ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜಿನ ಅಡ್ಡೆಗಳಾದ ಸಮುದಾಯ ಭವನಗಳು

ಜಗಳೂರು: ಬಳಕೆಯಾಗದೆ ಪಾಳು ಬಿದ್ದ ಭವನಗಳಿಗೆ ಬೇಕಿದೆ ಕಾಯಕಲ್ಪ
Last Updated 27 ಡಿಸೆಂಬರ್ 2022, 5:12 IST
ಅಕ್ಷರ ಗಾತ್ರ

ಜಗಳೂರು: ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮುದಾಯಗಳ ಚಟುವಟಿಕೆ ಉದ್ದೇಶಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಬಹುತೇಕ ಸಮುದಾಯ ಭವನಗಳು ಸದ್ಬಳಕೆಯಾಗದೆ ಪಾಳು ಬಿದ್ದಿವೆ.

ಕೆಲವು ಗ್ರಾಮಗಳಲ್ಲಿನ ಸಮುದಾಯ ಭವನಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಹೆಚ್ಚಿನ ಸಂಖ್ಯೆಯ ಸಮುದಾಯ ಭವನಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಮತ್ತೆ ಕೆಲವು ಹಳ್ಳಿಗಳಲ್ಲಿ ಭವನಗಳನ್ನು ವರ್ಷಗಟ್ಟಲೇ ಬಳಸದ ಕಾರಣ ಶಿಥಿಲಾವಸ್ಥೆ ತಲುಪಿವೆ.

ಪಾಳು ಬಿದ್ದ ಅಂಬೇಡ್ಕರ್ ಭವನ: ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ದಾವಣಗೆರೆ– ಜಗಳೂರು ರಸ್ತೆಗೆ ಹೊಂದಿಕೊಂಡಂತಿರುವ ಅಂಬೇಡ್ಕರ್ ಭವನ ಬಳಕೆಯಾಗದೆ ಪಾಳು ಬಿದ್ದಿದೆ. ಭವನದ ಎಲ್ಲ ಬಾಗಿಲುಗಳು ಮತ್ತು ಕಿಟಕಿಗಳು ತೆರೆದ ಸ್ಥಿತಿಯಲ್ಲಿದ್ದು, ಹಾವು, ಚೇಳು ಮುಂತಾದ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಈ ಭವನದ ಪಕ್ಕದಲ್ಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯಿಂದ ಕೆಲವು ವರ್ಷಗಳ ಹಿಂದೆ ಬೃಹತ್ ಕಟ್ಟಡವನ್ನು ಅರ್ಧಂಬರ್ಧ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣವಾಗುವ ಮೊದಲೇ ವಾಹನವೊಂದು ಈ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗೋಡೆ ಕುಸಿದು ಬಿದ್ದಿದ್ದು, ಹತ್ತಾರು ವರ್ಷಗಳಿಂದ ಕಾಮಗಾರಿ ಸ್ಥಗಿತವಾಗಿ ಭೂತ ಬಂಗಲೆಯಂತಾಗಿ
ಬದಲಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಈ ಎರಡೂ ಕಟ್ಟಡಗಳಿವೆ. ಕೆಲವು ವರ್ಷಗಳ ಹಿಂದೆ ಈ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ನೂತನ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಂಡ ನಂತರ ಈ ಕಟ್ಟಡ ಪಾಳು ಬಿದ್ದಿದೆ. ನಿತ್ಯ ಈ ರಸ್ತೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೂ ಈ ಅವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ತಾಲ್ಲೂಕಿನ ಹೊಸಕೆರೆ ಗ್ರಾಮದ ಹೊರಲಯದಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸಿರುವ ಎರಡು ಅಂತಸ್ತಿನ ಬೃಹತ್ ಸಮುದಾಯ ಭವನವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳಿವೆ. ನೆಲ ಅಂತಸ್ತಿನ ಕಟ್ಟಡದಲ್ಲಿ ಖಾಸಗಿ ಕಂಪನಿಯ ಕಚೇರಿ ನಡೆಸುತ್ತಿದ್ದು, ಮೇಲಿನ ಮಹಡಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮದ ಮುಖಂಡರು ಹೇಳುತ್ತಾರೆ.

ಮತ್ತೆ ಕೆಲವು ಹಳ್ಳಿಗಳಲ್ಲಿನಸಮುದಾಯ ಭವನಗಳು ಜೂಜಾಟ ಹಾಗೂ ಅನೈತಿಕ ಚಟುವಟಿಕೆಗಳ ತಾಣಗಳಾಗಿ ದುರ್ಬಳಕೆಯಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪ.

ಸುಸಜ್ಜಿತ ವಾಲ್ಮೀಕಿ ಭವನ: ಕೆಲವು ಭವನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಪಟ್ಟಣದ ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ಮತ್ತು ಬಾಬು ಜಗಜೀವನರಾಂ ಭವನ, ಭೋವಿ ಸಮುದಾಯ ಭವನಗಳು ಸದ್ಬಳಕೆಯಾಗುತ್ತಿವೆ.

₹ 3 ಕೋಟಿ ವೆಚ್ಚದ ಹವಾ ನಿಯಂತ್ರಿತ ವಾಲ್ಮೀಕಿ ಭವನ: ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಬಹುದಾದ ಸುಸಜ್ಜಿತ ವಾಲ್ಮೀಕಿ ಭವನ ಕಾಮಗಾರಿ ಪಟ್ಟಣದಲ್ಲಿ ಭರದಿಂದ ಸಾಗಿದೆ. ರಾಜ್ಯದಲ್ಲೇ ತಾಲ್ಲೂಕು ಮಟ್ಟದ ಮೊದಲ ಅತ್ಯಂತ ವಿಶಾಲವಾದ, ಹವಾ ನಿಯಂತ್ರಿತ ಭವನ ಇದಾಗಲಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ವಿ. ರಾಮಚಂದ್ರ ಅವರು ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ₹ 3 ಕೊಟಿ ವೆಚ್ಚ ಅಂದಾಜಿಸಲಾಗಿದೆ.

ತಾಲ್ಲೂಕಿನ ವಿವಿಧೆಡೆ ₹ 10 ಕೋಟಿಗೂ ಹೆಚ್ಚು ವಿಶೇಷ ಅನುದಾನದಲ್ಲಿ ವಾಲ್ಮೀಕಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿದರಕೆರೆ, ಬಿಸ್ತುವಳ್ಳಿ, ಬಿಳಿಚೋಡು, ಐನಹಳ್ಳಿ, ಉಚ್ಚಂಗಿದುರ್ಗ ಮತ್ತು ಅರಸಿಕೆರೆಗಳಲ್ಲಿ ವಿಶಾಲವಾದ ಭವನ ನಿರ್ಮಿಸಲಾಗುತ್ತಿದೆ.

ವಿವಿಧ ಗ್ರಾಮಗಳಲ್ಲಿ ₹ 4.5 ಕೋಟಿ ಅನುದಾನದಲ್ಲಿ ಸುಸಜ್ಜಿತ ವಾಲ್ಮೀಕಿ ಭವನಗಳನ್ನು ನಿರ್ಮಿಸಲಾಗುತ್ತಿದೆ. ಸಮುದಾಯದ ಕಾರ್ಯಕ್ರಮಗಳಿಗೆ ಭವನಗಳನ್ನು ಬಳಸಲಾಗುತ್ತದೆ.

- ಎಸ್.ವಿ. ರಾಮಚಂದ್ರ, ಶಾಸಕ

ಗ್ರಾಮೀಣ ಪ್ರದೇಶದಲ್ಲಿರುವ ಅಂಬೇಡ್ಕರ್ ಭವನ ಮತ್ತು ವಿವಿಧ ಸಮುದಾಯ ಭವನಗಳು ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪಾಳು ಕಟ್ಟಡಗಳಾಗಿ ಅನುಪಯುಕ್ತವಾಗಿವೆ.

- ವ್ಯಾಸಗೊಂಡನಹಳ್ಳಿ ರಾಜಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT