ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲಂ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಿ

ಪಾಲಿಕೆಗೆ ಒತ್ತಾಯ
Last Updated 29 ಡಿಸೆಂಬರ್ 2018, 13:11 IST
ಅಕ್ಷರ ಗಾತ್ರ

ದಾವಣಗೆರೆ: ಸ್ಲಂಗಳು ಇನ್ನೂ ಅಭಿವೃದ್ಧಿ ಆಗಿಲ್ಲ. ಜನ ಇನ್ನೂ ಶೌಚಕ್ಕಾಗಿ ಬಯಲಿಗೆ ಹೋಗುತ್ತಿದ್ದಾರೆ. ಹಾಗಾಗಿ ಸ್ಲಂ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಅನುದಾನ ಒದಗಿಸಬೇಕು ಎಂದು ಕರ್ನಾಟಕ ಸ್ಲಂ ಆಂದೋಲನದ ಸದಸ್ಯೆ ರೇಣುಕಾ ಯಲ್ಲಮ್ಮ ಒತ್ತಾಯಿಸಿದರು.

ಪಾಲಿಕೆಯ 2019–20ನೇ ಸಾಲಿನ ಬಜೆಟ್‌ ತಯಾರಿ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಸಲಹೆ ಪಡೆಯಲು ಶನಿವಾರ ಪಾಲಿಕೆ ಮೇಯರ್‌ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಸ್ಲಂ ಜನರ ಪರ ಮಾತನಾಡಿದರು.

ಸ್ವಚ್ಛ ಭಾರತ್‌ ಯೋಜನೆಯಡಿ ಎಲ್ಲಾ ಮನೆಗಳಿಗೆ ಶೌಚಾಲಯ ನಿರ್ಮಿಸಲು ಮೊದಲ ಹಂತದ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಅರ್ಧ ಶೌಚಾಲಯದ ನಿರ್ಮಾಣಗೊಂಡಿದೆ. ಅದನ್ನು ಪೂರ್ತಿಗೊಳಿಸದೇ ಎರಡನೇ ಹಂತದ ಅನುದಾನವನ್ನು ಪಾಲಿಕೆ ನೀಡುವುದಿಲ್ಲ. ಆದರೆ ಪೂರ್ತಿ ಮಾಡಲು ಸ್ಲಂ ಜನರಲ್ಲಿ ದುಡ್ಡಿಲ್ಲ. ಪೂರ್ತಿ ಮಾಡಲು ಮೊದಲೇ ಅನುದಾನ ನೀಡಬೇಕು ಎಂದು ಸಲಹೆ ನೀಡಿದರು.

ಮಂಡಕ್ಕಿಭಟ್ಟಿಯಲ್ಲಿ ‍ಪಾರ್ಕಿಗೆ ಜಾಗ ಇದೆ. ಆದರೆ ಪಾರ್ಕ್‌ ನಿರ್ಮಾಣಗೊಂಡಿಲ್ಲ. ಹಂದಿಗಳ ವಾಸಸ್ಥಾನವಾಗಿದೆ. ಸೊಳ್ಳೆಗಳು ವಿಪರೀತವಾಗಿವೆ. ಚಿಕೂನ್‌ಗುನ್ಯಾ ಇನ್ನಿತರ ರೋಗಗಳಿಗೆ ಜನರು ತುತ್ತಾಗಿದ್ದಾರೆ. ಹಾಗಾಗಿ ಅಲ್ಲಿ ಸ್ವಚ್ಛ ಮಾಡಿ ಕೂಡಲೇ ಪಾರ್ಕ್‌ ನಿರ್ಮಿಸಲು ಅನುದಾನ ಇಡುವಂತೆ ಬೇಡಿಕೆ ಸಲ್ಲಿಸಿದರು.

ಪೌರಕಾರ್ಮಿಕರ ಮಕ್ಕಳಿಗೆ ವಾಹನ ನೀಡಿ: ಪೌರಕಾರ್ಮಿಕರ ಮಕ್ಕಳು ಶಾಲೆಗೆ ಹೋಗಲು ವಾಹನದ ವ್ಯವಸ್ಥೆ ಮಾಡಬೇಕು. ಪದವಿ, ಉನ್ನತ ಪದವಿ, ವೃತ್ತಿಪರ ಕೋರ್ಸ್‌ ಮುಂತಾದವುಗಳನ್ನು ಮಾಡುವ ಪೌರಕಾರ್ಮಿಕರ ಮಕ್ಕಳಿಗೆ ಸಾಲ ಸೌಲಭ್ಯ ಒದಗಿಸಬೇಕು. ಗಾಂಧಿನಗರದಲ್ಲಿ ಉಚಿತ ಆಸ್ಪತ್ರೆಯನ್ನು ತೆರೆಯಬೇಕು ಎಂದು ಬಾಪೂಜಿ ಯುವಕ ಸಂಘದ ಚಿದಾನಂದ ಬೇಡಿಕೆ ಇಟ್ಟರು.

ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕು. ಉಪ ಬಂಧೀಖಾನೆಯನ್ನು ಸ್ಥಳಾಂತರಿಸಬೇಕು. ಅಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಬೇಕು. ಕೆ.ಆರ್‌. ರಸ್ತೆಯಿಂದ ಪಿ.ಬಿ. ರಸ್ತೆಗೆ ಬರಲು ಲಿಂಗೇಶ್ವರ ದೇವಸ್ಥಾನದ ಮುಂಭಾಗ ಅಂಡರ್‌ಪಾಸ್‌ ನಿರ್ಮಿಸಬೇಕು. ಶಿರಮಗೊಂಡನಹಳ್ಳಿ ಕಡೆಯಿಂದ ಎನ್‌.ಎಚ್‌. 4 ಅಂಡರ್‌ಪಾಸ್‌ ಅಪಾಯಕಾರಿಯಾಗಿದೆ. ಅದನ್ನು ವಿಸ್ತರಣೆ ಮಾಡಿ ಅಪಾಯ ತಪ್ಪಿಸಬೇಕು. ಇದಕ್ಕೆ ಬಜೆಟಲ್ಲಿ ಅನುದಾನ ಮೀಸಲಿಡಬೇಕು ಎಂದು ಪ್ರಗತಿಪರ ಹೋರಾಟಗಾರ ಡಿ. ಅಸ್ಲಂಖಾನ್‌ ಸಲಹೆ ನೀಡಿದರು.

ಲೋಕಿಕೆರೆ ರಸ್ತೆಯಲ್ಲಿರುವ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು ವಲಯಕ್ಕೆ ಒಳಚರಂಡಿ ಸಹಿತ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಸಣ್ಣ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ ಬಿ. ಶಂಭುಲಿಂಗಪ್ಪ ಮನವಿ ಮಾಡಿಕೊಂಡರು.

ಕುಂದವಾಡ ಕೆರೆ ಮೀಸಲು ಸಂರಕ್ಷಿತ ಕೆರೆ ಪ್ರದೇಶವಾಗಲಿ: ಎಸ್‌.ಎಸ್‌. ಮಲ್ಲಿಕಾರ್ಜುನ ಸಾಗರವನ್ನು (ಕುಂದವಾಡ ಕೆರೆ) ಮೀಸಲು ಸಂರಕ್ಷಿತ ಕೆರೆ ಪ್ರದೇಶ ಎಂದು ಘೋಷಣೆ ಮಾಡಬೇಕು ಎಮ್ಮೆಗಳ ಮೈತೊಳೆಯುವುದು, ಮೀನು ಹಿಡಿಯುವುದು, ವಾಹನ ತೊಳೆಯುವುದನ್ನು ನಿರ್ಬಂಧಿಸಬೇಕು. ಹಕ್ಕಿಗಳ ಕಲರವ ಉಳಿಸಬೇಕು ಎಂದು ಪರಿಸರ ಸಂರಕ್ಷಣೆ ವೇದಿಕೆಯ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನಿ ಸಲಹೆ ನೀಡಿದರು.

18 ಶೇಕಡಾ ಅನುದಾನದಲ್ಲಿ ಬಡವರು, ಕೂಲಿಕಾರ್ಮಿಕರು, ಪೌರಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಿ. ಬಡವರಿಗಾಗಿ ಇರುವ ನಲ್ಲಿಯನ್ನು ಉಳ್ಳವರು ಬಳಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಸೋಮನಾಥಪುರ ಹನುಮಂತಪ್ಪ ತಿಳಿಸಿದರು.

ಚನ್ನಗಿರಿ ರಂಗಮಂದಿರಕ್ಕೆ ಗೇಟ್‌ ಅಳವಡಿಸಬೇಕು. ಶುದ್ಧ ನೀರಿನ ಘಟಕಗಳನ್ನು ಇನ್ನಷ್ಟು ತೆರೆಯಬೇಕು. ಪಿ.ಬಿ. ರಸ್ತೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪಾತ್‌ ಮಾಡಬೇಕು ಎಂದು ಕೆ.ಜಿ. ಶಿವಕುಮಾರ್‌ ತಿಳಿಸಿದರು. ಮಕ್ಕಳ ವಿಜ್ಞಾನ ಚಟುವಟಿಕೆಗೆ ಪ್ರತ್ಯೇಕವಾಗಿ ಅನುದಾನ ಇಡಬೇಕು ಎಂದು ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಕೋರಿದರು.

ಶಿವಯೋಗಿ ಸ್ವಾಮಿ, ಗಿರೀಶ್‌, ರಾಜೇಂದ್ರ ಕುಮಾರ್‌, ಪಾಲಿಕೆ ಸದಸ್ಯರಾದ ತಿಪ್ಪಣ್ಣ, ಹಾಲೇಶ್‌ ಸಲಹೆ ನೀಡಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪಮೇಯರ್‌ ಕೆ. ಚಮನ್‌ಸಾಬ್‌, ಆಯುಕ್ತ ಮಂಜುನಾಥ ಬಳ್ಳಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT