ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಕಾಲು ಸೆಳೆತ ರೋಗಕ್ಕೆ ಕುರಿಗಳ ನಿತ್ಯಬಲಿ

ಶಾಸಕರು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಕುರಿಗಾಹಿಗಳ ಪ್ರತಿಭಟನೆ
Last Updated 1 ಡಿಸೆಂಬರ್ 2021, 5:17 IST
ಅಕ್ಷರ ಗಾತ್ರ

ಹಿರಿಯೂರು: ಕಾಲು ಸೆಳೆತ ರೋಗದಿಂದ ನಾಲ್ಕು ವಾರಗಳಿಂದ ನಿತ್ಯ ಕುರಿ–ಮೇಕೆಗಳು ಸಾಯುತ್ತಿವೆ. ಪಶು ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗದ ಕಾರಣ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಮಾರೇನಹಳ್ಳಿಯಲ್ಲಿ ಕುರಿಗಾಹಿಗಳು ಮಂಗಳವಾರ ಮೃತಪಟ್ಟ ಕುರಿಗಳನ್ನು ರಸ್ತೆಯ ಮೇಲಿಟ್ಟು ಪ್ರತಿಭಟನೆ ನಡೆಸಿದರು.

‘ನಮ್ಮ ಬದುಕಿಗೆ ಕುರಿ-ಮೇಕೆಗಳೇ ಆಧಾರ. ಕಣ್ಣೆದುರಿಗೆ ಕುರಿ–ಮೇಕೆಗಳು, ವಿಶೇಷವಾಗಿ ಮರಿಗಳು ಕುಂಟುತ್ತ ಕುಂಟುತ್ತಲೇ ಸತ್ತುಬೀಳುತ್ತಿವೆ. ಪಶು ವೈದ್ಯಾಧಿಕಾರಿಗಳು ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಶಾಸಕರು ಪಶು ಇಲಾಖೆಯ ತಜ್ಞರ ತಂಡವೊಂದನ್ನು ಕರೆತಂದು ಕುರಿಗಳಿಗೆ ಚಿಕಿತ್ಸೆ ಕೊಡಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಸುಮಾರು 25 ವರ್ಷಗಳಿಂದ ಇಂತಹ ಮಳೆ ಕಂಡಿರಲಿಲ್ಲ. ಸತತ ಮಳೆಯ ಜೊತೆಗೆ ಶೀತವೂ ಹೆಚ್ಚಾಗಿರುವ ಕಾರಣ ಕುರಿ ಮೇಕೆಗಳಲ್ಲಿ ಕಾಲು ಸೆಳೆತ ರೋಗ ಕಾಣಿಸಿಕೊಂಡಿದೆ. 20 ದಿನಗಳಲ್ಲಿ 300ಕ್ಕೂ ಹೆಚ್ಚು ಕುರಿ- ಮೇಕೆಗಳು ಸತ್ತಿವೆ. ನಿತ್ಯವೂ ಸಾವಿನ ಸರಣಿ ಮುಂದುವರಿದಿದೆ. ರೋಗ ಪೀಡಿತ ಕುರಿ–ಮೇಕೆಗಳನ್ನು ಯರಬಳ್ಳಿ ಪಶು ಆಸ್ಪತ್ರೆಗೆ ಹೊಡೆದುಕೊಂಡು ಹೋಗಬೇಕು. ಇಲ್ಲಿಂದ ಯಾವುದೇ ವಾಹನ ಸೌಲಭ್ಯ ಇಲ್ಲ. ಆಟೊದವರು ಒಮ್ಮೆಗೆ ₹ 200 ಬಾಡಿಗೆ ಕೇಳುತ್ತಾರೆ. ವೈದ್ಯರನ್ನು ಊರಿಗೇ ಬರುವಂತೆ ಮಾಡಿ ಚಿಕಿತ್ಸೆ ಕೊಡಿಸಬೇಕು’ ಎಂದು ಮನವಿ ಮಾಡಿದರು.

‘ಗ್ರಾಮದ ಮೂಡಲ ಗಿರಿಯಪ್ಪ ಅವರ 20, ಧನಂಜಯ 30, ನಿಂಗಣ್ಣ 41, ಚಿಕ್ಕಣ್ಣ 15, ಜಡಿಯಪ್ಪ 29, ಜಯಣ್ಣ 26, ನಿಂಗಣ್ಣ 18, ಕಿಟ್ಟಣ್ಣ 27, ಶಿವಣ್ಣ ಅವರ 23 ಕುರಿಗಳು ಒಳಗೊಂಡಂತೆ ಹಲವರು ಕುರಿಗಳನ್ನು ಕಳೆದುಕೊಂಡಿದ್ದಾರೆ. ಇದು ಸಾಲದು ಎಂಬಂತೆ ಈರುಳ್ಳಿ, ಶೇಂಗಾ ಬೆಳೆಯೂ ಮಳೆಗೆ ಬಲಿಯಾಗಿದ್ದು, ನಮ್ಮ ಬದುಕು ಬೀದಿಗೆ ಬಿದ್ದಿದೆ. ರೋಗದಿಂದ ಸತ್ತ ಕುರಿಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ತಿಪ್ಪೆಯಲ್ಲಿ ಹೂಳುತ್ತಿದ್ದೇವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ–ಮೇಕೆಯ ಬೆಲೆ ಆರೇಳು ಸಾವಿರ ರೂಪಾಯಿ ಇದೆ. ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಪ್ರೇಮಕ್ಕ ಎಂಬ ಕುರಿಗಾಹಿ ನೋವು ವ್ಯಕ್ತಪಡಿಸಿದರು.

‘ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಮರಿಗಳೂ ಒಳಗೊಂಡು ಅಕಾಲಿಕ ಮರಣಕ್ಕೆ ತುತ್ತಾಗುವ ಎಲ್ಲ ಕುರಿ–ಮೇಕೆಗಳಿಗೆ ಪರಿಹಾರ ಕೊಡಿಸಬೇಕು’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಧನಂಜಯ, ತರಕಾರಿ ನಿಂಗಣ್ಣ, ಶಿವಣ್ಣ, ಕಿಟ್ಟಣ್ಣ, ವೀರಣ್ಣ, ಶಿವಣ್ಣ, ಮುದಿಯಪ್ಪ, ಮುಕುಂದ, ಜಡಿಯಪ್ಪ, ಚಿಕ್ಕಣ್ಣ, ಪಾತಲಿಂಗಪ್ಪ, ಪಾತಲಿಂಗಮ್ಮ, ತಿಪ್ಪಕ್ಕ, ಈರಣ್ಣ, ಪಾತಲಿಂಗಪ್ಪ, ಗೋವಿಂದಪ್ಪ, ರಾಜಣ್ಣ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT