ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರದ ಮೂಲಕ ಧರ್ಮದ ಪುನರುತ್ಥಾನ ಸಂಕಲ್ಪ: ಸಿ.ಟಿ.ರವಿ

Published 14 ಜನವರಿ 2024, 4:48 IST
Last Updated 14 ಜನವರಿ 2024, 4:48 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಷ್ಟ್ರಭಕ್ತಿಯ ಒಂದೊಂದು ಮತವೂ ರಾಮಮಂದಿರ ನಿರ್ಮಾಣಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ನಾವು ಸ್ವಲ್ಪ ಮೈಮರೆತರೂ ರಾಷ್ಟ್ರ ನಾಶವಾಗುತ್ತದೆ. ಇದನ್ನು ಮನಗೊಂಡು ದೇಶವನ್ನು ಸಂರಕ್ಷಿಸಲು ರಾಷ್ಟ್ರಭಕ್ತಿಯ ಮತವನ್ನು ಜನರು ನೀಡಬೇಕು’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಬಳಗ ಮತ್ತು ಜಿಲ್ಲಾ ಬಿಜೆಪಿ ಹಿರಿಯ ನಿಷ್ಠಾವಂತ ಕಾರ್ಯಕರ್ತರ ವೇದಿಕೆವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವೊಮ್ಮೆ ರಾವಣ ಮನಸ್ಥಿತಿಯ ಜನರು ರಾಮನ ವೇಷ ಹಾಕಿಕೊಂಡು ಮೋಸ ಮಾಡಲು ಬರುತ್ತಾರೆ. ಇವರ ಬಗ್ಗೆ ಎಚ್ಚರದಿಂದ ಇರಬೇಕು. ನೀವು ಚಲಾಯಿಸುವ ಒಂದೊಂದು ಮತವು ರಾಷ್ಟ್ರಭಕ್ತಿಗೆ ಮೀಸಲು. ಜಾತಿ, ಹಣಕ್ಕಾಗಿ ಅಲ್ಲ. ದೇಶಕ್ಕಾಗಿ ಓಟು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಮತದ ಮೂಲಕ ದೇಶದ ಪ್ರಗತೀಕರಣ ಮಾಡಬೇಕಿದೆ’ ಎಂದು ಹೇಳಿದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೆಂದರೆ ಕೇವಲ ರಾಮನನ್ನು ಪ್ರತಿಷ್ಠಾಪನೆ ಮಾಡುವುದಲ್ಲ. ರಾಮಮಂದಿರದ ಮೂಲಕ ಧರ್ಮದ ಪುನರುತ್ಥಾನದ ಸಂಕಲ್ಪ ತೊಡಬೇಕಾಗಿದೆ. ರಾಮನಿಂದ ಮಾತ್ರ ಶಿಷ್ಟರಿಗೆ ರಕ್ಷಣೆ ಸಿಗುತ್ತದೆ. ಹಾಗಾಗಿ, ರಾಮನ ಪ್ರತಿಷ್ಠಾಪನೆ ಧರ್ಮದ ಸಂಕಲ್ಪ’ ಎಂದರು.

‘ಹಿಂದೂ ಧರ್ಮ ಮತ್ತು ದೇವರುಗಳ ಮೇಲೆ ಅನೇಕ ದಾಳಿಗಳಾಗಿವೆ. ಭಾರತದ ಸನಾತನ ಸಂಸ್ಕೃತಿ ನಾಶ ಮಾಡಲು ಬಂದವರು ನಾಶವಾದರು’ ಎಂದು ಹೇಳಿದರು.

‘ಹಿಂದೆ ರಾಜಪ್ರಭುತ್ವ ಇತ್ತು. ಈಗಿರುವುದು ಪ್ರಜಾಪ್ರಭುತ್ವ. ರಾಮರಾಜ್ಯದ ಆಶಯದಂತೆ ಜನರಿಗೆ ಈಗ ಬೇಕಿರುವುದು ನಿರ್ಭಯವಾಗಿ ಬದುಕುವುದು. ರಾಮಮಂದಿರದಲ್ಲಿ ರಾಮ ನೆಲೆಸುತ್ತಿರುವುದರಿಂದ ನಮ್ಮ ಮನೆ-ಮನಗಳಲ್ಲಿ ಜಾತಿ ಬೇಧ ತೊರೆಯುವ ಸಂಕಲ್ಪ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದರು. ಆದರೆ, ಅವರೆಂದಿಗೂ ತೆಗೆದುಕೊಳ್ಳದೆ ಕೆಲಸ ಮಾಡಿರುವುದರಿಂದಲೇ ಅವರು ಸೋಲುಣ್ಣಬೇಕಾಯಿತು. ಆ ಸೋಲಿನಿಂದ ರಾಷ್ಟ್ರದ ಅಭಿವೃದ್ಧಿಗೆ ಅಂದು ಹಿನ್ನಡೆಯಾಯಿತು. ಅವರೊಬ್ಬ ಅಜಾತಶತ್ರುವಾಗಿದ್ದರು’ ಎಂದು ಸ್ಮರಿಸಿದರು.

‘ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ವಾಲ್ಮೀಕಿ, ಅಂಬೇಡ್ಕರ್ ಅವರ ಹೆಸರಿನಲ್ಲಿ ಲಕ್ಷಾಂತರ ಬಡಜನರಿಗೆ ಸೂರು ಕಲ್ಪಿಸಿದರು. ದಾವಣಗೆರೆಯಲ್ಲೂ 4ರಿಂದ 5 ಸಾವಿರ ಜನರಿಗೆ ಸೂರು ಭಾಗ್ಯ ಲಭಿಸಿದೆ. ಗ್ರಾಮಸಡಕ್ ಯೋಜನೆಯಡಿ ರೈತರಿಗೆ ರಸ್ತೆಯ ವ್ಯವಸ್ಥೆ ಕಲ್ಪಿಸಿದರು. ನದಿ ಜೋಡಣೆ ಮಹದಾಶಯವನ್ನು ಹೊಂದಿದ್ದ ಅಟಲ್‌ಜೀ ಕನಸು ಕನಸಾಗಿಯೇ ಉಳಿಯಿತು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಮರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಜಿ.ಕೆ. ಸುರೇಶ್ ಉಪನ್ಯಾಸ ನೀಡಿದರು. ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್, ಬಿಜೆಪಿ ಮುಖಂಡ ಕೆ.ಬಿ. ಕೊಟ್ರೇಶ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಜಯಪ್ರಕಾಶ್ ಅಂಬರ್‌ಕರ್, ಯಶವಂತರಾವ್ ಜಾಧವ್ ಮತ್ತಿತರರು ಇದ್ದರು.

ಶ್ರೀರಾಮ ರಥಯಾತ್ರೆ ಸಂದರ್ಭ ಹುತಾತ್ಮರಾದವರು ಹಾಗೂ ಜೈಲಿಗೆ ಹೋಗಿ ಬಂದವರು ಹಾಗೂ ಕುಟುಂಬದವರಿಗೆ ಗೌರವಧನ ಸಮರ್ಪಿಸಲಾಯಿತು.

ಜೈಲಿಗೆ ಹೋದವರಿಗೆ ಏನು ಮಾಡಿದಿರಿ?

‘1984ರಲ್ಲಿ ರಾಮಮಂದಿರ ರಥಯಾತ್ರೆಯ ಸಂದರ್ಭ ಗುಂಡಿಗೆ ಬಲಿಯಾದವರಿಗೆ ಏನು ಮಾಡಿದ್ದೀರಿ. ಇವತ್ತು ಜೈಲಿಗೆ ಹೋದವರನ್ನು ವೇದಿಕೆಯಲ್ಲಷ್ಟೇ ಸನ್ಮಾನ ಮಾಡುತ್ತೀರಿ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೀರಿ. ಒಂದು ನಿವೇಶನವನ್ನೂ ನೀಡಿಲ್ಲ’ ಎಂದು ಬಿಜೆಪಿ ಮುಖಂಡ ಮಟ್ಟಿಕಲ್ ವೀರಭದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT