ವ್ಯಾಪಾರ ಕುಸಿತ: ಮಂಡಿಪೇಟೆ ವರ್ತಕರಿಂದ ಪ್ರತಿಭಟನೆ

7
ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬ: ವ್ಯಾಪಾರಸ್ಥರು, ಗ್ರಾಹಕರ ಜೀವಕ್ಕೆ ಆಪತ್ತು

ವ್ಯಾಪಾರ ಕುಸಿತ: ಮಂಡಿಪೇಟೆ ವರ್ತಕರಿಂದ ಪ್ರತಿಭಟನೆ

Published:
Updated:
Deccan Herald

ದಾವಣಗೆರೆ: ನಗರದ ಮಂಡಿಪೇಟೆ, ಎಂ.ಜಿ. ರಸ್ತೆ, ಚೌಕಿಪೇಟೆ, ಎನ್‌.ಆರ್‌. ರಸ್ತೆಗಳಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿಯ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಶುಕ್ರವಾರ ಬೀದಿಗಿಳಿದು ಪ್ರತಿಭಟಿಸಿದರು.

ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳದೇ ಇರುವುದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕೆಲಸ ನನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೂರು ತಿಂಗಳ ಹಿಂದೆಯೇ ಜೆಸಿಬಿ ಬಳಸಿ ರಸ್ತೆಯನ್ನು ಅಗೆಯಲಾಗಿದೆ. ಮಳೆಗಾಲವಾಗಿದ್ದರಿಂದ ಗುಂಡಿಗೆ ಬಿದ್ದು ಕೆಲವರು ಗಾಯಗೊಂಡಿದ್ದಾರೆ. ಅಂಗಡಿಗೆ ಬರಲು ಸರಿಯಾಗಿ ದಾರಿ ಇಲ್ಲದೇ ಇರುವುದರಿಂದ ಗ್ರಾಹಕರು ಬರುತ್ತಿಲ್ಲ. ವ್ಯಾಪಾರವಾಗದೇ ಸಾಲಗಾರರಾಗುತ್ತಿದ್ದೇವೆ. ಕಾಮಗಾರಿ ಯಾವಾಗ ಆರಂಭಿಸಲಾಗಿದೆ? ಅದು ಯಾವಾಗ ಮುಗಿಯಲಿದೆ? ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂಬ ವಿವರಗಳ ಫಲಕವನ್ನೂ ಹಾಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಮೂರು ತಿಂಗಳ ಹಿಂದೆಯೇ ರಸ್ತೆ ಕೆಲಸ ಆರಂಭಿಸಲಾಗಿದೆ. ನಂತರ ಕೆಲಸವು ಪ್ರಗತಿ ಕಾಣಲಿಲ್ಲ. ವ್ಯಾಪಾರ ವಹಿವಾಟು ನಡೆಸಲು ಆಗುತ್ತಿಲ್ಲ’ ಎಂದು ರಾಜೇಶ್ವರಿ ಸ್ವೀಟ್ಸ್‌ನ ಮಾಲೀಕ ರಾಜು ಅಳಲು ತೋಡಿಕೊಂಡರು.

‘ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ. ಈ ಬಗ್ಗೆ ಗುತ್ತಿಗೆದಾರರನ್ನು ಕೇಳಿದರೆ, ತಮಗೆ ಆರು ತಿಂಗಳ ಕಾಲಾವಕಾಶವಿದೆ ಎನ್ನುತ್ತಿದ್ದಾರೆ. ಕೆಲಸವನ್ನು ಏಕೆ ತೀವ್ರಗತಿಯಲ್ಲಿ ನಡೆಸುತ್ತಿಲ್ಲ ಎಂಬ ಬಗ್ಗೆ ತಿಳಿಯುತ್ತಿಲ್ಲ’ ಎಂದು ವ್ಯಾಪಾರಿ ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು. 

‘ಕಾಮಗಾರಿ ಶೇ 30ರಷ್ಟು ಪ್ರಗತಿಯಾಗಿಲ್ಲ. ನಮಗೆ ಸಂಚರಿಸಲು ಕಾಲುಹಾದಿಯನ್ನು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಈ ಹಿಂದೆಯೇ ಮನವಿ ಸಲ್ಲಿಸಿದ್ದೆವು. ಎಂಜಿನಿಯರ್‌ಗಳು ಇನ್ನೂ ಸ್ಪಂದಿಸಿಲ್ಲ. ಹೀಗಾಗಿ ಸಹನೆಯ ಕಟ್ಟೆ ಒಡೆದು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ’ ಎಂದು ವ್ಯಾಪಾರಿ ರಾಜು ಮೌರ್ಯ ತಿಳಿಸಿದರು.

‘ಈಗ ಹಬ್ಬದ ಸೀಜನ್‌ ಶುರುವಾಗಿದೆ. ರಸ್ತೆ ಸರಿಯಾಗಿ ಇಲ್ಲದೇ ಇರುವುದರಿಂದ ನಮಗೆ ವ್ಯಾಪಾರ ನಡೆಯುತ್ತಿಲ್ಲ. ಬಹುತೇಕ ಹೋಲ್‌ಸೇಲ್‌ ವ್ಯಾಪಾರಸ್ಥರ ಅಂಗಡಿಗಳು ಇಲ್ಲಿಯೇ ಇವೆ. ಜಿಲ್ಲೆಯ ಸಣ್ಣ ವ್ಯಾಪಾರಸ್ಥರು ಇಲ್ಲಿಗೆ ಬಂದು ವಸ್ತುಗಳನ್ನು ಖರೀದಿಸಬೇಕಾಗಿದೆ. ಇಲ್ಲಿ ಓಡಾಡುವಾಗ ದಿನಾಲೂ ಜನ ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಸ್ತೆಗಳು ಹಾಳಾಗಿರುವುದರಿಂದ ಅಂಗಡಿಗಳಿಗೆ ಸಾಮಾನು ತಂದು ಹಾಕಲು ತೀವ್ರ ತೊಂದರೆಯಾಗುತ್ತಿದೆ. ಸುಮಾರು 500 ಮೀಟರ್‌ ದೂರದಲ್ಲಿ ಗಾಡಿ ನಿಲ್ಲಿಸಿ ಹೊತ್ತುಕೊಂಡು ಹೋಗಿ ತಲುಪಿಸಬೇಕಾಗಿದೆ. ಇದರಿಂದಾಗಿ ಹಮಾಲಿ ಹಾಗೂ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ಹಾಕುತ್ತಿದ್ದಾರೆ’ ಎಂದು ಗೂಡ್ಸ್‌ ಆಟೊ ಚಾಲಕ ಬಿಸ್ಮಿಲ್ಲಾ ತಮ್ಮ ಕಷ್ಟವನ್ನು ಹೇಳಿಕೊಂಡರು.

ಹಮಾಲಿಗಳ ಆದಾಯಕ್ಕೂ ಕುತ್ತು
‘ರಸ್ತೆಗಳನ್ನು ಅಗೆದಿರುವುದರಿಂದ ಅಂಗಡಿ ಬಳಿ ನಮ್ಮ ಕೈಗಾಡಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ದೂರದಲ್ಲೆಲ್ಲೋ ನಿಲ್ಲಿಸಿ ಅಂಗಡಿಗೆ ಬಂದು ಚೀಲವನ್ನು ಹೊತ್ತುಕೊಂಡು ಹೋಗಬೇಕಾಗಿದೆ. ಇಕ್ಕಟ್ಟಾದ ಹಾಗೂ ಅಪಾಯಕಾರಿ ಕಾಲುದಾರಿಯಲ್ಲಿ ಚೀಲ ಹೊತ್ತುಕೊಂಡು ಹೋಗುವಾಗ ಕೆಳಗೆ ಬೀಳುವ ಆತಂಕ ಕಾಡುತ್ತದೆ’ ಎಂದು ತಮ್ಮ ಸಂಕಟವನ್ನು ಹೇಳಿಕೊಳ್ಳುತ್ತ ರಫೀಕ್‌ ಕೈಗಾಡಿಗೆ ಚೀಲವನ್ನು ತಂದು ಹಾಕಿದರು.

‘ದೂರದವರೆಗೆ ಚೀಲವನ್ನು ಹೊತ್ತುಕೊಂಡು ಬರಬೇಕಾಗಿರುವುದರಿಂದ ಹೆಚ್ಚಿನ ಚೀಲವನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಒಂದು ಚೀಲಕ್ಕೆ ನಮಗೆ ₹ 8 ಕೊಡುತ್ತಾರೆ. ಮೊದಲು ಹಮಾಲಿಯಿಂದ ದಿನಕ್ಕೆ ₹ 700ರಿಂದ ₹ 800ವರೆಗೆ ಸಿಗುತ್ತಿತ್ತು. ಈಗ ದಿನಕ್ಕೆ ₹ 200ರಿಂದ ₹ 300ವರೆಗೆ ಮಾತ್ರ ಸಿಗುತ್ತಿದೆ. ಆದಷ್ಟು ಬೇಗನೆ ಈ ರಸ್ತೆ ಕೆಲಸ ಮುಗಿದರೆ ಸಾಕು’ ಎಂದ ರಫೀಕ್‌ ಬೆವರು ಒರೆಸಿಕೊಂಡರು.

‘ಅರ್ಧ ರಸ್ತೆ ಎರಡು ತಿಂಗಳಲ್ಲಿ ಪೂರ್ಣ’
‘ಮಳೆ ಬಂದು ಮಣ್ಣು ಹಸಿಯಾಗಿದ್ದುದರಿಂದ ರಸ್ತೆ ಕೆಲಸವನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಒಂದು ವಾರದಿಂದ ಕೆಲಸವನ್ನು ಚುರುಕುಗೊಳಿಸಲಾಗಿದೆ. ಎರಡು ತಿಂಗಳಲ್ಲಿ ಎಲ್ಲಾ ರಸ್ತೆಗಳ ಅರ್ಧ ಭಾಗವನ್ನು ಪೂರ್ಣಗೊಳಿಸಲಾಗುವುದು’ ಎಂದು ‘ಸ್ಮಾರ್ಟ್‌ ಸಿಟಿ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶದ್‌ ಷರೀಫ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇದು ಸ್ಮಾರ್ಟ್‌ ರಸ್ತೆಯಾಗಿರುವುದರಿಂದ ಯುಜಿಡಿ, ಭೂಮಿಯೊಳಗೆ ವಿದ್ಯುತ್‌ ತಂತಿ, ಕೇಬಲ್‌, ಗ್ಯಾಸ್‌ ಲೈನ್‌ ಹಾಕುವ ಕೆಲಸ ಮಾಡಬೇಕಾಗಿರುವುದರಿಂದ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ. ಹಳೆಯ ಒಳಚರಂಡಿಯ ಮ್ಯಾಪ್‌ ಇಲ್ಲದೇ ಇರುವುದರಿಂದ ಹೊಸದಾಗಿ ಒಳಚರಂಡಿ ನಿರ್ಮಿಸಿ ಸಂಪರ್ಕ ಕೊಡಲು ವಿಳಂಬವಾಗುತ್ತಿದೆ’ ಎಂದು ಅವರು ವಿವರಣೆ ನೀಡಿದರು.

‘ಮಳೆಯಿಂದಾಗಿ ಕೆಲಸಕ್ಕೆ ಹಿನ್ನಡೆ’
‘ಎಂ.ಜಿ. ರಸ್ತೆಯ ಕಾಮಗಾರಿಯು ವರ್ಕ್‌ ಆರ್ಡರ್‌ ನಮಗೆ ಜೂನ್‌ನಲ್ಲಿ ಸಿಕ್ಕಿದೆ. ಕಾಮಗಾರಿ ಆರಂಭಿಸಿದಾಗ ಹಳೆಯ ಒಳಚರಂಡಿಯನ್ನೇ ಮುಂದುವರಿಸುವಂತೆ ಹೇಳಿದ್ದರು. ಆದರೆ, ಬಳಿಕ ಯೋಜನೆ ಪರಿಷ್ಕರಣೆ ಮಾಡಿ ಹೊಸದಾಗಿ ಒಳಚರಂಡಿ ನಿರ್ಮಿಸುವಂತೆ ಸೂಚಿಸಿದರು. ಮಳೆಯಿಂದಾಗಿ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣಗೊಂಡಿತು. ಸುತ್ತಲಿನ ಮಳೆ ನೀರು ಹರಿದು ಈ ರಸ್ತೆಗೆ ಬರುತ್ತಿತ್ತು’ ಎಂದು ಎಂ.ಜಿ. ರಸ್ತೆಯ ಗುತ್ತಿಗೆದಾರ ನರಸಿಂಹ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘10 ದಿನಗಳ ಒಳಗೆ ಚೇಂಬರ್‌ ಕಾಮಗಾರಿ ಮುಗಿಸಲಾಗುವುದು. ನಂತರ ಮಳೆನೀರು ಪೈಪ್‌ ಹಾಕಬೇಕು. ಹಳೆ ಒಳಚರಂಡಿಯಿಂದ ಹೊಸ ಒಳಚರಂಡಿ ಮಾರ್ಗಕ್ಕೆ ನೀರು ಹರಿಸಿ ನೋಡಬೇಕು. ಮಳೆ ನಿಂತಿದ್ದರಿಂದ ಈಗ ಕೆಲಸವನ್ನು ವೇಗವಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !