ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸೈನಿಕರು, ಪೊಲೀಸರಿಂದ ದೇಶದಲ್ಲಿ ನೆಮ್ಮದಿ- ರಾಜೇಶ್ವರಿ ಹೆಗಡೆ

ಪೊಲೀಸ್ ಹುತಾತ್ಮರ ದಿನಾಚರಣೆ
Last Updated 22 ಅಕ್ಟೋಬರ್ 2021, 4:32 IST
ಅಕ್ಷರ ಗಾತ್ರ

ದಾವಣಗೆರೆ: ‘ದೇಶದ ಗಡಿಯಲ್ಲಿ ಸೈನಿಕರು, ದೇಶದೊಳಗೆ ಪೊಲೀಸರು ಕಾಯುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯವಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ ಹೇಳಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪೊಲೀಸ್ ಹುತಾತ್ಮರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗಬಾರದು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನಿರಂತರವಾಗಿ ಸ್ಮರಿಸುವಂತಾಗಬೇಕು. ವಾಲ್‌ ಆಫ್‌ ವೇಲ್‌ ಮೂಲಕ ಹುತಾತ್ಮರನ್ನು ಸ್ಮರಿಸಲು ಸರ್ಕಾರ ಮುಂದಾಗಿರುವುದು ಉತ್ತಮ ವಿಚಾರ. ವಾಲ್‌ ಆಫ್‌ ವೇಲ್‌ನಲ್ಲಿ 34,834 ಮಂದಿಯ ಹೆಸರಿದೆ. ವಾಲ್‌ ಆಫ್‌ ವೇಲ್‌ ದೇಶದ ಕನಿಷ್ಠ ಸಾವಿರ ಶಾಲೆಗಳಲ್ಲಿ ಅನುಷ್ಠಾನ ಆಗಬೇಕು ಎಂದರು.

‘ಸಂವಿಧಾನಾತ್ಮಕವಾಗಿ ನಾವು ಕೆಲಸ ಮಾಡಬೇಕಾಗಿದೆ. ನಾವು ಹಕ್ಕುಗಳನ್ನು ಕೇಳುತ್ತೇವೆ. ಆದರೆ ಕರ್ತವ್ಯಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತೇವೆ. ಎಲ್ಲರೂ ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡಿದರೆ ಪೊಲೀಸರು ನೆಮ್ಮದಿಯಾಗಿರುತ್ತಾರೆ. ಬೈಕಲ್ಲಿ ತ್ರಿಬಲ್‌ ರೈಡ್‌ ಮಾಡಬಾರದು. ಹೆಲ್ಮೆಟ್‌ ಹಾಕಬೇಕು. ಸಿಗ್ನಲ್‌ ಜಂಪ್‌ ಮಾಡಬಾರದು ಎಂಬ ನಿಯಮಗಳು ಎಲ್ಲರಿಗೂ ಗೊತ್ತು. ಆದರೂ ನಿಯಮ ಉಲ್ಲಂಘನೆ ಮಾಡುತ್ತೇವೆ’ ಎಂದು ವಿಷಾದಿಸಿದರು.

ಪೂರ್ವ ವಲಯ ಐಜಿಪಿ ಎಸ್. ರವಿ ಮಾತನಾಡಿ, ‘ನಾವು ಸಮಾಜಕ್ಕಾಗಿ, ಸಮಾಜದ ರಕ್ಷಣೆಗಾಗಿ ಹುತಾತ್ಮರಾಗೋಣ. ಆದರೆ ಅನಗತ್ಯ ಕಾರಣಕ್ಕೆ ಜೀವ ಕಳೆದುಕೊಳ್ಳುವುದನ್ನು ತಪ್ಪಿಸಬೇಕು. ಪೊಲೀಸ್ ಇಲಾಖೆ ಶಿಸ್ತಿನ ಪಕ್ಷ. ಶಿಸ್ತು ಉಲ್ಲಂಘನೆ ಆಗುವುದರಿಂದಲೇ ಅಪಾಯಗಳು ಉಂಟಾಗುತ್ತಿವೆ’ ಎಂದು ಎಚ್ಚರಿಸಿದರು.

‘ಪೊಲೀಸರೇ ಅರ್ಧ ಹೆಲ್ಮೆಟ್‌ ಹಾಕಿ ಬೈಕಲ್ಲಿ ಓಡಾಡುತ್ತಿದ್ದಾರೆ. ಅರ್ಧ ಹೆಲ್ಮೆಟ್‌ ತಲೆಗೆ ರಕ್ಷಣೆ ನೀಡುವುದಿಲ್ಲ. ಅಪಘಾತ ಉಂಟಾದರೆ ನಾವು ಜೀವ ಕಳೆದುಕೊಂಡು ಬಿಡುತ್ತೇವೆ. ಬೇರೆಯವರ ಜೀವ ತೆಗೆದು ಬಿಡುತ್ತೇವೆ. ಇದು ಸರಿಯಲ್ಲ’ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹುತಾತ್ಮರ ಸ್ಮರಣೆ ಮಾಡಿದರು. ಆರಂಭದಲ್ಲಿ ಪೊಲೀಸ್‌ ತುಕಡಿ ಸಮಾವೇಶಗೊಂಡಿತು. ಸಮಾದೇಷ್ಠರಿಂದ ಗೌರವ ವಂದನೆ ಸಲ್ಲಿಕೆಯಾಯಿತು. ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಹುತಾತ್ಮರಿಗೆ ಪೊಲೀಸ್ ಗೌರವ ಸಲ್ಲಿಸಲಾಯಿತು. ಮೌನಾಚರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT