ಪಾರಮಾರ್ಥಿಕ ಔನತ್ಯವೇ ಶಿವಯೋಗ: ಮುರುಘಾ ಶರಣರು

7

ಪಾರಮಾರ್ಥಿಕ ಔನತ್ಯವೇ ಶಿವಯೋಗ: ಮುರುಘಾ ಶರಣರು

Published:
Updated:
Prajavani

ದಾವಣಗೆರೆ: ‘ಶಿವಯೋಗದಿಂದ ಪಾರಮಾರ್ಥಿಕ ಔನತ್ಯ ಸಾಧಿಸಬಹುದು. ಶಿವಯೋಗದ ಔನತ್ಯವನ್ನು ಸಾಧಿಸಿದಾಗ ತಾನೇ ಸ್ವತಃ ಲಿಂಗವಾಗಬಹುದು’ ಎಂದು ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ನಡೆದ ಮೂರನೇ ದಿನದ ಸಹಜ ಶಿವಯೋಗದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಧ್ಯಾನ ಮಾಡುವುದರಿಂದ ಇಂದ್ರಿಯಗಳು ಶುದ್ಧವಾಗುತ್ತದೆ. ಉದಾತ್ತೀಕರಣಕ್ಕೆ ಒಳಗಾದಾಗ ಇಂದ್ರಿಯಗಳು ಮೃದುಗೊಳ್ಳಲಿದೆ. ಬಹಿರಂಗದ ಕೂಗನ್ನು ದಾಟಿ ಅಂತರಂಗದ ಕೂಗನ್ನು ಕೇಳಿಸಿಕೊಳ್ಳಬಹುದಾಗಿದೆ’ ಎಂದು ಮುರುಘಾ ಶರಣರು ಹೇಳಿದರು.

‘ಬಸವಣ್ಣ ಎಂದರೆ ವಿಶ್ವ ಎಂದರ್ಥ. ವಿಶ್ವ ಎಂದರೆ ವಿಶಾಲ. ಶರಣರ ಭಾವನೆಗಳು, ಅವರ ವಚನಗಳು ವಿಶಾಲವಾದ ಅರ್ಥಗಳನ್ನು ಒಳಗೊಂಡಿವೆ. ಇವುಗಳನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಲಾಗುತ್ತದೆ’ ಎಂದರು.

‘ಶರಣ ಸಂಸ್ಕೃತಿ ಎಂಬ ಎರಡು ಪದವೂ ವಿಶಾಲವಾದ ಅರ್ಥವನ್ನು ಒಳಗೊಂಡಿವೆ. ಬದುಕನ್ನು ಉದಾತ್ತಗೊಳಿಸುವುದು, ಪರಿಶ್ರಮಿಸುವುದು, ಸಂಸ್ಕಾರಗೊಳಿಸುವುದು, ಗೌರವಿಸುವುದು, ಒಗ್ಗೂಡಿಸುವುದು, ಕಟ್ಟುವುದು, ಸಮಾನತೆಯನ್ನು ತರುವುದು ಆಗಿದೆ. ಮುರುಘರಾಜೇಂದ್ರ ಬೃಹನ್ಮಠವು ಶರಣ ಸಾಂಸ್ಕೃತಿಕ ಶ್ರೀಮಂತಿಕೆಯ ಮಠವಾಗಿದೆ. ಜಾತ್ಯತೀತವಾಗಿ, ಸಮಾನತೆ, ಮಹಿಳಾ ಸ್ವಾತಂತ್ರ್ಯ ನೀಡುತ್ತ ಎಲ್ಲರ ಅಭಿವೃದ್ಧಿಗೆ ಮುರುಘ ಮಠವು ಶ್ರಮಿಸುತ್ತಿದೆ’ ಎಂದು ಹೇಳಿದರು.

ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಬಸವ ತತ್ವದ ಆಧಾರದ ಮೇಲೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದರು. 28 ವರ್ಷಗಳಿಂದಲೂ ಬಸವ ತತ್ವ ಪಾಲನೆ ಹಾಗೂ ಪ್ರಸಾರದಲ್ಲಿ ಬೃಹನ್ಮಠ ಹಲವು ಕಾರ್ಯಯೋಜನೆಗಳನ್ನು ಹಾಕಿಕೊಂಡು ಮುನ್ನಡೆಯುತ್ತಿದೆ ಎಂದು ವಿವರಿಸಿದರು.

‘ಬೆಂಗಳೂರಿನಂತಹ ಮಹಾನಗರಗಳಲ್ಲಿನ ಬಸವಣ್ಣನವರ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ವಚನಗಳೇ ಹೇಳುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಬಸವಣ್ಣನ ವಚನಗಳನ್ನು ಹಾಡುವಂತೆ ಮಾಡಲಾಯಿತು. ಸಹಜ ಶಿವಯೋಗ, ಶರಣ ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಹೊರ ರಾಜ್ಯ, ವಿದೇಶಗಳಲ್ಲೂ ಬಸವ ಪ್ರಜ್ಞೆಯನ್ನು ಮೂಡಿಸಿದ ಕೀರ್ತಿ ಮುರುಘ ಮಠಕ್ಕೆ ಸಲ್ಲುತ್ತದೆ’ ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಸ್ವಾಮೀಜಿ, ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಮುಕ್ತಾಯಕ್ಕ, ಲಿಂಗದೇವಿ, ಧಾರವಾಡದ ಈಶ್ವರ ಸಾಣಿಕೊಪ್ಪ, ಹರಿಹರದ ಸುಬ್ರಹ್ಮಣ್ಯ ನಾಡಿಗೇರ, ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಹಾಜರಿದ್ದರು.

ಉಚಿತ ಆರೋಗ್ಯ ತಪಾಸಣೆ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ಶಿವಯೋಗಾಶ್ರಮದಲ್ಲಿ ಭಾನುವಾರ ಬೆಳಿಗ್ಗೆ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ನಡೆಯಿತು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮ ನಡೆಯಿತು. ಮುರುಘಾ ಶರಣರು ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !