ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಕೆಟ್‌ನಲ್ಲಿ ಸೋಲಾರ್ ತಂತ್ರಜ್ಞಾನ

ಬಿಐಇಟಿ ಜವಳಿ ವಿಭಾಗದ ವಿದ್ಯಾರ್ಥಿಗಳ ಸಾಧನೆ
Last Updated 21 ನವೆಂಬರ್ 2019, 20:00 IST
ಅಕ್ಷರ ಗಾತ್ರ

ದಾವಣಗೆರೆ: ಈ ಜಾಕೆಟ್ ಧರಿಸಿದರೆ ಮೊಬೈಲ್‌ ಜೊತೆಗೆ ಪವರ್‌ ಬ್ಯಾಂಕ್‌ ಇಟ್ಟುಕೊಳ್ಳಬೇಕಾಗಿಲ್ಲ; ಸೌರಶಕ್ತಿಯಿಂದಲೇ ಮೊಬೈಲ್‌ ರೀಚಾರ್ಜ್ ಆಗುತ್ತದೆ.

ದಾವಣಗೆರೆಯ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಜವಳಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ‘ಸೋಲಾರ್‌ ಗಾರ್ಮೆಂಟ್ ಮೊಬೈಲ್ ಚಾರ್ಜರ್ ಜಾಕೆಟ್‌’ ಅನ್ನು ಸಂಶೋಧಿಸಿದ್ದಾರೆ.

ಈಗ ಎಲ್ಲಿಗೆ ಹೋಗಬೇಕಾದರೂ ಮೊಬೈಲ್ ಚಾರ್ಜರ್ ಹಾಗೂ ಪವರ್‌ಬ್ಯಾಂಕ್‌ ಅನ್ನು ಕೊಂಡೊಯ್ಯಬೇಕಾಗಿದೆ. ಆದರೆ, ಈ ಜಾಕೆಟ್ ಧರಿಸಿದರೆ ಸಾಕು ಇವುಗಳನ್ನು ಜೊತೆಯಲ್ಲಿ ಒಯ್ಯಬೇಕಾಗಿಲ್ಲ. ಜವಳಿ ವಿಭಾಗದ ಮುಖ್ಯಸ್ಥ ಡಾ.ಕೆ. ಮುರುಗೇಶ್ ಬಾಬು ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಸೌಮ್ಯ ಹಾಗೂ ತಂಡದವರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಜಾಕೆಟ್‌ನ ಜೇಬಿನೊಳಗೆ ಮೊಬೈಲ್ ಇಟ್ಟುಕೊಂಡರೆ ಸಾಕು. ಸೂರ್ಯನ ಕಿರಣಗಳು ಜಾಕೆಟ್‌ನ ಮೇಲೆ ಬಿದ್ದಾಗ ಕಿರಣಗಳನ್ನು ಹೀರಿಕೊಳ್ಳುತ್ತದೆ. ಆ ಜಾಕೆಟ್‌ನಲ್ಲಿ ಒಂದು ಸರ್ಕ್ಯೂಟ್ ಅಳವಡಿಸಿದ್ದು, ಅಲ್ಲಿರುವ ಪಿನ್‌ ಅನ್ನು ಮೊಬೈಲ್‌ಗೆ ಜೋಡಿಸಿದರೆ ರೀಚಾರ್ಜ್ ಆಗುತ್ತದೆ.

‘ಈ ಜಾಕೆಟ್ ತಯಾರಿಕೆಗೆ ₹ 8 ಸಾವಿರ ಖರ್ಚಾಗುತ್ತದೆ. (ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ) ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ನಡೆದ ವಸ್ತು ಪ್ರದರ್ಶನದಲ್ಲಿ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ’ ಎನ್ನುತ್ತಾರೆ ವಿಭಾಗದ ಪ್ರಾಧ್ಯಾಪಕ ಡಾ. ಎಸ್‌.ಎನ್. ರಮೇಶ್.

ಈ ಕಾಲೇಜಿನ ಮತ್ತೊಂದು ಅನ್ವೇಷಣೆ ಎಂದರೆ ಬಾಪೂಜಿ ಹ್ಯಾಂಕ್ ಡೈಯಿಂಗ್ ಮಷಿನ್. ಬೇರೆ ಡೈಯಿಂಗ್ ಮಷಿನ್‌ಗಳಲ್ಲಿ ಅಂದಾಜಿನಲ್ಲಿ ಬಣ್ಣ ಹಾಕಿ ಬಟ್ಟೆ ತಯಾರು ಮಾಡಬೇಕು. ಆದರೆ, ವಿದ್ಯಾರ್ಥಿಗಳು ಸಂಶೋಧನೆ ಮಾಡಿದ ಮಷಿನ್‌ ಅನ್ನು ಬಟ್ಟೆಗಳ ಪ್ರಮಾಣಕ್ಕೆ ತಕ್ಕಂತೆ ಎಷ್ಟು ಪ್ರಮಾಣದ ಬಣ್ಣ ಬೇಕೊ ಅಷ್ಟನ್ನು ವೈಜ್ಞಾನಿಕವಾಗಿ ಹಾಕುವಂತೆ ರೂಪಿಸಲಾಗಿದೆ. ಇದರಿಂದಾಗಿ ಬಣ್ಣ ವ್ಯರ್ಥವಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ರಮೇಶ್.

‘2005ರಲ್ಲಿ ಮಲೇಷ್ಯಾದ ವ್ಯಕ್ತಿಯೊಬ್ಬರು ಈ ತಂತ್ರಜ್ಞಾನಕ್ಕೆ ಮಾರುಹೋಗಿ ಅದನ್ನು ಕೊಂಡೊಯ್ದರು. ಕಾಲೇಜಿಗೆ ಬಂದು ಈ ಮಷಿನ್‌ ಅನ್ನು ಇನ್‌ಸ್ಟಾಲ್ ಮಾಡಿ ಹೋಗಿದ್ದಾರೆ. ಕಚ್ಚಾ ವಸ್ತುಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಕೆ ಮಾಡುವುದು ಎಂಬುದನ್ನು ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಈ ತಂತ್ರಜ್ಞಾನದಿಂದ ವೆಚ್ಚವನ್ನು ತಗ್ಗಿಸುವುದರ ಜೊತೆಗೆ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಬಹುದು. ಕೈಗೆಟುಕುವ ಬೆಲೆಯಲ್ಲಿ ವಸ್ತುಗಳನ್ನು ಜನರಿಗೆ ತಲುಪಿಸಬಹುದು’ ಎಂಬುದು ಅವರ ವಾದ.

‘ಅಡಿಕೆ, ಬಾಳೆಹಣ್ಣಿನ ನಾರಿನ ಜೊತೆ ಹತ್ತಿ ಬಳಸಿ ಮಾಡಿರುವುದು ಸಿಲ್ಕ್ ನೆಟ್ಟೆಡ್‌ ಟೈಗಳು, ಗಾರ್ಮೆಂಟ್‌ಗಳನ್ನು ತಯಾರಿಸಿದ್ದಾರೆ. ಸಿಲ್ಕ್ ಬಟ್ಟೆಯಲ್ಲಿ ಈವರೆಗೆ ಯಾರೂ ಹೊಲಿಗೆ ಮಾಡಿರಲಿಲ್ಲ. ಭಾರತದಲ್ಲೇ ಮೊದಲ ಬಾರಿಗೆ ಬಾಪೂಜಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ’ ಎಂದು ಕಾಲೇಜಿನ ನಿರ್ದೇಶಕ ವೃಷಭೇಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಗುಣಮಟ್ಟದ ಬಟ್ಟೆಗಳನ್ನು ತಯಾರಿಸುವ ವಿಧಾನಗಳು ನಮ್ಮಲ್ಲಿ ಸಾಕಷ್ಟಿವೆ. ಆದರೆ ನೇಕಾರರು ಇದನ್ನು ಬಳಸಿಕೊಳ್ಳುತ್ತಿಲ್ಲ. ಜಿಲ್ಲೆಯ ನೇಕಾರರಿಗೆ ತಂತ್ರಜ್ಞಾನದ ತರಬೇತಿಯನ್ನು ಉಚಿತವಾಗಿ ನೀಡುತ್ತೇವೆ ಎಂದುಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಹೇಳುತ್ತಾರೆ.

ಕಾಲೇಜಿನ ಜವಳಿ ತಂತ್ರಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಸಂಶೋಧಿಸಿದ ತಂತ್ರಜ್ಞಾನವನ್ನು ಬೆಲ್ಜಿಯಂ, ಹಾಂಗ್‌ಕಾಂಗ್, ಜಪಾನ್ ದೇಶಗಳಿಂದ ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಜವಳಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್‌.ಎನ್. ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT