ಭಾನುವಾರ, ಜನವರಿ 23, 2022
27 °C
ಹೆಬ್ಬಳಗೆರೆ ಗ್ರಾಮದ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ ತರಳಬಾಳುಶ್ರೀ

ನೀರಾವರಿ ಯೋಜನೆಯಿಂದ ಬದುಕು ಹಸನು: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ಬಳಗೆರೆ (ಚನ್ನಗಿರಿ): ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆಯಿಂದ ಎರಡೂ ಜಿಲ್ಲೆಗಳ ರೈತರ ಬದುಕು ಹಸನಾಗಲು ಸಹಕಾರಿಯಾಗಿದೆ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ಉಬ್ರಾಣಿ ಏತ ನೀರಾವರಿ ಮುಂದುವರಿದ ಯೋಜನೆ ಅಡಿ ತುಂಬಿದ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಉಬ್ರಾಣಿ ಹೋಬಳಿಯ 90ಕ್ಕಿಂತ ಹೆಚ್ಚು ಕೆರೆಗಳಿಗೆ ಭದ್ರಾ ನದಿಯ ನೀರನ್ನು ಪೈಪ್‌ಗಳ ಮೂಲಕ ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವು ಕೆರೆಗಳು ಕೈ ಬಿಟ್ಟು ಹೋಗಿದ್ದವು. ನಂತರ ಮುಂದುವರಿದ ಕಾಮಗಾರಿ ನಡೆಸಿ, ಪೈಪ್‌ಗಳ ಮೂಲಕ ಹೆಬ್ಬಳಗೆರೆ, ವಡ್ನಾಳ್ ಹಾಗೂ ಬೆಂಕಿಕೆರೆ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹಾಗೆಯೇ ಮುಂದಿನ ಹಂತದಲ್ಲಿ ಹೊದಿಗೆರೆ ಕೆರೆಯನ್ನು ತುಂಬಿಸಲಾಗುತ್ತದೆ. ಕೆರೆಗಳು ತುಂಬಿರುವುದರಿಂದ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೇಸಿಗೆಯಲ್ಲಿ ನೀರಿನ ತೊಂದರೆ ತಪ್ಪಲಿದೆ ಎಂದರು.

ಅದೇ ರೀತಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಹೊನ್ನಾಳಿಯಲ್ಲಿ ಕೆಲವು ರೈತರು ಕಾಮಗಾರಿಗೆ ಅಡ್ಡಿಪಡಿಸಿದ್ದರು. ಈಗ ಸಮಸ್ಯೆ ಬಗೆಹರಿಸಲಾಗಿದೆ. ಮೂರು ಅಥವಾ ನಾಲ್ಕು ತಿಂಗಳಲ್ಲಿ ಮೊದಲನೇ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಯೋಜನೆ ಅಡಿ ತಾಲ್ಲೂಕಿನ ಕಸಬಾ ಮತ್ತು ಸಂತೇಬೆನ್ನೂರು ಹೋಬಳಿಯ 90ಕ್ಕಿಂತ ಹೆಚ್ಚು ಕೆರೆಗಳು ತುಂಬಲಿವೆ ಎಂದು ಹೇಳಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ವಡ್ನಾಳ್, ಹೆಬ್ಬಳಗೆರೆ, ಬೆಂಕಿಕೆರೆ ಹಾಗೂ ಹೊದಿಗೆರೆ ಗ್ರಾಮದ ಕೆರೆಗಳನ್ನು ಮುಂದುವರಿದ ಕಾಮಗಾರಿ ಅಡಿ ತುಂಬಿಸಲು ₹ 11.50 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕಾಮಗಾರಿ ಮುಗಿದಿದ್ದು, ವಡ್ನಾಳ್, ಹೆಬ್ಬಳಗೆರೆ ಮತ್ತು ಬೆಂಕಿಕರೆ ಗ್ರಾಮದ ಕೆರೆಗಳು ತುಂಬಿವೆ. ಇನ್ನು ಹೊದಿಗೆರೆ ಗ್ರಾಮದ ಕೆರೆಗೆ ಹೋಗುವ ಪೈಪ್ ಹೊಡೆದು ಹೋಗಿದ್ದು ಶೀಘ್ರದಲ್ಲಿ ಹೊಸ ಪೈಪ್ ಅಳವಡಿಸಿ ಕೆರೆಯನ್ನು ತುಂಬಿಸಲಾಗುವುದು ಎಂದು ಹೇಳಿದರು.

ಹೆಬ್ಬಳಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉಮೇಶ್, ಕೆ.ಸಿ. ಕೆಂಚಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಬಸವರಾಜಪ್ಪ, ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.