ಭಾನುವಾರ, ಆಗಸ್ಟ್ 14, 2022
26 °C
ವಿಶ್ವ ಏಡ್ಸ್‌ ನಿಯಂತ್ರಣ ದಿನಾಚರಣೆ ಉದ್ಘಾಟಿಸಿದ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ

‘ಪ್ರೌಢಶಾಲೆಯಿಂದ ಲೈಂಗಿಕ ಶಿಕ್ಷಣ ಅಗತ್ಯ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರೌಢಶಾಲೆಯಿಂದಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸಬೇಕು. ಆಗ ಏಡ್ಸ್‌ನಂಥ ಮಾರಕ ರೋಗಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಂಜೀವಿನಿ ಪಾಸಿಟಿವ್ ನೆಟ್‌ವರ್ಕ್, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಜಿಲ್ಲೆಯ ರಕ್ತನಿಧಿ ಕೇಂದ್ರಗಳು, ಆರ್‌ಆರ್‌ಸಿ ಕಾಲೇಜುಗಳು, ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಮಂಗಳವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ. ನಾವು ಆ ವಯಸ್ಸಿನಲ್ಲಿ ಇರುವಾಗ ಶಾಲೆಯಲ್ಲಿ ತಿಳಿವಳಿಕೆ ನೀಡುತ್ತಿದ್ದರು. ಇತ್ತೀಚೆಗೆ ಈ ಬಗ್ಗೆ ಅರಿವು ಹೆಚ್ಚುತ್ತಿದೆ. ಆದರೂ ಎಚ್‌ಐವಿ ಪೀಡಿತರನ್ನು ತಾರತಮ್ಯದಿಂದ ಕಾಣಲಾಗುತ್ತಿದೆ. ಮನೆಯ ಅಕ್ಕಪಕ್ಕದಲ್ಲಿ, ಕೆಲಸದ ಸ್ಥಳಗಳಲ್ಲಿ ಭೇದಭಾವದಿಂದ ನೋಡಲಾಗುತ್ತಿದೆ. ಸಂತ್ರಸ್ತರು ಈ ಬಗ್ಗೆ ದೂರು ನೀಡಬಹುದು. ಈ ಅಪರಾಧಕ್ಕೆ 1 ಲಕ್ಷ ವರೆಗೆ ದಂಡ, ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ’ ಎಂದು ತಿಳಿಸಿದರು.

ಏಡ್ಸ್ ಬಗ್ಗೆ ತಿಳಿದುಕೊಂಡು, ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಈ ರೋಗ ಬಾರದಂತೆ ತಡೆಯಬಹುದು. ದೇವದಾಸಿ, ಮುತ್ತು ಕಟ್ಟುವಂತಹ ಪದ್ದತಿಗಳು ನಿಲ್ಲಬೇಕು. ಇದನ್ನು ಹೋಗಲಾಡಿಸಲು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಆದರೆ ಮೂಢನಂಬಿಕೆಯಿಂದ ಜನ ಹೊರ ಬಾರದೆ ಇಂಥ ಪದ್ಧತಿಗಳನ್ನು ತೊಡೆದು ಹಾಕಲು ಕಷ್ಟಸಾಧ್ಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಂಜುನಾಥ ಕುರ್ಕಿ, ‘ಏಡ್ಸ್‌ಗೆ ಸಂಬಂಧಿಸಿದಂತೆ ರಾಜ್ಯ ಕಳೆದ ಸಾಲಿನಲ್ಲಿ 9ನೇ ಸ್ಥಾನದಲ್ಲಿತ್ತು. ನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಪ್ರಸಕ್ತ ಸಾಲಿನಲ್ಲಿ 16ನೇ ಸ್ಥಾನಕ್ಕೆ ಬಂದಿದೆ. ಮಕ್ಕಳ ಕೈಯಲ್ಲಿ ಕಲಿಕೆಯ ಸಾಧನವಾಗಿರುವ ಮೊಬೈಲ್‌ನ ಬಳಕೆಯು ಯುವಜನರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತಿದೆ. ಇದು ಕೂಡ ರೋಗಗಳಿಗೆ ಎಡೆ ಮಾಡಬಹುದು. ಮಕ್ಕಳ ಮೊಬೈಲ್ ಬಳಕೆಯ ಕಡೆ ಪೋಷಕರು ಕಣ್ಣಿಡಬೇಕು. ಶಾಲೆಗಳಲ್ಲಿ ಸಾಮಾಜಿಕ, ನೈತಿಕ ಪಠ್ಯ ಕಾಣೆಯಾಗುತ್ತಿರುವುದು ಕೂಡ ಯುವಜನರು ದಾರಿ ತಪ್ಪಲು ಕಾರಣ’ ಎಂದು ವಿಶ್ಲೇಷಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ ಏಡ್ಸ್ ನಿಯಂತ್ರಣ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಕೆ.ಎಚ್. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಿಎಲ್‌ಒ ಡಾ.ಮುರಳೀಧರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್, ಚಿಗಟೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ.ಡಿ.ಎಚ್. ಗೀತಾ, ಎಆರ್‌ಟಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಕೃಪಾ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.

ಸನ್ಮಾನ

ಎಚ್‌ಐವಿ/ಏಡ್ಸ್ ಕ್ಷೇತ್ರಲ್ಲಿ ಸೇವೆ ಸಲ್ಲಿಸಿರುವ ವಿವಿಧ ಸಂಸ್ಥೆಗಳು ಮತ್ತು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳು, ಅತ್ಯುತ್ತಮ ಎಆರ್‌ಟಿ ಕೇಂದ್ರಗಳು ಮತ್ತು ಆರ್‌ಆರ್‌ಸಿ ಕಾಲೇಜುಗಳ ಪ್ರಿನ್ಸಿಪಾಲರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು