ದಾವಣಗೆರೆ: ‘ಕೊರೊನಾ ಎನ್ನುವುದು ಸಾಮಾನ್ಯ ಕಾಯಿಲೆ. ನಿರ್ಲಕ್ಷ್ಯ ವಹಿಸಿದರೆ ಗಂಭೀರ ಸೋಂಕು ಆಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ನಾನು ಪರೀಕ್ಷೆ ಮಾಡಿಸಿದೆ. ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ತೆಗೆದುಕೊಂಡೆ’.
ಕೊರೊನಾ ಸೋಂಕು ತಗುಲಿದವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುತ್ತಿದ್ದ, ಅದೇ ಕಾರಣದಿಂದ ಸೋಂಕು ತಗುಲಿ ಇದೀಗ ಗುಣಮುಖರಾಗಿ ಬಿಡುಗಡೆಗೊಂಡಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ‘ಪ್ರಜಾವಾಣಿ’ ಜತೆ ಹಂಚಿಕೊಂಡ ಅನುಭವ ಇದು.
‘ಐಸೊಲೇಶನ್ ವಾರ್ಡ್‌ಗೆ ಸತತವಾಗಿ ಹೋಗಬೇಕಿತ್ತು. ಕೊರೊನಾ ಸೋಂಕಿತರ ಜತೆ ಸಂಪರ್ಕ ಉಂಟಾಗಿತ್ತು. ಹಾಗಾಗಿ ನನಗೂ ಕೊರೊನಾ ಬಂದಿರಬೇಕು. ಎರಡು ವಾರಗಳ ಹಿಂದೆ ಲಘು ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಕೂಡಲೇ ಟೆಸ್ಟ್ ಮಾಡಿಸಿದೆ. ರ‍್ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂತು. ಆರ್‌ಟಿಪಿಸಿಆರ್ ಮಾಡಿಸಿದೆ. ರೋಗ ಲಕ್ಷಣಗಳು ಕಡಿಮೆಯಾದ ಹೊತ್ತಿಗೆ ಅದರ ಫಲಿತಾಂಶ ಪಾಸಿಟಿವ್ ಎಂದು ಬಂದಿತ್ತು’ ಎಂದು ವಿವರಿಸಿದರು.
‘ಆರೋಗ್ಯವಾಗಿದ್ದೇನೆ ಎಂದನ್ನಿಸಿತು. ಆದರೂ ರಕ್ತ ಪರೀಕ್ಷೆ, ಇಸಿಜಿ ಸಹಿತ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆ. ಆಗ ಹೃದಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸಮಸ್ಯೆ ಇರುವುದು ಗೊತ್ತಾಯಿತು. ಅದಕ್ಕೆ ಇಂಜೆಕ್ಷನ್ ತೆಗೆದುಕೊಂಡೆ. ಡಾ. ಗಿರೀಶ್ ಅವರ ಆರೈಕೆಯಲ್ಲಿ ಅವರು ಸೂಚಿಸಿದ ಔಷಧಗಳನ್ನು ಚಾಚೂ ತಪ್ಪದೇ ತೆಗೆದುಕೊಂಡೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಿನಕ್ಕೆ ಎರಡು ಬಾರಿ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ‘ಬೇಗ ಗುಣಮುಖರಾಗಿ ಬನ್ನಿ’ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಸಿಇಒ ಮೇಡಂ ಸಹಿತ ಎಲ್ಲ ಅಧಿಕಾರಿಗಳು ನನ್ನ ಯೋಗಕ್ಷೇಮ ವಿಚಾರಿಸಿದರು ಎಂದು ನೆನಪು ಮಾಡಿಕೊಂಡರು.
‘ಸೋಂಕಿನಿಂದ ಬೇಗ ಚೇತರಿಸಿಕೊಂಡು ಮತ್ತೆ ನೀವು ಕರ್ತವ್ಯಕ್ಕೆ ಹಾಜರಾಗುತ್ತೀರಿ. ಏನು ಹೆದರಬೇಡಿ ಎಂದು ಮನೆಯವರು, ಮಗಳು ಸ್ಥೈರ್ಯ ತುಂಬಿದರು. ನಾನು ನಾಲ್ಕೈದು ತಿಂಗಳುಗಳಿಂದ ಮನೆಯಲ್ಲಿ ಉಳಿದುಕೊಳ್ಳುತ್ತಿಲ್ಲ. ಹಾಗಾಗಿ ಮನೆಯಲ್ಲಿ ಏನೂ ಸಮಸ್ಯೆಯಾಗಿಲ್ಲ. ಮುಂದಿನ ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ’ ಎಂದು ತಿಳಿಸಿದರು.
ತುಂಬಾ ಸರಳವಾಗಿ ಗುಣವಾಗುವ ಈ ಕಾಯಿಲೆಯ ಬಗ್ಗೆ ಯಾರೂ ಭಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ಆದರೆ, ರೋಗದ ಲಕ್ಷಣ ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಐಸೊಲೇಶನ್ ವ್ಯವಸ್ಥೆ ಅರ್ಥ ಮಾಡಿಕೊಳ್ಳದ ಜನ
ಕೊರೊನಾ ಸೋಂಕು ಇದ್ದವರನ್ನು ವೈದ್ಯರು, ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಸಂಪರ್ಕಿಸದಿರಲಿ ಎಂದು ಐಸೊಲೇಶನ್ ವಾರ್ಡ್ ಮಾಡಲಾಗಿದೆ. ಆದರೆ ಜನರು ತಮ್ಮವರನ್ನು ಕಾಣಲೆಂದು ನೇರವಾಗಿ ಐಸೊಲೇಶನ್ ವಾರ್ಡ್‌ಗೆ ಬರುತ್ತಾರೆ. ಬಿಡದೇ ಇದ್ದರೆ ಗಲಾಟೆ ಮಾಡುತ್ತಾರೆ. ಒಳಗೆ ಬಂದು ಸೋಂಕಿತರ ಜತೆಗೆ ಕುಳಿತು ಊಟ ಮಾಡುತ್ತಾರೆ ಎಂದು ಡಾ. ರಾಘವನ್ ವಿಷಾದಿಸಿದರು.
ಆರೋಗ್ಯ ಇಲಾಖೆಯ ವೈದ್ಯರು, ಡಾಟ ಎಂಟ್ರಿ ಸಿಬ್ಬಂದಿ, ಶುಶ್ರೂಷಕರು, ಕ್ಷೇತ್ರ ಕಾರ್ಯ ಸಿಬ್ಬಂದಿ, ಆಶಾಕಾರ್ಯಕರ್ತರು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು, ವಾಹನ ಚಾಲಕರು, ಆಂಬುಲೆನ್ಸ್ ಚಾಲಕರು ಹೀಗೆ ಎಲ್ಲರೂ ಜನರಿಗಾಗಿ ಕೆಲಸ ಮಾಡುತ್ತಿರುವುದರಿಂದ ಅವರಿಗೂ ಕೊರೊನಾ ಬರುತ್ತಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮರ್ಥ್ಯಕ್ಕಿಂತ ಅಧಿಕ ಜನ
ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ. ಉತ್ತಮ ವೈದ್ಯರು, ಆರೋಗ್ಯ ಸಿಬ್ಬಂದಿ ಇದ್ದಾರೆ. ಬಿಸಿನೀರು, ಊಟ, ಚಿಕಿತ್ಸೆ ಎಲ್ಲವೂ ಚೆನ್ನಾಗಿದೆ. ಆಸ್ಪತ್ರೆಯ ಸಾಮರ್ಥ್ಯವನ್ನು ಮೀರಿ ಸೋಂಕಿತರು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಮುಂದೆ ಬೆಡ್
ಸಂಖ್ಯೆ ಹೆಚ್ಚಿಸಿದರೆ ಈ ಸಮಸ್ಯೆ ನಿವಾರಣೆಯಾಗಲಿದೆ. ಆ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಡಾ. ಜಿ.ಡಿ. ರಾಘವನ್ ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.