ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ ಏತ ನೀರಾವರಿ ಡಿಸೆಂಬರ್‌ ಒಳಗೆ ಮುಗಿಸಿ: ಸಂಸದ ಜಿ.ಎಂ. ಸಿದ್ದೇಶ್ವರ

Last Updated 8 ಜುಲೈ 2021, 16:28 IST
ಅಕ್ಷರ ಗಾತ್ರ

ದಾವಣಗೆರೆ: ಭರಮಸಾಗರ ಏತ ನೀರಾವರಿ ಯೋಜನೆ, ಜಗಳೂರು ಏತ ನೀರಾವರಿ ಯೋಜನೆ ವೇಗವಾಗಿ ನಡೆಯುತ್ತಿದೆ. ಸಾಸ್ವೆಹಳ್ಳಿ ಯೋಜನೆ ಮಾತ್ರ ಕುಂಟುತ್ತಾ ಸಾಗುತ್ತಿದೆ. ಈ ವರ್ಷದ ಡಿಸೆಂಬರ್‌ ಒಳಗೆ ಕಾಮಗಾರಿಗಳನ್ನು ಮುಗಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ಆರಂಭಗೊಂಡು ಎರಡೇ ವರ್ಷಗಳಲ್ಲಿ ಮುಗಿಯುತ್ತಿದೆ. ಸಾಸ್ವೆಹಳ್ಳಿ ಯೋಜನೆ ಮಾತ್ರ 2017ರಲ್ಲಿ ಆರಂಭಗೊಂಡಿದ್ದರೂ ಇನ್ನೂ ಮುಗಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

121 ಕೆರೆಗಳಿಗೆ ನೀರು ತುಂಬಿಸುವ ₹ 431 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಲ್ಲಿ ₹ 277 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಪವರ್‌ಲೈನ್‌ ಮಾಡಲು ಭೂಸ್ವಾಧೀನ ಆಗಿಲ್ಲ. ಜನರ ಆಕ್ಷೇಪ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಜುಲೈ 22ರಂದು ಜಮೀನಿಗೆ ದರ ನಿಗದಿ ಕಾರ್ಯ ಮಾಡಿ ನೋಟಿಫಿಕೇಶನ್‌ ಹೊರಡಿಸುತ್ತೇವೆ. ಕೂಡಲೇ ಜಮೀನು ಸ್ವಾಧೀನ ಮಾಡಿಕೊಂಡು ಪವರ್‌ಲೈನ್‌ ಕೆಲಸ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.

ಜಗಳೂರು ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಲಾಗುತ್ತಿರುವ ಪೈಪ್‌ಲೈನ್ ಕಳಪೆಯಾಗಿದೆ ಎಂದು ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ಪೈಪ್‌ಗಳ ಜಾಯಿಂಟ್‌ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ. ಅವೈಜ್ಞಾನಿಕವಾಗದಂತೆ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

‘ಆ ಜನಪ್ರತಿನಿಧಿಯನ್ನು ಕರೆದುಕೊಂಡು ಹೋಗಿ ಕಾಮಗಾರಿ ತೋರಿಸಿ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಎಂಜಿನಿಯರ್‌ ಹೇಳಿದರು. ಜನಪ್ರತಿನಿಧಿಯನ್ನು ಮನವರಿಕೆ ಮಾಡುವುದು ಮುಖ್ಯವಲ್ಲ. ಕಾಮಗಾರಿ ಸರಿಯಾಗಬೇಕು ಎಂದು ಸಂಸದರು ಹೇಳಿದರು. 22 ಕೆರೆ ಯೋಜನೆಯಲ್ಲಿ ಕೂಡ ಇದೇ ಸಮಸ್ಯೆ ಆಗಿ ನೀರು ಸೋರಿಕೆಯಾಗಿತ್ತು. ಪೈಪ್‌ಲೈನ್‌ಗಳಲ್ಲಿ ನೀರು ಸೋರಿಕೆಯಾಗದಂತೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಭರಮಸಾಗರ ಯೋಜನೆಯಲ್ಲಿ ಪೈಪ್‌ ಅಳವಡಿಸಲು 1.5 ಕಿಲೋಮೀಟರ್‌ ಮಾತ್ರ ಉಳಿದಿದೆ. ಅಲ್ಲಿ ಜಾಗದ ತಕರಾರು ಇದೆ. ಅವುಗಳನ್ನು ಇತ್ಯರ್ಥಪಡಿಸಿದರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಎಂಜಿನಿಯರ್ ತಿಳಿಸಿದರು.

ಶಾಸಕ ಪ್ರೊ. ಎನ್‌. ಲಿಂಗಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಕೆಎನ್‌ಎನ್‌ಎಲ್‌ ಮುಖ್ಯ ಎಂಜಿನಿಯರ್‌ ಯತೀಶ್‌ಚಂದ್ರ, ಮಲ್ಲಪ್ಪ, ಮಂಜುನಾಥ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT