ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೊಂದಲ ಮೂಡಿಸಿದ ರೇಣುಕಾಚಾರ್ಯ ಹೇಳಿಕೆ: ವೀರೇಶ್ ಹನಗವಾಡಿ

Published 12 ಸೆಪ್ಟೆಂಬರ್ 2023, 5:27 IST
Last Updated 12 ಸೆಪ್ಟೆಂಬರ್ 2023, 5:27 IST
ಅಕ್ಷರ ಗಾತ್ರ

ದಾವಣಗೆರೆ: ‘ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ದ್ವಂದ್ವ ಹೇಳಿಕೆಗಳು ಬಿಜೆಪಿಗೆ ಕಪ್ಪು ಚುಕ್ಕಿ ಇದ್ದಂತೆ. ಅದರಿಂದ ಪಕ್ಷದಲ್ಲಿ  ಗೊಂದಲ ಉಂಟಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು.

‘ಪಕ್ಷದಲ್ಲಿ ತಾವೊಬ್ಬರೇ ಪ್ರಾಮಾಣಿಕರು ಉಳಿದವ ರೆಲ್ಲಾ ಅಪ್ರಾಮಾಣಿಕರು ಎಂಬಂತೆ ರೇಣುಕಾಚಾರ್ಯ ಬಿಂಬಿಸುತ್ತಿದ್ದಾರೆ. ನಾಯಕರ ಬಗ್ಗೆ ಹಾದಿಬೀದಿಗಳಲ್ಲಿ ಮಾತನಾಡಿ ಪಕ್ಷಕ್ಕೆ ಮುಜುಗರ ತಂದೊಡ್ಡುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರೊಬ್ಬ ಸೂರ್ಯ ಇದ್ದಂತೆ. ಅವರಿಗೆ ರೇಣುಕಾಚಾರ್ಯ ಟಾರ್ಚ್ ಹಿಡಿಯಲು ಹೋಗುತ್ತಾರೆ. ಅವರ ನೆರಳಲ್ಲಿಯೇ ನಾವೆಲ್ಲಾ ಬದುಕುತ್ತಿದ್ದೇವೆ. ಮುಖ್ಯಮಂತ್ರಿ ಕುರ್ಚಿಯಿಂದ ಅವರನ್ನು ಕೆಳಗಿಳಿಸಿದಾಗ  ಶಾಸಕ ಸ್ಥಾನಕ್ಕೆ ರಾಜೀನಾಮೆ ಪ್ರತಿಭಟಿಸಬೇಕಿತ್ತು. ಆದರೆ, ರೇಣುಕಾಚಾರ್ಯ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಜಗದೀಶ್ ಶೆಟ್ಟರ್ ವಿರುದ್ಧ ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದರು. ಈಶ್ವರಪ್ಪ ವಿರುದ್ಧವೂ ವಾಗ್ದಾಳಿ ಮಾಡಿದ್ದವರು ಈಗ ಅವರಿಬ್ಬರ ಮೇಲೆ ಕನಿಕರ ಬಂದಿದೆ’ ಎಂದು ಕುಟುಕಿದರು.

‘ಗುರುಸಿದ್ದನಗೌಡ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದರ ಬಗ್ಗೆ ಸಾಕ್ಷಿಗಳಿವೆ. ಪಕ್ಷ ವಿರೋಧಿ ಚಟುವಟಿಕೆ ಕಾರಣ ಅವರನ್ನು ಉಚ್ಚಾಟಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ವಿಧಾನಸಭಾ ಚುನಾವಣೆಯಲ್ಲಿ ಗುರುಸಿದ್ದನಗೌಡ ವಿರೋಧ ಪಕ್ಷಗಳ ಜೊತೆ ಪ್ರಚಾರ ನಡೆಸಿರುವುದಕ್ಕೆ ದಾಖಲೆಗಳಿವೆ. ಅವರ ವಿರುದ್ಧ ಯಾವುದೇ ದ್ವೇಷ ಇಲ್ಲ. ಅವರ ಉಚ್ಚಾಟನೆಗೂ ಸಂಸದ ಸಿದ್ದೇಶ್ವರ ಅವರಿಗೂ ಯಾವುದೇ ಸಂಬಂಧವಿಲ್ಲ’ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಡಿ.ಎಸ್. ಜಗದೀಶ್, ಮಂಜಪ್ಪ, ಯಶವಂತರಾವ್ ಜಾಧವ್, ಸೋಗಿ ಶಾಂತಕುಮಾರ್, ಶಾಂತರಾಜ್ ಪಾಟೀಲ್, ಮಹೇಶ್ ಪಲ್ಲಾಗಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT