ಬುಧವಾರ, ಸೆಪ್ಟೆಂಬರ್ 18, 2019
25 °C
ಶಿಕ್ಷಕರ ದಿನಾಚರಣೆ, ಅಭಿನಂದನಾ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಸ್ವಾಮೀಜಿ

ಅಂತರಂಗದೊಳಗಿರುವವನೇ ನಿಜವಾದ ಗುರು

Published:
Updated:
Prajavani

ದಾವಣಗೆರೆ: ನಿಜವಾದ ಗುರು ಹೊರಗಿರುವುದಿಲ್ಲ. ನಮ್ಮೊಳಗೇ ಇರುತ್ತಾನೆ. ಒಳಗೆ ಏನಿಲ್ಲದಿದ್ದರೆ ಹೊರಗಿನ ಗುರು ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮೊಳಗಿರುವುದನ್ನೇ ಜಾಗೃತಗೊಳಿಸುವ, ಉದ್ದೀಪನಗೊಳಿಸುವ ಕೆಲಸವಷ್ಟೇ ಶಿಕ್ಷಣದಿಂದ ಆಗುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅನುಭವ ಮಂಟಪದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ (ಎಂಎಂ ಬಿಎಡ್‌), ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಎಂಎಂ ಬಿಎಡ್‌ ಕಾಲೇಜಿನಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೊರಗೆ ಬೆಳಕು ಇರುವಂತೆ ಒಳಗೂ ಬೆಳಕು ಇರುತ್ತದೆ. ಅದನ್ನು ಅರಿತಿರುವುದಿಲ್ಲ. ಅರಿವಿಲ್ಲದ ಕತ್ತಲೆಯನ್ನು ಕಳೆಯುವ ಕೆಲಸವನ್ನು ಶರಣರು 12ನೇ ಶತಮಾನದಲ್ಲಿ ಮಾಡಿದರು. ಗುಡಿಗೆ ಹೋದಾಗ ಸಲ್ಲದನ್ನು ಮಾತನಾಡಬಾರದು, ಶುಚಿಯಾಗಿರಬೇಕು ಎಂದೆಲ್ಲ ಎಚ್ಚರದಿಂದ ಇರುತ್ತೇವೆ. ದೇಹವೇ ಗುಡಿಯಾದರೆ ಯಾವಾಗಲೂ ನಾವು ಆ ಎಚ್ಚರದಿಂದ ಇರಲು ಸಾಧ್ಯ. ಅದಕ್ಕಾಗಿಯೇ ಶರಣರು ದೇಹವೇ ದೇಗುಲ ಎಂದಿದ್ದಾರೆ’ ಎಂದು ವಿವರಿಸಿದರು.

ಉದ್ಯೋಗಕ್ಕಾಗಿ ಶಿಕ್ಷಣ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿ ಇದೆ. ಶಿಕ್ಷಣ ಇರುವುದು ನಮ್ಮ ವಿಕಾಸಕ್ಕಾಗಿ, ಬದುಕು ಎತ್ತರಗೊಳಿಸುವುದಕ್ಕಾಗಿ, ಒಳಗಿನ ಅಜ್ಞಾನವನ್ನು ಕಳೆಯುವುದಕ್ಕಾಗಿ, ಜಂಗಮ ತತ್ವ ಪಾಲಿಸುವುದಕ್ಕಾಗಿ ಎಂಬ ಅರಿವು ಇರಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮನೋಬಲವನ್ನು ತುಂಬಬೇಕು. ಆಗ ಕನಸಿನ ಉದ್ಯೋಗ ಸಿಗದೇ ಇದ್ದರೂ ಕೃಷಿ, ವ್ಯಾಪಾರ ಏನಾದರೂ ಮಾಡಿ ನೆಮ್ಮದಿಯಿಂದ ಬದುಕಬಲ್ಲ ಎಂದರು.

ವೈಭವದ, ಶ್ರೀಮಂತಿಕೆಯ ಬದುಕಿಗೆ ಮಾರು ಹೋಗಿದ್ದರಿಂದ ಬದುಕು ನರಕವಾಗಿದೆ. ಬದುಕು ಸರಳವಾದರೆ ನೆಮ್ಮದಿ ಇರುತ್ತದೆ. ನಿವೃತ್ತಿಗೆ ಒಂದು ವಯಸ್ಸು ನಿಗದಿ ಮಾಡಿರುತ್ತಾರೆ. ಆದರೆ, ನಿವೃತ್ತಿ, ಪ್ರವೃತ್ತಿಗಳಿಗೆ ವಯಸ್ಸನ್ನು ನಿಗದಿ ಮಾಡಲಾಗುವುದಿಲ್ಲ. ಕೆಲವರು 40ನೇ ವಯಸ್ಸಿಗೆ ಸೋಮಾರಿಗಳಾಗುತ್ತಾರೆ, ಚಟುವಟಿಕೆ ನಿಲ್ಲಿಸುತ್ತಾರೆ, ಜೋಭದ್ರಗೇಡಿಗಳಾಗಿರುತ್ತಾರೆ. ಇನ್ನು ಕೆಲವರು 80 ವರ್ಷ ದಾಟಿದರೂ ಕ್ರಿಯಾಶೀಲರಾಗಿರುತ್ತಾರೆ. ಕ್ರಿಯಾಶೀಲತೆ ನಿಂತರೆ ನಿವೃತ್ತಿಯಾದಂತೆ ಎಂದು ತಿಳಿಸಿದರು.

ಆಕರ್ಷಕ ಕಟ್ಟಡಗಳಿರುವ, ಹೆಚ್ಚು ಡೊನೇಶನ್‌ ಇರುವ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವುದಲ್ಲ. ಹೊಸತನವನ್ನು ನಿರಂತರ ಕಲಿಯುವ ಶ್ರೇಷ್ಠ ಶಿಕ್ಷಕ ಇರುವ ಶಾಲೆಯಲ್ಲಿಯೇ ಉತ್ತಮ ಶಿಕ್ಷಣ ದೊರೆಯುವುದು ಎಂದು ವಿಶ್ಲೇಷಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಮಾತನಾಡಿ, ‘ಸಮಸ್ಯೆಗಳನ್ನು ಎದುರಿಸುವ ಶಿಕ್ಷಣ ಅಗತ್ಯ. ಸಮಸ್ಯೆಗಳನ್ನು ಮಾರುವೇಷದಲ್ಲಿರುವ ಅವಕಾಶಗಳು ಎಂದು ತಿಳಿದುಕೊಳ್ಳಬೇಕು. ಜಾಗತೀಕರಣ, ಖಾಸಗೀಕರಣ, ಕಾರ್ಪೊರೇಟ್‌ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಣ ಬದಲಾಗುತ್ತಿದೆ. ಇದು ಅಪಾಯಕಾರಿ’ ಎಂದು ವಿಶ್ಲೇಷಿಸಿದರು.

ನಿವೃತ್ತ ಪ್ರಾಂಶುಪಾಲ ಡಾ.ಎಚ್‌.ವಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ಟಿ. ನಾಗರಾಜ ನಾಯ್ಕ್‌, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರಾದ ಕೆ.ಆರ್‌. ಬಸಪ್ಪ, ಶರಣಪ್ಪ, ಎಂ. ರತ್ನಮ್ಮ, ಉತ್ತಮ ಶಿಕ್ಷಕರಾದ ಗುರುಸಿದ್ಧಸ್ವಾಮಿ, ರತ್ನಮ್ಮ ಸಾಲಿಮಠ್, ಜಗದೀಶ ಬಳೆಗಾರ್‌, ಸುಹೇಬ್‌ ಬೇಗ್‌ ಅವರನ್ನು ಸನ್ಮಾನಿಸಲಾಯಿತು.

ಜಿ.ಎಂ. ಶಶಿಕಲಾ ಸ್ವಾಗತಿಸಿದರು. ಹಾಲೇಶಪ್ಪ ಟಿ. ಸನ್ಮಾನ ನಡೆಸಿಕೊಟ್ಟರು. ಡಾ. ಸಂತೋಷ ಕುಮಾರ್‌ ವಂದಿಸಿದರು. ಎನ್‌.ಆರ್‌. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Post Comments (+)