗಳನ್ನು ತಿಂದು ಬದುಕುತ್ತವೆ.

ಸಣ್ಣ ಹಕ್ಕಿ, ಹಾವು, ಮೊಲ, ಇಲಿಗಳನ್ನು ಬೇಟೆಯಾಡಬಲ್ಲದು. ಸಾಮಾನ್ಯವಾಗಿ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ದೊಡ್ಡ ಮರ ಅಥವಾ ಹಳೆ ಕಟ್ಟಡಗಳಲ್ಲಿ ಕಡ್ಡಿಗಳನ್ನಿಟ್ಟು ಮಾಡಿದ ಗೂಡಿನಲ್ಲಿ ಕೇವಲ ಎರಡು ಕೆಂಪು-ಮಿಶ್ರಿತ ಬಿಳಿ ಮೊಟ್ಟೆಗಳನ್ನಿಡುತ್ತವೆ. ಮರಿಗಳ ಪೋಷಣೆ ತಂದೆ-ತಾಯಿಯರಿಬ್ಬರದು. ಈ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಭಾರತದಲ್ಲಿ ಪಶುಗಳಿಗೆ ನೀಡುವ ಡೈಕ್ಲೊಫೆನಿಕ್ ಔಷಧಿಯುಕ್ತ ಮಾಂಸಗಳನ್ನು ತಿನ್ನುವ ಕಾರಣದಿಂದ ಇವುಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಯೂರೋಪ್ ಮತ್ತು ಆಫ್ರಿಕಾಗಳಲ್ಲಿ ಸಹ ಇವುಗಳ ಸಂಖ್ಯೆ ಇಳಿಮುಖವಾಗಿದೆ. ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್‌ವೇಷನ್ ಆಫ್ ನೇಚರ್ ಪ್ರಕಾರ ಅಳಿವಿನಂಚಿನಲ್ಲಿರುವ ಪಕ್ಷಿ ಇದು. ಇಂತಹ ಅಪರೂಪದ ಹಕ್ಕಿ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ದಾಖಲಾಗಿರುವುದು ಸಂತೋಷದ ಸಂಗತಿ. ಈ ಹಕ್ಕಿ ದಾವಣಗೆರೆಯಲ್ಲಿಯೇ ಎಷ್ಟು ಸಂಖ್ಯೆಯಲ್ಲಿವೆ? ಸಂತಾನೋತ್ಪತ್ತಿ ಮಾಡುತ್ತಿದೆಯೇ? ಎಂಬುದರ ಅಧ್ಯಯನವಾಗಬೇಕಿದೆ. ದಾವಣಗೆರೆ ಅರಣ್ಯ ಇಲಾಖೆ ಇದರ ಅವಾಸ ಸ್ಥಳಗಳನ್ನು ಗುರುತಿಸಿ ಸಂರಕ್ಷಣೆಗೆ ಬೇಕಾದ ಕಾರ್ಯಗಳನ್ನು ಅತಿ ತುರ್ತಾಗಿ ಮಾಡಬೇಕಿದೆ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಚಿತ್ರ: ಲೇಖಕರದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT