ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಸಮಸ್ಯೆಗಳಿಗೆ ರಾಮಾಯಣದಲ್ಲಿ ಪರಿಹಾರ

ವಾಲ್ಮೀಕಿ ಜಾತ್ರೆಯಲ್ಲಿ ಜನಜಾಗೃತಿ ಸಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Last Updated 9 ಫೆಬ್ರುವರಿ 2020, 14:40 IST
ಅಕ್ಷರ ಗಾತ್ರ

ಹರಿಹರ: ಮನುಕುಲದ ಎಲ್ಲ ಸಮಸ್ಯೆಗಳಿಗೆ ರಾಮಾಯಣದಲ್ಲಿ ಒಂದಲ್ಲ ಒಂದು ರೀತಿಯ ಪರಿಹಾರವನ್ನು ವಾಲ್ಮೀಕಿ ಮಹರ್ಷಿ ನೀಡಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಪ್ರತಿಪಾದಿಸಿದ ಮಹಾನ್‌ ಋಷಿ ವಾಲ್ಮೀಕಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳು ಅಭಿವೃದ್ಧಿಯಾಗಬೇಕಿದ್ದರೆ ಶಿಕ್ಷಣವೊಂದೇ ದಾರಿ ಎಂಬುದನ್ನು ಮಹರ್ಷಿ ಹೇಳಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಈ ಸಮುದಾಯವೂ ಸೇರಿ ಎಲ್ಲರನ್ನು ಅಭಿವೃದ್ಧಿ ಮಾಡಲು ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಅವೆಲ್ಲವನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಸೆಪ್ಟೆಂಬರ್‌ 16ರಂದು ಎಸ್‌ಸಿ, ಎಸ್‌ಟಿಗೆ ₹ 30,445 ಕೋಟಿ ಮಂಜೂರು ಮಾಡಿದ್ದಾರೆ. ಭೂಒಡೆತನ ಯೋಜನೆಯಲ್ಲಿ 647 ಫಲಾನುಭವಿಗೆಳಿಗೆ 874 ಎಕರೆ ಭೂಮಿ ಖರೀದಿ ಮಾಡಿ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 10 ಸಾವಿರ ಕೊಳವೆಬಾವಿ ಮಂಜೂರು ಮಾಡಲಾಗಿದೆ. 12 ಸಾವಿರ ಜನರಿಗೆ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ₹ 300 ಕೋಟಿ ಅನುದಾನ ನೀಡಿದ್ದಾರೆ. 929 ಮಂದಿಗೆ ಸ್ವ ಉದ್ಯೋಗ ಮಾಡಲು ಪ್ರೋತ್ಸಾಹಿಸಲಾಗಿದೆ ಎಂದು ಅಂಕಿ ಅಂಶ ನೀಡಿದರು.

ವಾಲ್ಕೀಕಿ ಆಚರಣೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಜಾರಿಗೆ ಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಎಸ್‌ಸಿ, ಎಸ್‌ಟಿ ಕಾಲೊನಿಗಳಲ್ಲಿ ಒಂದೇ ಒಂದು ಭವನ ಇರಲಿಲ್ಲ. 2008ರಲ್ಲಿ ಮುಖ್ಯಮಂತ್ರಿ ಆದ ಮೇಲೆ ಅಂಬೇಡ್ಕರ್‌ ಭವನ, ಜಗಜ್ಜೀವನ್‌ರಾಂ ಭವನ, ವಾಲ್ಮೀಕಿ ಭವನ, ಸೇವಾಲಾಲ್‌ ಭವನ ಮಾಡಲು ಚಾಲನೆ ದೊರಕಿತ್ತು. ಈಗ 6,900 ಭವನಗಳನ್ನು ಮಂಜೂರು ಮಾಡಿದ ಕೀರ್ತಿ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಕೆಪಿಎಸ್‌ಸಿ ಸದಸ್ಯತ್ವ ಹುದ್ದೆ ಎರಡು ಖಾಲಿ ಇತ್ತು. ಒಂದನ್ನು ವಾಲ್ಮೀಕಿ ಜನಾಂಗದ ರಂಗರಾಜ್‌ ವನದುರ್ಗ, ಕೋಲಿ ಸಮಾಜದ ಹೆಗ್ಗಣ್ಣ ಅವರಿಗೆ ನೀಡಿರುವುದು ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ನ್ಯಾಯ ಇದು. ದೇಶದಲ್ಲಿ ಎಸ್‌ಸಿ, ಎಸ್‌ಟಿ ಜನಾಂಗ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಎಸ್‌ಸಿ ಎಸ್‌ಟಿಯ ಅತಿ ಹೆಚ್ಚು ಸಂಸದರು, ಶಾಸಕರು ಇರುವುದು ಬಿಜೆಪಿಯಲ್ಲಿ ಎಂಬುದನ್ನು ನೋಡಿದಾಗ ಇದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ₹ 4.47 ಕೋಟಿಯನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡಿದ್ದಾರೆ. 824 ವಸತಿ ಶಾಲೆಗಳು, 4709 ವಸತಿ ನಿಲಯಗಳು ಇವೆ. ಅದರಲ್ಲಿ ನಾಲ್ಕು ಲಕ್ಷ ಮಕ್ಕಳು ಓದುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ವಾಲ್ಮೀಕಿ ನ್ಯಾಯ ನಿಷ್ಠುರದ ರಾಜ್ಯದ ಪರಿವರ್ತನೆಯ ಹರಿಕಾರ. ವಚನಬದ್ಧತೆ ಬಗ್ಗೆ, ಸ್ವಾಮಿನಿಷ್ಠೆಯ ಬಗ್ಗೆ, ದುಷ್ಟರ ಸಂಹಾರದ, ಕಾಯಕ ನಿಷ್ಠೆಯ ಬಗ್ಗೆ ತಿಳಿಸಿದವರು ಎಂದರು.

ವಾಲ್ಮೀಕಿ ಕುಲ ಮಾನವ ಜನ್ಮದಲ್ಲೇ ಶ್ರೇಷ್ಠ ಕುಲ. ಭಕ್ತಿಯಲ್ಲಿ ಬೇಡರ ಕಣ್ಣಪ್ಪ, ಗುರುಭಕ್ತಿಯಲ್ಲಿ ಏಕಲವ್ಯ, ವೀರ ಮಹಿಳೆಯಲ್ಲಿ ಒಣಕೆ ಓಬವ್ವ, ರಾಣಿ ಅಬ್ಬಕ್ಕ, ಸ್ವಾತಂತ್ರ್ಯ ಹೋರಾಟದಲ್ಲಿ ಸಿಂಧೂರ ಲಕ್ಷ್ಮಣ, ಸ್ವಾಭಿಮಾನದ ಸಂಕೇತವಾಗಿ ಮದಕರಿ ನಾಯಕ ಈ ನಮ್ಮ ಸಮುದಾಯದವರು ಎಂದು ಹೇಳಿದರು.

ಸಚಿವ ಬಿ.ಸಿ. ಪಾಟೀಲ, ಸಂಸದರಾದ ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಶಾಸಕರಾದ ರೇಣುಕಾಚಾರ್ಯ, ಎಸ್‌.ವಿ. ರಾಮಚಂದ್ರ, ಎಸ್.ವಿ. ರಾಮಚಂದ್ರ, ಅರುಣ್‌ಕುಮಾರ್‌, ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ಮುರುಘಮಠದ ಶಿವಮೂರ್ತಿ ಶರಣರು, ವಿ.ಎಸ್‌. ಉಗ್ರಪ್ಪ, ಚಂದ್ರಕಾಂತ ಬೆಲ್ಲದ್‌, ವಿವಿಧ ಜನಪ್ರತಿನಿಧಿಗಳು ಇದ್ದರು.

ಪ್ರಮುಖ ಅಂಶಗಳು

* ಮುಖ್ಯಮಂತ್ರಿ ಮಾತನಾಡುತ್ತಿರುವಾಗ ಹೆಲಿಕಾಫ್ಟರ್‌ ಸದ್ದು ಕೇಳಿ ಜನರು ಕೇಕೆ ಹಾಕಿದರು. ಹೆಲಕಾಫ್ಡರ್‌ ಬಂದಾಗಲೆಲ್ಲ ಹೀಗೆ ಮಾಡುವಿರೇನು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

* ಶಶಿಕುಮಾರ್‌ ಬರುವಾಗ ಜನರ ಕೇಕೆ ಹದ್ದು ಮೀರಿತು. ಸ್ವತಃ ಪ್ರಸನ್ನಾನಂದ ಸ್ವಾಮೀಜಿಯೇ ಮೈಕ್‌ ತೆಗೆದುಕೊಂಡು ಜನರನ್ನು ಸುಮ್ಮನೆ ಕೂರಲು ಹೇಳಬೇಕಾಯಿತು.

* ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಘೋಷಣೆ ಮಾಡದೇ ಇರುವುದನ್ನು ಮುಖ್ಯಮಂತ್ರಿ ಹೋದಮೇಲೆ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಪ್ರಸ್ತಾಪಿಸಿದರು. ಇಲ್ಲಿ ಘೋಷಣೆ ಮಾಡದೇ ಇದ್ದರೂ ಮುಂದೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವರು ಎಂಬ ಆಶಾಭಾವನೆ ಇಟ್ಟುಕೊಳ್ಳೋಣ ಎಂದು ಮಾರ್ಮಿಕವಾಗಿ ತಿಳಿಸಿದರು.

ಶಾಸಕ ಸತೀಶ್‌ ಜಾರಕಿಹೊಳಿ ವಾಚಿಸಿದ ಬೇಡಿಕೆ ಪಟ್ಟಿ

* ಶೇ 7.5 ಮೀಸಲಾತಿ ಒದಗಿಸಲು ಆಗಬೇಕಾದ ಕೆಲಸದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಅರ್ಧದಷ್ಟು ಕೆಲಸ ಆಗಿದೆ. ಇನ್ನರ್ಧ ಕೆಲಸ ಯಡಿಯೂರಪ್ಪ ಅವರ ಸರ್ಕಾರ ಮಾಡಬೇಕು.

* ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಆಗಬೇಕು.

* ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗವಾಗಬೇಕು.
* ಹಂಪಿ ವಿವಿಗೆ ವಾಲ್ಮೀಕಿ ಹೆಸರು ಇಡಬೇಕು. ಅದಲ್ಲದಿದ್ದರೆ ಬೇರೆ ವಿಶ್ವವಿದ್ಯಾಲಯಕ್ಕಾದರೂ ಇಡಬೇಕು.

* ಪರಿಶಿಷ್ಟ ಪಂಗಡದ ವಿಶ್ವವಿದ್ಯಾಲಯ ಮಧ್ಯಪ್ರದೇಶದಲ್ಲಿ ಮಾತ್ರ ಇದೆ. ಬುಡಗಟ್ಟು ವಿಶ್ವವಿದ್ಯಾಲಯ ಆಗಬೇಕು.

* ಎಸ್‌ಸಿಎಸ್‌ಟಿ ಮಕ್ಕಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಹೆಚ್ಚಿಸಬೇಕು.

*ರಾಜ್ಯ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹೆಚ್ಚಿಸಬೇಕು.

* ವಿಮಾನಯಾನ ಪರೀಕ್ಷೆ, ಇಸ್ರೋ, ಐಐಟಿ ಮುಂತಾದ ಪರೀಕ್ಷೆಗಳಲ್ಲಿ ಪ್ರವೇಶ ಪಡೆಯಲು ಆಸಕ್ತಿ ಇರುವವರಿಗೆ ನಾಲ್ಕು ವಿಭಾಗದಲ್ಲಿ ತರಬೇತಿ ಕೇಂದ್ರ ತೆರೆಯಬೇಕು.

* ಭೂರಹಿತರಿಗೆ 3, 4 ಎಕರೆ ಭೂಮಿ ನೀಡಬೇಕು.

* ಬಿಬಿಎಂಪಿ ಸಹಿತ ಎಲ್ಲ ನಗರ ಸ್ಥಳೀಯಾಡಳಿತ, ಗ್ರಾಮೀಣ ಸ್ಥಳೀಯಾಡಳಿತಗಳಲ್ಲಿ ರಾಜಕೀಯ ಮೀಸಲಾತಿ ಕೊಡಬೇಕು.

* ಅಯೋಧ್ಯೆಯಲ್ಲಿ ರಾಮಮಂದಿರದ ಜತೆಗೆ ವಾಲ್ಮೀಕಿ ಮಂದಿರ ಕೂಡ ಆಗಬೇಕು.

* ನಕಲಿ ಜಾತಿ ಪ್ರಮಾಣ ಪತ್ರ ಪಡೆದವರನ್ನು ಗುರುತಿಸಿ, ಶಿಕ್ಷಿಸಬೇಕು.

* 1990ರ ನಂತರ ಆರಂಭಗೊಂಡಿರುವ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಬೇಕು.

* ಎಸ್‌ಸಿಪಿ, ಟಿಎಸ್‌ಪಿ ಅಡಿ ವೈದ್ಯಕೀಯ, ಎಂಜಿನಿಯಿಂಗ್ ಕಾಲೇಜುಗಳನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಆರಂಭಿಸಬೇಕು.

* ಪರಿಶಿಷ್ಟ ವರ್ಗಗಳ ಜನಸಂಖ್ಯೆ ಹೆಚ್ಚಿರುವಲ್ಲಿ ಕಲ್ಯಾಣ ಕಚೇರಿಗಳನ್ನು ತೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT