ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ, ತಂತ್ರಜ್ಞಾನಕ್ಕೆ ಸಂಸ್ಕೃತವೇ ಮೂಲ

ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾರಂಭೋತ್ಸವದಲ್ಲಿ ಶ್ರೀಶೈಲ ಸ್ವಾಮೀಜಿ
Last Updated 18 ಜೂನ್ 2019, 16:22 IST
ಅಕ್ಷರ ಗಾತ್ರ

ದಾವಣಗೆರೆ: ವಿಜ್ಞಾನ, ತಂತ್ರಜ್ಞಾನ ಸೇರಿ ಎಲ್ಲ ಜ್ಞಾನಗಳಿಗೆ ಸಂಸ್ಕೃತವೇ ಮೂಲ. ಇದನ್ನರಿಯದೇ ಕೆಲವರು ಮೃತಭಾಷೆ ಎನ್ನುತ್ತಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.

ಪಿ.ಬಿ. ರಸ್ತೆಯಲ್ಲಿ ಇರುವ ಪಂಚಾಚಾರ್ಯ ಮಂದಿರದಲ್ಲಿ (ಶ್ರೀಶೈಲಮಠ)ದಲ್ಲಿ ಮಂಗಳವಾರ ಪಂಡಿತಾರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾರಂಭೋತ್ವವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಸ್ಕೃತದಲ್ಲಿ ಪಿತ್ರ್‌ ಇರುವುದು ಇಂಗ್ಲಿಷ್‌ನಲ್ಲಿ ಫಾದರ್‌ ಆಗಿದೆ. ಹಾಗೆಯೇ ಮಾತೃ –ಮದರ್‌, ಬ್ರಾತೃ್ ಬ್ರದರ್‌ ಹೀಗೆ ಅನೇಕ ಶಬ್ದಗಳನ್ನು ಕಾಣಬಹುದು. ಇಂಗ್ಲಿಷ್ ಸಹಿತ ಅನೇಕ ಭಾಷೆಗಳಿಗೆ ಸಂಸ್ಕೃತವೇ ಮೂಲ ಎಂದು ಪ್ರತಿಪಾದಿಸಿದರು.

ಸಂಸ್ಕೃತದಲ್ಲಿ ಹುರುಳಿಲ್ಲ. ಅದರಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಮೌಢ್ಯ ಇದೆ. ಚಲಾವಣೆಯಲ್ಲಿ ಇಲ್ಲದ ಭಾಷೆ. ಡೆಡ್‌ ಲಾಂಗ್ವೆಜ್‌ ಎಂದು ಸಂಸ್ಕೃತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಕೃತ ಡ್ಯಾಡಿ ಲ್ಯಾಂಗ್ವೆಜ್‌ ಎಂಬುದನ್ನು ಅಂಥವರಿಗೆ ಅರ್ಥ ಮಾಡಿಸಬೇಕು ಎಂದರು.

ವೇದಾಗಮ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಬೇಕು ಎಂಬುದು ವಾಗೀಶ ಪಂಡಿತಾರಾಧ್ಯರ ಇಚ್ಛೆಯಾಗಿತ್ತು. ಅವರು ಆರಂಭಿಸಿದರೂ ಮುಂದುವರಿಯಲಿಲ್ಲ. ಈಗ ಆರಂಭಗೊಂಡಿರುವ ಪಾಠಶಾಲೆ ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಯಡೂರು ಪಾಠಶಾಲೆಯ ಪ್ರಾಧ್ಯಾಪಕ ಶ್ರೀಶೈಲ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವೇದವನ್ನು ಬ್ರಾಹ್ಮಣರು, ಉನ್ನತ ಜಾತಿಯವರು ಮಾತ್ರ ಅಧ್ಯಯನ ಮಾಡಬೇಕು ಎಂಬುದು ಹಿಂದಿನ ಕಾಲದಲ್ಲಿ ಇತ್ತು. ವೇದದ ಜ್ಞಾನ ಎಲ್ಲರಿಗೂ ದೊರೆಯಬೇಕು ಎಂದು ಹಲವಾರು ಮಂದಿ ಹೋರಾಟ ಮಾಡಿದ ಬಳಿಕ ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿದೆ. ಈ ಪಾಠಶಾಲೆಯಲ್ಲಿಯೂ ಜಾತಿ, ಮತಗಳ ಭೇದವಿಲ್ಲದೇ ಎಲ್ಲರಿಗೂ ಕಲಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಅಂಬಿಕಾನಗರ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ ತನ್ನ 70ನೇ ಜನುಮದಿನದ ಪ್ರಯುಕ್ತ ಸಂಸ್ಕೃತ ಪಾಠಶಾಲೆಗೆ ₹ 1,11,111 ನೀಡಿದರು.

ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಷಾಹಪೂರ ಸೂಗೂರೇಶ್ವರ ಸ್ವಾಮೀಜಿ, ಮುಸ್ಟೂರು ಸ್ವಾಮಿಜಿ, ಲೆಕ್ಕ ಪರಿಶೋಧಕ ಎ.ಎಸ್‌. ವೀರಣ್ಣ, ದಾವಣಗೆರೆ–ಹರಿಹರ ಅರ್ಬನ್‌ ಬ್ಯಾಂಕ್‌ ಎನ್‌.ಎಂ. ಮುರುಗೇಶ್‌, ಜಾಲಾಸ್ವಾಮಿ, ದೇವರಮನೆ ಶಿವಕುಮಾರ್‌ ಅವರೂ ಉಪಸ್ಥಿತರಿದ್ದರು.

ಎಸ್‌.ಜಿ. ವಾಗೀಶಯ್ಯ ಸ್ವಾಗತಿಸಿದರು. ಕುಮಾರ ಪ್ರಭಯ್ಯ ವೇದಘೋಷ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT