ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಲಂಚ ಪಡೆಯುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ತಾಕೀತು
Last Updated 20 ಜನವರಿ 2021, 3:59 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಫಲಾನುಭವಿಗಳಿಂದ ಲಂಚ ಪಡೆಯುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಿಇಒಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಫಲಾನುಭವಿಗಳಿಂದ ₹ 20 ಸಾವಿರದಿಂದ ₹ 25 ಸಾವಿರದವರೆಗೆ ಲಂಚ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ ದೂರಿದಾಗ ಸಂಸದರು ಮೇಲಿನಂತೆ ಉತ್ತರಿಸಿದರು.

‘ಜನರು ಯಾರಿಗಾದರೂ ವೋಟ್ ಕೊಡಲಿ. ಪಕ್ಷ ನೋಡದಂತೆ ಅರ್ಹ ಫಲಾನುಭವಿಗಳಿಗೆ ಮನೆ ನೀಡಬೇಕು. ಲಂಚ ಕೊಟ್ಟಿದ್ದಾರಾ ಎಂಬುದನ್ನು ಫಲಾನುಭವಿಗಳ ಮನೆಗೆ ಹೋಗಿ ಪರಿಶೀಲಿಸಬೇಕು. ಸರ್ಕಾರದ ಹಣ ಲೋಪವಾಗಬಾರದು, ಭ್ರಷ್ಟಾಚಾರ ನಡೆಯಬಾರದು’ ಎಂದು ಎಚ್ಚರಿಸಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆ

ಯಡಿ 1,573 ಫಲಾನುಭವಿಗಳು ಆಯ್ಕೆಯಾಗಿದ್ದು, ನಿರ್ಮಿಸದೇ ಇರುವ 1,361 ಮನೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ನಜ್ಮಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಬ್ಲಾಕ್ ಮಾಡಿರುವ ಮನೆಗಳನ್ನು ಬೇರೆಯವರಿಗೆ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಆಗ ಉತ್ತರಿಸಿದ ನಜ್ಮಾ ಅವರು ‘ಬ್ಲಾಕ್ ಮಾಡಿರುವ ಮನೆಗಳನ್ನು ಆಶ್ರಯ ಸಮಿತಿ ಸಭೆಯಲ್ಲಿ ಇಟ್ಟು ಮುಂದಿನ ಫಲಾನುಭವಿಗಳ ಆಯ್ಕೆಗೆ ಇದನ್ನು ಪರಿಗಣಿಸಲಾಗುವುದು. ಆದರೆ ಆಶ್ರಯ ಸಮಿತಿ ಸಭೆ ನಡೆದಿಲ್ಲ ಎಂದು ಹೇಳಿದರು’ ಎಂದು ಹೇಳಿದರು.

‘ಲೇಔಟ್ ಮಾಡಲು ಚನ್ನಗಿರಿ ಹಾಗೂ ದಾವಣಗೆರೆ ಉತ್ತರದಲ್ಲಿ ಜಮೀನು ನೀಡಲು ಕೆಲವರು ಮುಂದೆ ಬರುತ್ತಾರೆ. ಆದರೆ ಜಮೀನಿನ ಮಾಲೀಕರು ಒಂದು ನಿವೇಶನ ಬೇಕು ಎಂದು ಕೇಳುತ್ತಿದ್ದಾರೆ. ಆದರೆ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಆ ರೀತಿಯ ಕಾನೂನು ಇಲ್ಲ’ ಎಂದರು.

ಸ್ವಚ್ಛತೆಗೆ 26ರವರೆಗೆ ಗಡುವು

ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ನಗರದಿಂದ ಹೊರಗಡೆ ಶೆಡ್‌ಗಳನ್ನು ನಿರ್ಮಿಸಿ ಅವುಗಳು ಹೊರಗಡೆ ಬಾರದಂತೆ ಕಾಂಪೌಂಡ್ ನಿರ್ಮಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

‘ಈಚೆಗೆ ಮಗುವಿನ ಮೇಲೆ ಹಂದಿ ದಾಳಿ ಮಾಡಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಹೇಳಿದರು.

ಇದಕ್ಕೆ ಉತ್ತರಿಸಿದ ಸಂಸದರು ‘ನಗರದಲ್ಲಿ 15 ಸಾವಿರ ಹಂದಿಗಳಿದ್ದು, ಅವುಗಳಿಗೆ ಊರ ಹೊರವಲಯದಲ್ಲಿ ಪ್ರತ್ಯೇಕ ಜಾಗ ಹುಡುಕಿ ಅಲ್ಲಿ ಬಿಟ್ಟು ಯಾರಾದರೂ ಸೂಪರ್‌ವೈಸ್‌ ಮಾಡಿ, ಹಂದಿಗಳ ಕಾಟ ತಪ್ಪಿಸಿ’
ಎಂದರು.

‘ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ. ಸ್ವಚ್ಛತೆ ಇಲ್ಲದಿದ್ದರೆ ಏನು ಪ್ರಯೋಜನ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಇನ್ನೂ ಸ್ವಚ್ಛವಾಗಬೇಕಿದೆ. ಬೆಳಿಗ್ಗೆಯೇ ಸ್ವಚ್ಛತೆ ಪರಿಶೀಲಿಸಬೇಕು’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರಿಗೆ ಸೂಚಿಸಿದರು.

‘ಜ. 26ರಂದು ಜಿಲ್ಲಾಧಿಕಾರಿ ಜೊತೆಯಲ್ಲಿ ನಗರದಲ್ಲಿ ಸುತ್ತಾಟ ನಡೆಸುತ್ತೇನೆ.ಈ ವೇಳೆ ರಸ್ತೆ ಬದಿ ಕಸ ಬಿದ್ದಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಪೌರ ಕಾರ್ಮಿಕರು ಅಗತ್ಯಕ್ಕಿಂತ ಹೆಚ್ಚೇ ಇದ್ದಾರೆ. ಅವರಿಂದ ಕೆಲಸ ಮಾಡಿಸಬೇಕು. ಕೆಲಸ ಮಾಡದೇ ಇದ್ದವರನ್ನು ಮುಲಾಜಿಲ್ಲದೇ ತೆಗೆದು ಹಾಕಿ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಸೂಚಿಸಿದರು.

ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ‘ಕೆಲಸಕ್ಕೆ ಗೈರು ಹಾಜರಾಗುವ ಪೌರಕಾರ್ಮಿಕರ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. 10 ಗಂಟೆ ನಂತರ ವಾಣಿಜ್ಯ ಕಸವನ್ನು ರಸ್ತೆಗೆ ತಂದು ಹಾಕುತ್ತಿದ್ದಾರೆ. ದಂಡ ವಿಧಿಸಿದ್ದರೂ ಎಚ್ಚೆತ್ತುಕೊಂಡಿಲ್ಲ’ ಎಂದರು.

ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಂಸದ: ದಾವಣಗೆರೆಯಲ್ಲಿ 21, ಹೊನ್ನಾಳಿಯಲ್ಲಿ 13 ಗ್ರಾಮ ಪಂಚಾಯಿತಿಗಳಿಗೆ ಇಂಟರ್‌ನೆಟ್ ಸೌಲಭ್ಯ ಒದಗಿಸಿಲ್ಲ ಎಂದು ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಇಒಗಳು ದೂರಿದರು. ಇದರಿಂದ ಕೋಪಗೊಂಡ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಬಿಎಸ್‌ಎನ್‌ಎಲ್ ಎಂದರೆ ಸದ್ಯಕ್ಕೆ ದೇಶಕ್ಕೆ ಕಂಟಕ ಇದ್ದಂತೆ. ನಿಮ್ಮಿಂದ ಜನಪ್ರತಿನಿಧಿಗಳಿಗೆ ಬೆಲೆ, ಗೌರವ ಎರಡೂ ಇಲ್ಲ. ಮಾನ, ಮರ್ಯಾದೆ ಎಲ್ಲ ಹೋಗುತ್ತದೆ. ಅಷ್ಟು ಕೆಟ್ಟದಾಗಿದೆ ನಿಮ್ಮ ವ್ಯವಸ್ಥೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ಮುಳುಗಿ ಹೋಗುತ್ತೇ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ ನಿಮಗೆ ಬಹಳ ಬೇಜಾವಾಬ್ದಾರಿ ಇದೆ. ಸುಮ್ಮನೆ ಸಭೆಗೆ ಬಂದು ಕಾಫಿ ಕುಡಿದು ಊಟ ಮಾಡಿ ಹೋದರಾಯಿತೇ, ನಿಮ್ಮ ಜವಾಬ್ದಾರಿ ಏನು’ ಎಂದು ಪ್ರಶ್ನಿಸಿದರು.

ಮನೆ ನಳಗಳಿಗೆ ನೀರು: ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ‘ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಜಲಜೀವನ್ ಮಿಷನ್ ಯೋಜನೆಯಡಿ 370 ಗ್ರಾಮಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳಲಾಗಿದೆ. ಈಗಾಗಲೇ 221 ಡಿಪಿಆರ್‌ಗಳನ್ನು ತಯಾರಿಸಿ ಟೆಂಡರ್ ಕರೆಯಲಾಗಿದ್ದು, ಹೊನ್ನಾಳಿಯ ಒಂದು ಮತ್ತು ಚನ್ನಗಿರಿಯ 5 ಗ್ರಾಮಗಳಲ್ಲಿ ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ರಸ್ತೆಗಳಲ್ಲಿ ಧಾನ್ಯ ಒಕ್ಕಣೆ ಮಾಡುವರಿಗೆ ಜಾಗೃತಿ ಮೂಡಿಸಲು ಸ್ಪೆಷಲ್ ಡ್ರೈವ್ ಮಾಡುತ್ತಿದ್ದೇವೆ. ಧಾನ್ಯಗಳನ್ನು ಒಕ್ಕಣೆ ಮಾಡುವವರ ವಿರುದ್ಧ ಕೇಸ್ ಹಾಕಿ’ ಎಂದು ಸಂಬಂಧಪಟ್ಟ ಪಿಡಬ್ಲ್ಯುಡಿ ಎಂಜಿನಿಯರ್‌ಗೆ ಸೂಚಿಸಿದರು

ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ,ಸಮಿತಿ ಸದಸ್ಯರಾದ ಮುಪ್ಪಣ್ಣ, ಬಸವರಾಜ್ ಸಭೆಯಲ್ಲಿ ಇದ್ದರು.

ನೀವೇ ಅಪ್ರಾಮಾಣಿಕರಾದರೆ ಹೇಗೆ?

ಸ್ವಚ್ಛಭಾರತ ಮಿಷನ್ ಯೋಜನೆಯಡಿ ಚರ್ಚೆ ನಡೆಯುವ ವೇಳೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಸಂಸದರು ತರಾಟೆಗೆತೆಗೆದುಕೊಂಡರು.

ಅನುಪಾಲನ ವರದಿಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ್ ‌ಮುದಜ್ಜಿ ಅವರು ವೈಯಕ್ತಿಕ ಶೌಚಾಲಯದ ಬಗ್ಗೆ ತಪ್ಪಾಗಿ ಅಂಕಿ ಅಂಶಗಳನ್ನು ನೀಡಿದರು. ಆಗ ಸಂಸದರು ‘ಸೂಕ್ತಮಾಹಿತಿ ತೆಗೆದುಕೊಂಡು ಬಂದು ವಾಸ್ತವ ವರದಿ ನೀಡಬೇಕು. ನೀವೇ ಅಪ್ರಾಮಾಣಿಕರಾದರೆ ಹೇಗೆ’ ಎಂದು ಪ್ರಶ್ನಿಸಿದರು.

ಶುದ್ಧ ನೀರಿನ ಘಟಕ ರಿಪೇರಿಗೆ ಕರೆ ಮಾಡಿ

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ 9480985555 ಕರೆ ಮಾಡಿದರೆ 48 ಗಂಟೆಯೊಳಗೆ ದುರಸ್ತಿಪಡಿಸಲಾಗುವುದು ಎಂದು ಸಿಇಒ ಪದ್ಮಾ ಬಸವಂತಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT