ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದುಕೊರತೆ ಸಭೆ: ನಾಮಕಾವಸ್ತೆ ಸಭೆ; ಬಗೆಹರಿಯದ ಸಮಸ್ಯೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ
Last Updated 16 ಜನವರಿ 2023, 5:14 IST
ಅಕ್ಷರ ಗಾತ್ರ

ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲು ಕರೆಯಲಾಗುವ ಕುಂದುಕೊರತೆ ಸಭೆಗಳು ನಾಮಕಾವಸ್ತೆಗೆ ನಡೆಯುತ್ತಿದ್ದು, ಪರಿಶಿಷ್ಟರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಜಿಲ್ಲೆಯಲ್ಲಿ ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಹಾಗೂ ಜಿಲ್ಲಾ ಮಟ್ಟದ ಸಭೆ ಮೂರು ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ. ಪರಿಶಿಷ್ಟರ ಕಾಲೊನಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಭೂಮಿ ಕೊರತೆ, ಸ್ಮಶಾನಕ್ಕೆ ಮೂಲಸೌಲಭ್ಯಗಳ ಕೊರತೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ... ಹೀಗೆ ಅನೇಕ ಸಮಸ್ಯೆಗಳಿದ್ದು, ಸಭೆಯ ಗಮನಕ್ಕೆ ತಂದರೂ ಪರಿಹಾರ ಸಿಗುತ್ತಿಲ್ಲ ಎಂದು ದಲಿತ ಮುಖಂಡರು ದೂರಿದ್ದಾರೆ.

‘ತಾಲ್ಲೂಕಿನ ಗ್ರಾಮವೊಂದರಲ್ಲಿ ಯುವತಿಗೆ ಯುವಕನೊಬ್ಬ ಮೊಬೈಲ್‍ನಲ್ಲಿ ಮೆಸೇಜ್ ಮಾಡಿದ ಎಂಬ ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಹಲ್ಲೆ ನಡೆಸಿದವರಲ್ಲಿ ಒಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಸದಸ್ಯತ್ವ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕುಂದವಾಡ ಮಂಜುನಾಥ್ ದೂರಿದರು.

‘ಹಳೇ ಕುಂದವಾಡ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರ ಜಮೀನು ಇಲ್ಲದ ಕಡೆ ವಿಶೇಷ ಘಟಕ ಯೋಜನೆ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ₹ 3 ಕೋಟಿ ಬಿಡುಗಡೆಯಾಗಿದ್ದರೂ ಕಾರ್ಯ ನನೆಗುದಿಗೆ ಬಿದ್ದಿದೆ. ಪ್ರಚಾರದ ದೃಷ್ಟಿಯಿಂದ ಸಭೆ ನಡೆಸಲಾಗುತ್ತಿದೆಯೇ ವಿನಾ ಸಮಸ್ಯೆ ಪರಿಹರಿಸುವ ಕಾಳಜಿ ಯಾರಿಗೂ ಇಲ್ಲ’ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ಹೆಚ್ಚು ಇರುವ ಆನೆಕೊಂಡದ ಬಳಿ ಇರುವ ಮಟ್ಟಿಕಲ್ಲು ಕೊಳೆಗೇರಿಯಲ್ಲಿ ಶೌಚಾಲಯ ಸಹಿತ ಮೂಲಸೌಕರ್ಯಗಳಿಲ್ಲ. ಆವರಗೆರೆ ರುದ್ರಭೂಮಿ ರಸ್ತೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಹಳೆ ಚಿತ್ತನಹಳ್ಳಿಯಲ್ಲಿ ರಸ್ತೆ ಸಂಪರ್ಕವೇ ಇಲ್ಲ. ಮಳೆ ಬಂದರೆ ನಿರಾಶ್ರಿತರಾಗುತ್ತಾರೆ. ಎಪಿಎಂಸಿ ಹಿಂಭಾಗ ವಾಸವಾಗಿರುವ 300 ಕುಟುಂಬಗಳಿಗೆ ವಸತಿ ಸೌಲಭ್ಯ ಇಲ್ಲ. ಗೋಶಾಲೆ ಸಮೀಪದ ಹಳ್ಳದ ದಂಡೆಯ ಮೇಲೆ ನೂರಾರು ಕುಟುಂಬಗಳು ವಾಸವಾಗಿದ್ದು, ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದನವಿನ ಓಣಿಯಲ್ಲೂ ಬಹಳಷ್ಟು ಸಮಸ್ಯೆಗಳಿವೆ. ಈ ಕುರಿತು ಹಲವು ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಲ್ಲ’ ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಆವರಗೆರೆ ವಾಸು ಬೇಸರ ವ್ಯಕ್ತಪಡಿಸಿದರು.

ಸ್ಮಶಾನ ಭೂಮಿ, ಬಗರ್‌ಹುಕುಂ ರೈತರ ಸಮಸ್ಯೆಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೇವಸ್ಥಾನ ಪ್ರವೇಶ ಮತ್ತು ಕ್ಷೌರ ನಿರಾಕರಣೆ, ದೌರ್ಜನ್ಯ, ಜಾತಿನಿಂದನೆ, ಅತ್ಯಾಚಾರ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಕುಂದು–ಕೊರತೆಗಳಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು. ಇಲ್ಲವೇ 112ಕ್ಕೆ ಕರೆ ಮಾಡಬೇಕು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಅಸ್ಪೃಶ್ಯತೆ ಆಚರಣೆ ತಡೆಗೆ ಜಾಗೃತಿ ಕಾರ್ಯಕ್ರಮ

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989, 2015 ಮತ್ತು ತಿದ್ದುಪಡಿ ನಿಯಮ 2016ರ ಕಾಯ್ದೆಯ ಕಲಂ 17ರ ಪ್ರಕಾರ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಲಾಗಿದೆ. ಅಲ್ಲದೇ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತ್ರೈಮಾಸಿಕ ಸಭೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತದಿಂದ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಜಾತಿನಿಂದನೆ, ಕೊಲೆ, ಅತ್ಯಾಚಾರ ಇತ್ಯಾದಿ ಸೇರಿ ಒಟ್ಟು 118 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಪರಿಶಿಷ್ಟ ಜಾತಿಯ 134, ಪರಿಶಿಷ್ಟ ಪಂಗಡದ 62 ಸೇರಿ ಒಟ್ಟು 198 ಸಂತ್ರಸ್ತರಿಗೆ ₹ 1.23 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ. ನಾಗರಾಜ ಮಾಹಿತಿ ನೀಡಿದ್ದಾರೆ.

****

ಸಮಸ್ಯೆ ಪರಿಹರಿಸಲು ವಿಫಲ

ಹರಿಹರ: ಮಠ, ಮಾನ್ಯಗಳ ತವರೂರು ಎಂಬ ಖ್ಯಾತಿಯ ಹರಿಹರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅದರಲ್ಲೂ ವಿಶೇಷವಾಗಿ ಮಾದಿಗ ಸಮುದಾಯದವರಿಗೆ ಹಲವು ಸಮಸ್ಯೆಗಳು ಆರದ ಗಾಯವಾಗಿ ಕಾಡುತ್ತಿವೆ.

ಕೆಲವು ಗ್ರಾಮಗಳಲ್ಲಿ ಕ್ಷೌರ ಮಾಡಲು ನಿರಾಕರಿಸಿದರೆ, ಮತ್ತೆ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟರಿಗೆ ಕ್ಷೌರ ಮಾಡಬೇಕಾಗುತ್ತದೆ ಎಂದು ಕ್ಷೌರದಂಗಡಿಗಳೇ ಕಾಣೆಯಾಗಿವೆ. ಇನ್ನೂ ಕೆಲವೆಡೆ ಇದ್ದೂರಿನ ಮಾದಿಗ ಸಮುದಾಯದವರಿಗೆ ಕ್ಷೌರ ನಿರಾಕರಿಸಿ, ಅಕ್ಕಪಕ್ಕದ ಮಾದಿಗ ಸಮುದಾಯದವರಿಗೆ ಕ್ಷೌರ ಮಾಡಲಾಗುತ್ತಿದೆ. ಸಾರಥಿ, ಗುಳದಹಳ್ಳಿ, ಧೂಳೆಹೊಳೆ, ಎಳೆಹೊಳೆ, ಭಾನುವಳ್ಳಿ, ಕೊಕ್ಕನೂರು, ಕಡ್ಲೆಗೊಂದಿ, ಗೋವಿನಹಾಳ ಇತರೆ ಗ್ರಾಮಗಳಲ್ಲಿ ಪರಿಶಿಷ್ಟರು ಕ್ಷೌರಕ್ಕೆ ಅಕ್ಕಪಕ್ಕದ ದೊಡ್ಡ ಗ್ರಾಮ ಅಥವಾ ಪಟ್ಟಣಗಳನ್ನು ಅವಲಂಬಿಸಿದ್ದಾರೆ.

ವಾಸನ ಮತ್ತು ಕಡ್ಲೆಗೊಂದಿ ಗ್ರಾಮದಲ್ಲಿ ರುದ್ರಭೂಮಿ ಇಲ್ಲ. ಉಕ್ಕಡಗಾತ್ರಿಯಲ್ಲಿ ಇರುವ ರುದ್ರಭೂಮಿಗೆ ರಸ್ತೆ ಇಲ್ಲ. ಬನ್ನಿಕೋಡು ರುದ್ರಭೂಮಿ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗೆ ನಾನಾ ಕಾರಣಗಳಿಗೆ ದಲಿತರು ಹಲವೆಡೆ ಹಳ್ಳ, ಕೊಳ್ಳ, ನದಿ ದಡದಲ್ಲೇ ಮೃತರ ಅಂತ್ಯ ಸಂಸ್ಕಾರ ಮಾಡಬೇಕಿದೆ.

ನಿವೇಶನ ಇದ್ದವರಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರದ ಯೋಜನೆಗಳಿವೆ. ಆದರೆ, ನಿವೇಶನ ಹೊಂದುವ ಸಾಮರ್ಥ್ಯ ಇಲ್ಲದ ಅಸ್ಪೃಶ್ಯರಿಗೆ ವಸತಿ ಯೋಜನೆ ಕನ್ನಡಿಯ ಗಂಟಾಗಿದೆ. ಕೆಲವು ಗ್ರಾಮಗಳಲ್ಲಿ ಗೋಮಾಳ ಜಮೀನಿದೆ. ಆದರೆ, ಅವುಗಳನ್ನು ಕೆಲವು ಬಲಾಢ್ಯರು ಒತ್ತುವರಿ ಮಾಡಿಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾಲ ತಳ್ಳುತ್ತಿದ್ದಾರೆ ಎಂಬ ಆರೋಪವಿದೆ.

-ಇನಾಯತ್‌ ಉಲ್ಲಾ ಟಿ.

***

ಫಲ ನೀಡದ ಕಾಟಾಚಾರದ ಸಭೆ

ಜಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಾಗಿರುವ ಜಗಳೂರು ತಾಲ್ಲೂಕಿನಲ್ಲಿ ಈ ಸಮುದಾಯದ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಯುವುದೇ ಅಪರೂಪವಾಗಿದೆ.

ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಯುತ್ತಿದ್ದು, ತಾಲ್ಲೂಕಿನಲ್ಲಿ ಮಾತ್ರ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಸಭೆ ನಡೆದರೆ ಹೆಚ್ಚು ಎನ್ನುವಂತಾಗಿದೆ. ಕೆಲವು ಸಭೆಗಳು ನಡೆದರೂ ಕಾಟಾಚಾರಕ್ಕೆ ಎನ್ನುವಂತಾಗಿದ್ದು, ಗ್ರಾಮೀಣ ಭಾಗದ ಪರಿಶಿಷ್ಟರ ಸಮಸ್ಯೆಗಳು ಪರಿಹಾರವಾಗಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ.

ತಾಲ್ಲೂಕಿನ ಸಿದ್ದಿಹಳ್ಳಿ ಗ್ರಾಮದಲ್ಲಿ ಈಚೆಗೆ ಪರಿಶಿಷ್ಟ ಸಮುದಾಯದವರಿಗೆ ಕ್ಷೌರ ಮಾಡುತ್ತಿಲ್ಲ, ಮೇಲ್ವರ್ಗದವರ ದೇವಸ್ಥಾನದ ಪ್ರವೇಶ ನೀಡುತ್ತಿಲ್ಲ ಎಂಬ ದೂರು ಸಾಕಷ್ಟು ಚರ್ಚೆಗೀಡಾಗಿತ್ತು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಚ್ಚಂಗಿದುರ್ಗದ ಎಲ್ಲಮ್ಮ ದೇವತೆ ಹೆಸರಿನಲ್ಲಿ ಮುತ್ತು ಕಟ್ಟುವುದು, ತಲೆಯಲ್ಲಿ ಗಂಟುಗಂಟಾದ ಜಡೆಗಳನ್ನು ಬಿಟ್ಟುಕೊಂಡು ಬಿಕ್ಷಾಟನೆ ನಡೆಸುವುದು, ಚೌಡಮ್ಮ, ಮಾರಮ್ಮ ಜಾತ್ರೆಗಳಲ್ಲಿ ಬಾಯಿಬೀಗ ಹಾಕುವುದು, ಪರಿಶಿಷ್ಟರ ಕಾಲೊನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪ್ರತಿ ತಿಂಗಳು ಕುಂದುಕೊರತೆ ಸಭೆ ಆಯೋಜಿಸುವ ಮೂಲಕ ತಾಲ್ಲೂಕು ಆಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಪರಿಶಿಷ್ಟ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

‘ತಾಲ್ಲೂಕಿನ ಸಿದ್ದಿಹಳ್ಳಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ. ದೇವಸ್ಥಾನ ಪ್ರವೇಶ ಮಾಡುವುದಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಹಶೀಲ್ದಾರ್, ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಾಲ್ಕು ಬಾರಿ ಕುಂದುಕೊರತೆ ಹಾಗೂ ಶಾಂತಿಸಭೆ ನಡೆಸಲಾಗಿದೆ. ಈಗ ಸಮಸ್ಯೆ ಪರಿಹಾರವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ. ಶ್ರೀನಿವಾಸ್

***

ಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ನಿಯಮಿತವಾಗಿ ಸಭೆ ನಡೆಸಬೇಕು. ಕ್ಷೌರ, ಸ್ಮಶಾನ ಭೂಮಿ, ವಸತಿ ಈ ಮೂರು ಪರಿಶಿಷ್ಟರ ಪ್ರಮುಖ ಸಮಸ್ಯೆಗಳಾಗಿದ್ದು, ಇವುಗಳ ನಿವಾರಣೆಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

-ಪಿ.ಜೆ. ಮಹಾಂತೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ, ಹರಿಹರ

***

ಪರಿಶಿಷ್ಟ ಜಾತಿ ಹಾಗೂ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು. ತಮ್ಮ ವ್ಯಾಪ್ತಿಗೆ ಬರದ ವಿಚಾರಗಳನ್ನು ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು.

-ಕುಂದವಾಡ ಮಂಜುನಾಥ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ

***

ಕುಂದುಕೊರತೆ ಅಥವಾ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳು ಕಾಟಾಚಾರದ ಸಭೆಗಳಾಗಿ ಮಾರ್ಪಟ್ಟಿವೆ. ಬಹುತೇಕ ಜನಪ್ರತಿನಿಧಿಗಳು ಗೈರಾಗಿರುತ್ತಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಪರಿಶಿಷ್ಟರ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ.

-ಆವರಗೆರೆ ವಾಸು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT