ಭಾನುವಾರ, ನವೆಂಬರ್ 17, 2019
23 °C
ಆರ್ಥಿಕ ಸಂಕಷ್ಟ: ಶೇ 50ರಷ್ಟು ಉತ್ಪಾದನೆ ಕಡಿತ

ಜವಳಿ ಉದ್ಯಮದ ಮೇಲೆ ಕರಿನೆರಳು

Published:
Updated:
Prajavani

ದಾವಣಗೆರೆ: ಆರ್ಥಿಕ ಹಿಂಜರಿತ ಜಿಲ್ಲೆಯ ಜವಳಿ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯ 3 ಜವಳಿ ಉದ್ಯಮ ಘಟಕಗಳು ಸದ್ದಿಲ್ಲದೆ ಬಾಗಿಲು ಮುಚ್ಚಿವೆ. ಕೆಲ ಘಟಕಗಳಲ್ಲಿ ಎರಡು ಪಾಳಿ ಬದಲು ಒಂದೇ ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ‘ಮಾಂಚೆಸ್ಟರ್‌ ಆಫ್‌ ಕರ್ನಾಟಕ’ ಆಗಿದ್ದ ಜಿಲ್ಲೆ ಜವಳಿ ಉದ್ಯಮದಿಂದಲೇ ಹೆಸರುವಾಸಿ. ಈಗಲೂ ಜವಳಿಗೆ ನಗರ ಹೆಸರುವಾಸಿ. ಇಲ್ಲಿಂದಲೇ ದೊಡ್ಡಬಳ್ಳಾಪುರ, ಬೆಂಗಳೂರು, ಕೊಲ್ಕತ್ತ ಸೇರಿ ಹಲವು ನಗರಗಳಿಗೆ ಬಟ್ಟೆ ರವಾನೆಯಾಗುತ್ತದೆ. ಅತಿ ಹೆಚ್ಚು ಉದ್ಯೋಗಿಗಳಿಗೆ ಬದುಕು ನೀಡಿರುವ ವಲಯ ಇದು. ಬಡ, ಮಧ್ಯಮ ವರ್ಗದ ಮಹಿಳೆಯರು, ಉನ್ನತ ವ್ಯಾಸಂಗ ಮಾಡಲಾಗದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ ನೂರಾರು ಯುವಕರಿಗೆ ಉದ್ಯೋಗ ನೀಡಿದೆ ಈ ಉದ್ಯಮ.

ಈಗ ಆರ್ಥಿಕ ಸಂಕಷ್ಟ ಈ ಉದ್ಯಮದ ಮೇಲೂ ಕರಿನೆರಳು ಬೀರಿದೆ. ಇದರಿಂದ ನಗರದಲ್ಲಿ 3 ಗಾರ್ಮೆಂಟ್ಸ್‌ ಬಾಗಿಲು ಮುಚ್ಚಿವೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಇದರಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಶೇ 50ರಷ್ಟು ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ. ಕೆಲ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೆಲವರಿಗೆ ರಜೆ ಮಾಡಿ ಕೆಲವು ದಿನಗಳ ಕಾಲ ಕೆಲಸಕ್ಕೆ ಬರುವುದು ಬೇಡ ಎನ್ನುವ ಮೂಲಕ ಪರೋಕ್ಷವಾಗಿ ಉದ್ಯೋಗದಿಂದ ವಜಾ ಮಾಡುವ ಮುನ್ಸೂಚನೆ ನೀಡಿದ್ದಾರೆ. ಡಬಲ್‌ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಒಂದೇ ಶಿಫ್ಟ್‌ನಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಸಿದ್ಧ ಉಡುಪುಗಳ ತಯಾರಿಕೆ ನಿಂತಿದೆ.

ಕಳೆದ ಒಂದು ತಿಂಗಳಿನಿಂದ ಹಲವರು ಕೆಲಸ ಕಳೆದುಕೊಂಡಿದ್ದರೆ, ಮಾಲೀಕರು ಉದ್ಯಮ ನಡೆಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗಾರ್ಮೆಂಟ್ಸ್‌ಗಳನ್ನು ಮುಚ್ಚಿರುವುದನ್ನು ಬಹಿರಂಗಪಡಿಸಲೂ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ನಗರದಲ್ಲಿ ಮೂರು ಗಾರ್ಮೆಂಟ್ಸ್‌ಗಳನ್ನು ಮುಚ್ಚಲಾಗಿದೆ. ಕೆಲವು ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಮೂರು ತಿಂಗಳವರೆಗೆ ಹೇಗೋ ಉದ್ಯಮ ನಿಭಾಯಿಸಬಹುದು. ಮುಂದೇನು ಎಂಬ ಪ್ರಶ್ನೆ ಬಹುತೇಕ ಉದ್ಯಮಿಗಳನ್ನು ಕಾಡುತ್ತಿದೆ ಎಂದು ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಸ್ಥೆ)ದ ಮಾಜಿ ನಿರ್ದೇಶಕ ಡಿ.ಶೇಷಾಚಲ ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ಹೀಗೆ ಮುಂದುವರಿದರೆ ಕಷ್ಟ. ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಇಲಾಖೆಗಳ ಸಮವಸ್ತ್ರ ಉತ್ಪಾದಿಸುವ ಗುತ್ತಿಗೆಯನ್ನು ನೀಡಿದರೆ ಜವಳಿ ಉದ್ಯಮ ಅಭಿವೃದ್ಧಿ ಕಾಣುತ್ತದೆ. ಆದರೆ ಇಂತಹ ಸಮಯದಲ್ಲಿ ಗುತ್ತಿಗೆ ನೀಡದೆ ಕೊನೆಕ್ಷಣದಲ್ಲಿ ನೀಡುತ್ತಾರೆ. ಆಗ ಕಷ್ಟ. ಇದನ್ನೇ ನೆಪ ಮಾಡಿಕೊಂಡು ಬೇರೆ ರಾಜ್ಯದ ಕಂಪನಿಗಳಿಗೆ ಗುತ್ತಿಗೆ ನೀಡುತ್ತಾರೆ. ಅವರು ಕಳಪೆ ಗುಣಮಟ್ಟದ ಬಟ್ಟೆ ನೀಡುತ್ತಾರೆ ಎಂದು ದೂರುತ್ತಾರೆ ಅವರು.

ಪ್ರತಿಕ್ರಿಯಿಸಿ (+)