ಭಾನುವಾರ, ಆಗಸ್ಟ್ 25, 2019
23 °C
ಕೆ.ಟಿ.ಮಾಸ್ಟರ್ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಸವಪ್ರಭು ಸ್ವಾಮೀಜಿ

ವೃತ್ತಿಗಿಂತ ಪ್ರವೃತ್ತಿಯಲ್ಲಿ ಸಂತೃಪ್ತಿ ಹೆಚ್ಚು

Published:
Updated:
Prajavani

ದಾವಣಗೆರೆ: ವೃತ್ತಿಗಿಂತಲೂ ಪ್ರವೃತ್ತಿಯಲ್ಲಿ ಆನಂದ, ಸಂತೃಪ್ತಿ ಹೆಚ್ಚು ದೊರಕುತ್ತದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಿ ಮಂದಿರದಲ್ಲಿ ಸೋಮವಾರ ಶಿರಡಿ ಸಾಯಿ ಯೋಗ ಕೇಂದ್ರ, ಜಯದೇವ ಯೋಗ ಧ್ಯಾನ ಕೇಂದ್ರ, ವನಿತ ಯೋಗ ಕೇಂದ್ರ, ಜೈನ್ ಯೋಗ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಲಯನ್ಸ್ ಕ್ಲಬ್ ಮತ್ತು ಸೆಂಚುರಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ದಿವಂಗತ ಕೆ. ತಿಪ್ಪೆಸ್ವಾಮಿ (ಕೆ.ಟಿ.ಮಾಸ್ಟರ್) ಜ್ಞಾಪಕಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ, ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರ, ಹೂವಿನ ಸಸಿಗಳ ವಿತರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವೃತ್ತಿ ಇರುವುದು ಜೀವನೋಪಾಯಕ್ಕಾಗಿ. ಈ ವೃತ್ತಿ ಒಂದು ದಿನ ನಿವೃತ್ತಿಯಾಗುತ್ತದೆ. ಆದರೆ ಪ್ರವೃತ್ತಿ ಎಂದಿಗೂ ನಿವೃತ್ತಿಯಾಗುವುದಿಲ್ಲ. ಜೀವನದುದ್ದಕ್ಕೂ ಹೆಚ್ಚು ಸಾಮಾಜಿಕ ಸೇವಾ ಕಾರ್ಯಗಳಿಗೆ ಪ್ರವೃತ್ತಿ ಪ್ರೋತ್ಸಾಹ ನೀಡುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುತ್ತದೆ. ಪ್ರವೃತಿಯ ಜೀವನದಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಪ್ರವೃತ್ತಿಯ ಹವ್ಯಾಸ ಬೆಳಸಿಕೊಳ್ಳಬೇಕು. ಕೈಲಾದ ಮಟ್ಟಿಗೆ ಜನರಿಗೆ ಸಹಾಯ ಮಾಡಬೇಕು. ಒಂದು ವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದ ನಿರಾಶ್ರಿತರಾದರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಪ್ರಸಾದ, ‘ಕೆ.ಟಿ. ಮಾಸ್ಟರ್ ಎಂದೇ ಖ್ಯಾತರಾಗಿದ್ದ ಕೆ.ತಿಪ್ಪೆಸ್ವಾಮಿ ಅವರ ಸಾಮಾಜಿಕ ಬದುಕು ಅನನ್ಯವಾದದು. ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾಗಿದ್ದರು. ಅವರ ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂಬ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಶಿವಯೋಗಾಶ್ರಮ ಟ್ರಸ್ಟ್‌ನ ಟ್ರಸ್ಟಿ ಜಿ.ನಾಗನೂರು, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಮಾತನಾಡಿದರು.

ನಿವೃತ್ತ ಶಸ್ತ್ರ ಚಿಕಿತ್ಸಕರಾದ ಡಾ.ಎಚ್.ಜಿ. ನೀಲಾಂಬಿಕೆ ಅವರನ್ನು ಸನ್ಮಾನಿಸಲಾಯಿತು. ಸೆಂಚುರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯು.ಕೆ.ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ. ಸತೀಶ್, ಬೆಳ್ಳೂಡಿ ಶಿವಕುಮಾರ್, ಕರಿಬಸಪ್ಪ ಕಣ್ಣಕುಪ್ಪಿ, ಎಸ್.ಜಿ.ಉಳುವಯ್ಯ, ಎಸ್.ವೆಂಕಟಾಚಲಂ, ಶರಣಾರ್ಥಿ ಬಕ್ಕಪ್ಪ ಇದ್ದರು. ಜಿ.ಎಸ್. ವೀರಣ್ಣ ಕಾರ್ಯಕ್ರಮ ನಿರೂಪಿಸಿದರು.

Post Comments (+)