ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕಾದ ಮುಂಗಾರು: ಮೈದುಂಬಿದ ತುಂಗಭದ್ರೆ

ನದಿ ತೀರದಲ್ಲಿವೆ ಹರಿಹರ ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು
Last Updated 7 ಜುಲೈ 2022, 3:54 IST
ಅಕ್ಷರ ಗಾತ್ರ

ಹರಿಹರ: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಜಿಲ್ಲೆಯ ಜೀವ ನದಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನೋಡುಗರ ಹೃನ್ಮನ ಸೆಳೆಯುತ್ತಿದೆ.

ಹಿಂಗಾರಿನಲ್ಲಿ ನಿರೀಕ್ಷೆ ಮೀರಿ ಮಳೆಯಾದಾಗಲೂ ಈ ನದಿ ಮೈದುಂಬಿ ಹರಿದಿತ್ತು. ಮುಂಗಾರು ಆರಂಭದ ತಿಂಗಳಾದ ಜೂನ್‌ನಲ್ಲಿ ಮಳೆ ಸರಿಯಾಗಿ ಬಾರದೇ ಇದ್ದಿದ್ದರಿಂದ ನೀರಿನ ಹರಿವು ಹೆಚ್ಚಾಗಿರಲಿಲ್ಲ. ನಾಲ್ಕೈದು ದಿನಗಳಿಂದ ನದಿಯ ಅಚ್ಚುಕಟ್ಟು ಪ್ರದೇಶವಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚುರುಕಾಗಿದೆ. ಇದರ ಪರಿಣಾಮ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ನದಿ ತುಂಬಿ ಹರಿಯುತ್ತಿದೆ.

ವೈಯಾರ ಮನಮೋಹಕ: ಹೊನ್ನಾಳಿ, ರಾಣೆಬೆನ್ನೂರು ಕಡೆಯಿಂದ ಹರಿಹರಕ್ಕೆ ನದಿ ಪ್ರವೇಶಿಸುತ್ತದೆ. ನಗರದಲ್ಲಿ ಪಶ್ಚಿಮ ಭಾಗದಿಂದ ಉತ್ತರದ ಕಡೆಗೆ ದಿಕ್ಕು ಬದಲಿಸುವ ನದಿಯ ಹರಿವು ಎಲ್ಲರ ಕೈಬೀಸಿ ಕರೆಯುತ್ತಿದೆ. ಮುಂದೆ ಹೊಸ ಹಾಗೂ ಹಳೆ ಸೇತುವೆ, ನಂತರ ರೈಲ್ವೆ ಸೇತುವೆ ಮೂಲಕ ನದಿಯು ವೈಯಾರದಿಂದ ಹರಪನಹಳ್ಳಿ ಕಡೆಗೆ ಹರಿಯುತ್ತದೆ. ಈ ಸೇತುವೆ ಮೂಲಕ ಸಾಗುವವರು ಕೆಲ ಹೊತ್ತು ವಾಹನ ನಿಲ್ಲಿಸಿ ನದಿಯ ಹರಿವಿನ ಸೌಂದರ್ಯವನ್ನು ಅಸ್ವಾದಿಸಿ ಮುಂದೆ ಸಾಗುತ್ತಿದ್ದಾರೆ.

ನದಿ ತೀರದವರಿಗೆ ಮುಂಜಾಗ್ರತೆ: ಜಿಲ್ಲೆಯ ಹೊನ್ನಾಳಿಯಲ್ಲಿ ಈ ನದಿಯ ಹರಿವಿನ ಮಟ್ಟವನ್ನು ಅಳತೆ ಮಾಡುತ್ತಾರೆ. ಅಲ್ಲಿನ ಮಾಪಕದ ಪ್ರಕಾರ ಈಗ ನದಿಯ ಹರಿವು 9 ಮೀಟರ್ ಇದೆ. 12 ಮೀಟರ್ ದಾಟಿದರೆ ಅಪಾಯ ಮಟ್ಟವೆಂದು ಪರಿಗಣಿತವಾಗುತ್ತದೆ. ಆದರೀಗ ಅವ್ಯಾಹತ ಮರಳು ಹಾಗೂ ಮಣ್ಣು ಗಣಿಗಾರಿಕೆ ನಡೆಸಿರುವುದರಿಂದ ನದಿ ದಡವು ನೈಸರ್ಗಿಕ ಆಕಾರದಲ್ಲಿಲ್ಲ. 20 ರಿಂದ 30 ಅಡಿ ಆಳದ ಗುಂಡಿಗಳು ಸೃಷ್ಟಿಯಾಗಿವೆ. ನದಿಯ ನೀರು ಮುಂಚಿನಂತೆ ಸರಾಗವಾಗಿ ಮುಂದೆ ಸಾಗದೆ ಅಕ್ಕಪಕ್ಕದ ಗುಂಡಿಗಳ ಮೂಲಕ ಜನ ವಸತಿ ಪ್ರದೇಶದತ್ತ ಸಾಗುತ್ತದೆ.

ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು ನದಿ ತೀರದಲ್ಲಿವೆ. ಆ ಗ್ರಾಮಗಳ ಪೈಕಿ ಬಿಳಸನೂರು, ಹಲಸಬಾಳು, ಗುತ್ತೂರು, ಸಾರಥಿ, ಚಿಕ್ಕಬಿದರಿ ಗ್ರಾಮಗಳು ಹಾಗೂ ಹರಿಹರದ ಮರ‍್ನಾಲ್ಕು ಜನವಸತಿ ಪ್ರದೇಶಗಳಿಗೆ ನದಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯ ಮಟ್ಟ 12 ಮೀಟರ್ ಇದ್ದರೂ 11 ಮೀಟರ್‌ವರೆಗೆ ನೀರು ಹರಿದರೂ ಕೂಡ ನದಿ ನೀರು ಜನವಸತಿ ಪ್ರದೇಶ ಹಾಗೂ ಜಮೀನು, ತೋಟಗಳಿಗೆ ಹರಿಯುವ ಅಪಾಯ ಇದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯಲಿದೆ. ಹೀಗಾಗಿ ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತಾಲ್ಲೂಕು ಆಡಳಿತ ಈಗಾಗಲೇ ನದಿ ತೀರದ ಗ್ರಾಮಗಳಲ್ಲಿ ಜನ, ಜಾನುವಾರು ನದಿ ತೀರಕ್ಕೆ ಹೋಗದಂತೆ ಸೂಚಿಸಿದ್ದಾರೆ. ಸ್ಥಳಾಂತರದ ಅಗತ್ಯ ಬಿದ್ದರೆ ಅದಕ್ಕೂ ತಯಾರು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT