ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಓದುವ ಹವ್ಯಾಸ ಕುಂಠಿತ

‘ಒಂಟಿ ಪಯಣ’, ‘ಒಡಲ ಹನಿಗಳು’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುರೇಶ್‌
Last Updated 4 ಆಗಸ್ಟ್ 2019, 19:35 IST
ಅಕ್ಷರ ಗಾತ್ರ

ದಾವಣಗೆರೆ: ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಎಲ್ಲದಕ್ಕೂ ಆನ್‌ಲೈನ್‌ ಅನ್ನು ಅವಲಂಬಿಸಿದ್ದಾರೆ ಎಂದು ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್‌ ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಅಣಬೇರು ಭಾವಸಿರಿ ಪ್ರಕಾಶನ, ಜನಮಿಡಿತ ಪತ್ರಿಕೆ ಭಾನುವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಅಣಬೇರು ತಾರೇಶ್‌ ಕೆ.ಪಿ. ಅವರ ಕವನ ಸಂಕಲನ ‘ಒಂಟಿ ಪಯಣ’ ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ ಅವರ ಚುಟುಕು ಸಂಕಲನ ‘ಒಡಲ ಹನಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಠ್ಯದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಚಟುವಟಿಕೆ ನೀಡಿದರೆ ಮಕ್ಕಳು ಸೈಬರ್‌ ಸೆಂಟರ್‌ಗೆ ಹೋಗಿ ಡೌನ್‌ಲೋಡ್‌ ಮಾಡಿಕೊಂಡು ಬರುತ್ತಾರೆ. ಪಠ್ಯದಲ್ಲಿ ಹುಡುಕುವುದಿಲ್ಲ. ಇಂಥ ಕಾರ್ಯಕ್ರಮಗಳಿಗೆ ಮಕ್ಕಳನ್ನೂ ಕರೆ ತರಬೇಕು. ಹೆತ್ತವರೂ ಓದಬೇಕು. ಆಗ ಮಕ್ಕಳು ಓದಲು ಕಲಿಯುತ್ತಾರೆ ಎಂದು ಸಲಹೆ ನೀಡಿದರು.

ಡಾ. ಆನಂದ ಋಗ್ವೇದಿ ‘ಒಂಟಿ ಪಯಣ’ ಕೃತಿ ಪರಿಚಯ ಮಾಡಿ, ‘ಮೂರು ಮುಖ್ಯ ವಿಷಯಗಳನ್ನು ಇಟ್ಟುಕೊಂಡು ಕವಿತೆಗಳು ಇಲ್ಲಿ ರಚನೆಗೊಂಡಿವೆ. ಸಮಾಜದಲ್ಲಿ ಇರುವ ಮಾನವೀಯತೆಯ ಕೊರತೆಯನ್ನು ಕಳವಳದಿಂದ ಕವಿ ಗುರುತಿಸಿದ್ದಾರೆ. ಭಾವನಾತ್ಮಕವಾಗಿ ಇರಬೇಕಾದ ಪ್ರೀತಿಯನ್ನು ವ್ಯಾವಾಹಾರಿಕವಾಗಿ ನೋಡುತ್ತಿರುವುದರಿಂದಲೇ ಬಹಳ ಬಾರಿ ಪ್ರತಿ ಬಹು ಸಮಯ ಉಳಿಯುತ್ತಿಲ್ಲ. ಬೇಗನೇ ಕಡಿದು ಹೋಗುತ್ತಿದೆ ಎಂಬುದನ್ನು ತೋರಿಸಿದ್ದಾರೆ. ನಮ್ಮ ಸುತ್ತಮುತ್ತ ಎಲ್ಲರೂ ಇರುತ್ತಾರೆ. ಆದರೂ ನಾವು ಒಂಟಿಯಾಗಿರುತ್ತೇವೆ. ಸಾಮುದಾಯಿಕವಾಗಿ ಬದುಕುತ್ತಿರುವುದಿಲ್ಲ. ಇದು ವಾಸ್ತವ ಕೂಡ. ಇದನ್ನು ಕವಿ ಪ್ರತಿಬಿಂಬಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಪ್ರೀತಿಯನ್ನು ಹಂಬಲಿಸುವವರು ತಾವು ನೊಂದುಕೊಂಡವರು ಅಂದುಕೊಳ್ಳುತ್ತಾರೆ. ಆದರೆ, ಪ್ರೀತಿಯಿಂದ ಕಾಣುವವರು ನೊಂದವರನ್ನು ಗುರುತಿಸುತ್ತಾರೆ. ನಮ್ಮೆಲ್ಲರಲ್ಲಿ ಅತಿಯಾದ ನಿರೀಕ್ಷೆಗಳು ಇರುತ್ತವೆ. ಆದರೆ ಬೇರೊಬ್ಬರ ನಿರೀಕ್ಷೆ ಈಡೇರಿಸುವ ಮನಸ್ಸು ನಮ್ಮದಾಗಿರುವುದಿಲ್ಲ’ ಎಂದು ತಿಳಿಸಿದರು.

ಬಸವರಾಜ್‌ ಹನಮಲಿ ಅವರು ‘ಒಡಲ ಹನಿಗಳು’ ಕೃತಿ ಪರಿಚರ ಮಾಡಿ, ‘ಚುಟುಕು ಅಂದರೆ ಕುಟುಕುವಂತಿರಬೇಕು. ಈ ಕೃತಿಯಲ್ಲಿ ನಮ್ಮ ಮನಸ್ಸನ್ನು ಕವಿ ಕುಟುಕುತ್ತಾರೆ. ತನ್ನ ಪ್ರಕೃತಿ, ಬದುಕು ಮತ್ತು ಸಮಾಜದ ಓರೆಕೋರೆಗಳನ್ನು ಚುಟುಕುಗಳ ಮೂಲಕ ತೋರಿಸಿದ್ದಾರೆ’ ಎಂದರು.

‘ಕೃಷಿಗೆ ವಿಷ ಹಾಕಿ, ಆಹಾರವನ್ನೂ ವಿಷ ಮಾಡಿ ತಿನ್ನುವುದರ ಬಗ್ಗೆ ಮಾರ್ಮಿಕವಾಗಿ ಕವಿ ತಿಳಿಸಿದ್ದಾರೆ. ಕವಿಗಳು ಯಾವಾಗಲೂ ಜಗತ್ತಿಗೆ ಒಳಿತು ಮಾಡುವ ಮಾತುಗಳನ್ನಾಡುತ್ತಾರೆ. ಈ ಕೃತಿಯೂ ಅದನ್ನೇ ಮಾಡಿದೆ’ ಎಂದು ವಿವರಿಸಿದರು.

ಜನಮಿಡಿತ ಸಂಪಾದಕ ಜಿ.ಎಂ.ಆರ್‌. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಚಂದ್ರಿಕಾ ಜಗನ್ನಾಥ್‌ ಮತ್ತು ಗೀತಾ ಭರಮಸಾಗರ ಕೃತಿಕಾರರನ್ನು ಪರಿಚಯಿಸಿದರು.ಭಾವಸಿರಿ ಪ್ರಕಾಶಕಿ ಗಂಗಮ್ಮ ಪರಮೇಶ್ವರಪ್ಪ, ಸಾಫ್ಟ್‌ವೇರ್‌ ಎಂಜಿನಿಯರ್‌ ಶಿವಬಸವ ಕೆ.ಕೆ. ಕಕ್ಕರಗೊಳ್ಳ, ವಿನೋದಮ್ಮ ಅವರೂ ಉಪಸ್ಥಿತರಿದ್ದರು.

ಅಮುಭಾವಜೀವಿ ಸ್ವಾಗತಿಸಿದರು. ರೇಖಾ ನಾಗರಾಜ್‌ ವಂದಿಸಿದರು. ಸುನೀತಾ ಪ್ರಕಾಶ್‌ ಮತ್ತು ಎನ್.ಪಿ. ಅರವಿಂದ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT