ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂತ್ವನ’: ನೊಂದ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದನ

Published 22 ಜುಲೈ 2023, 5:53 IST
Last Updated 22 ಜುಲೈ 2023, 5:53 IST
ಅಕ್ಷರ ಗಾತ್ರ

ಚಂದ್ರಶೇಖರ ಆರ್.

ದಾವಣಗೆರೆ: ಮಹಿಳೆಯೊಬ್ಬರು ಪತಿ ತೊರೆದು ಪ್ರೇಮಿಯನ್ನೇ ಮದುವೆಯಾದರು. ಆದರೆ, ಪ್ರಿಯಕರನ ಮನೆಯಲ್ಲಿ ಸಿಕ್ಕಿದ್ದು ನೋವು ಮಾತ್ರ. ಮನೆಯವರು ಪ್ರಿಯಕರನನ್ನು ಈಕೆಯಿಂದ ಬೇರ್ಪಡಿಸಿದರು. ಗಂಡನ ಮನೆಯಲ್ಲೇ ಇದ್ದರೂ ಆಕೆಗೆ ಪ್ರೀತಿಯ ಬದಲು ಸಿಕ್ಕಿದ್ದು, ಊಟ, ತಿಂಡಿ, ಆಶ್ರಯ ಮಾತ್ರ.

ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಯುವಕ ಮನೆಯವರ ಮಾತು ಕೇಳಿ ಮದುವೆಯಾದ ಎರಡೇ ದಿನಕ್ಕೆ ಆಕೆ ಬೇಡ ಎಂದು ದೂರ ತಳ್ಳಿದ. ಆಪ್ತ ಸಮಾಲೋಚನೆ, ಯುವತಿಯವರ ಮನೆಯವರ ಮನವೊಲಿಕೆಗೂ ಆತ ಬಗ್ಗಲಿಲ್ಲ. ಯುವತಿ ಈಗ ಒಂಟಿ. ಆದರೆ ತನ್ನ ಕಾಲ ಮೇಲೆ ನಿಲ್ಲುವ ಮನೋಸ್ಥೈರ್ಯ ತೋರಿದ್ದಾರೆ.

ಯುವಕನೊಂದಿಗೆ ನಿಶ್ಚಿತಾರ್ಥವಾದ ಯುವತಿಯನ್ನು ಮದುವೆಗೆ 15 ದಿನ ಇರುವಾಗ ಆತನ ಮನೆಯವರು ಆಕೆ ಮೃದು ಸ್ವಭಾದವಳು, ಅಪ್‌ಡೇಟ್‌ ಇಲ್ಲ ಎಂದು ತಿರಸ್ಕರಿಸಿದರು. ಯುವಕನೂ ಮನೆಯವರ ಮಾತಿಗೆ ತಾಳ ಹಾಕಿದ. ನಿಶ್ವಿತಾರ್ಥಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವತಿಯ ಪಾಲಕರದ್ದು ಈಗ ಸಂಕಷ್ಟ ಸ್ಥಿತಿ.

ಇಂತಹ ನೂರಾರು ಕೌಟುಂಬಿಕ ಸಮಸ್ಯೆಗಳ ಪರಿಹಾರ ಕೋರಿ ನೊಂದವರು ಜಿಲ್ಲೆಯಲ್ಲಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬರುತ್ತಿದ್ದಾರೆ. ಇವಲ್ಲದೇ ಸಣ್ಣ ಪುಟ್ಟ ಪ್ರಕರಣಗಳೂ ಕೇಂದ್ರದತ್ತ ಬರುವುದು ವಿಶೇಷ. ಗಂಡ ನನಗೆ ಸಮಯ ನೀಡುತ್ತಿಲ್ಲ. ಪತಿ ನಾನು ಕೇಳಿದ ಉಡುಗೊರೆ ನೀಡುತ್ತಿಲ್ಲ. ಮದುವೆಯಾದ ಎರಡು–ಮೂರು ವರ್ಷಕ್ಕೇ ಅತ್ತೆ, ಮಾವನ ಜತೆ ಹೊಂದಾಣಿಕೆ ಕಷ್ಟವಾಗುತ್ತಿದೆ ಎಂಬ ದೂರುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ವರದಕ್ಷಿಣೆ ಕಿರುಕುಳ, ಕುಡಿತದ ಚಟ ಅಂಟಿಸಿಕೊಂಡವನಿಂದ ಮಾನಸಿಕ, ದೈಹಿಕ ಹಿಂಸೆ. ಅತ್ತೆ, ಮಾವ, ನಾದಿನಿಯರಿಂದ ಕಿರುಕುಳ. ಪತಿಯ ಅನೈತಿಕ ಸಂಬಂಧ, ವಿಧವೆಯಾದ ಸೊಸೆಗೆ ಆಸ್ತಿ ನೀಡದಿರುವುದು, ಅನುಮಾನ ಪಡುವ ಪತಿ... ಇಂತಹ ಪ್ರಕರಣಗಳೇ ಕೇಂದ್ರದ ಬಾಗಿಲು ತಟ್ಟುತ್ತಿವೆ. ಮಹಿಳೆಗೆ ಹಿಂಸೆ ನೀಡಿ ಮನೆಯಲ್ಲೇ ಕೂಡಿ ಹಾಕಿರುವ ಪ್ರಕರಣಗಳೂ ಕೇಂದ್ರದ ನೆರವು ಬಯಸಿ ಬರುತ್ತಿವೆ. ಆಪ್ತ ಸಮಾಲೋಚಕರು ಸಮಸ್ಯೆ ಬಗೆಹರಿಸುತ್ತಾರೆ.

ಜಿಲ್ಲೆಯ ಜಗಳೂರು, ಹರಿಹರ, ಹೊನ್ನಾಳಿ, ಚನ್ನಗಿರಿ ತಾಲ್ಲೂಕಿನಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳಿವೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಉಸ್ತುವಾರಿಯಲ್ಲಿ ಆಪ್ತ ಸಮಾಲೋಚಕರು ಹಾಗೂ ಸಿಬ್ಬಂದಿ ಈ ಕೇಂದ್ರದಲ್ಲಿರುತ್ತಾರೆ. 

ಜಗಳೂರಿನಲ್ಲಿ ಪ್ರೀತಿಸಿ ಮದುವೆಯಾದ ಹುಡುಗ ಕುಡಿತದ ದಾಸನಾದ ಪ್ರಕರಣದಲ್ಲಿ ಕೇಂದ್ರದ ಸಿಬ್ಬಂದಿ ಆತನನ್ನು ಮದ್ಯವರ್ಜನ ಶಿಬಿರಕ್ಕೆ ಕಳುಹಿಸಿ ಕುಡಿತ ಬಿಡಿಸಿದ್ದಾರೆ. ಆತನದು ಈಗ ಸುಖೀ ಸಂಸಾರ. ದೂರು ಹೊತ್ತು ಬಂದ ಯುವತಿ ಸಾಂತ್ವನ ಕೇಂದ್ರದವರ ನೆರವಿಗೆ ಸಂತಸಗೊಂಡಿದ್ದಾರೆ. ಬಡ ಮಹಿಳೆಯರಿಗೆ, ಅಗತ್ಯ ಇರುವವರಿಗೆ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವೂ ಇಲ್ಲಿ ಸಿಗುತ್ತಿದೆ.

ಕಳೆದ 5 ತಿಂಗಳಲ್ಲಿ ಜಗಳೂರು ತಾಲ್ಲೂಕಿನಲ್ಲಿ 29 ಪ್ರಕರಣಗಳು ದಾಖಲಾಗಿದ್ದು, 23 ಇತ್ಯರ್ಥಗೊಂಡಿವೆ. ಚನ್ನಗಿರಿಯ 28 ಪ್ರಕರಣಗಳಲ್ಲಿ 24 ಬಗೆಹರಿದಿವೆ. ಹರಿಹರದ 30ರಲ್ಲಿ 29 ಇತ್ಯರ್ಥಗೊಂಡಿವೆ. ಹೊನ್ನಾಳಿಯಲ್ಲಿ 18 ಪ್ರಕರಣ ದಾಖಲಾಗಿದ್ದು, 16 ಇತ್ಯರ್ಥಗೊಂಡಿವೆ.

‘ಹಲವು ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟ ತೃಪ್ತಿ ಇದೆ. ಕೆಲವು ಸಂದರ್ಭದಲ್ಲಿ ಸಂತ್ರಸ್ತ ಮಹಿಳೆಯ ಕಡೆಯವರು ನಮ್ಮ ಮೇಲೂ ಪೊಲೀಸರಿಗೆ ದೂರು ಸಲ್ಲಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಅನಗತ್ಯವಾಗಿ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. ಆದರೂ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟಾಗ ಖುಷಿಯಾಗುತ್ತದೆ. ಎಲ್ಲ ಇಲಾಖೆಗಳ ಸಹಕಾರ ಇದ್ದರೆ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು’ ಎನ್ನುತ್ತಾರೆ ಜಗಳೂರಿನ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಎನ್‌.ರುದ್ರಮೂರ್ತಿ.

ಕೌಟುಂಬಿಕ ದೌರ್ಜನ್ಯದ ಪ್ರಕರಣಗಳಲ್ಲಿ ನೊಂದ ಮಹಿಳೆಯರು ಕೆಲ ವರ್ಷಗಳ ಬಳಿಕ ‘ನಾವು ಈಗ ಚೆನ್ನಾಗಿದ್ದೇವೆ’ ಎಂದು ಹೇಳುತ್ತಾರೆ. ಆಗ ಕೆಲಸದ ಸಾರ್ಥಕತೆಯ ತೃಪ್ತಿ ಸಿಗುತ್ತದೆ ಎಂದು ಸಂತಸ ಹಂಚಿಕೊಂಡರು ಚನ್ನಗಿರಿ ಕೇಂದ್ರದ ಆಪ್ತ ಸಮಾಲೋಚಕಿ ನೇತ್ರಾವತಿ ಬಿ.ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT