ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲವರಿಂದ ಬಿಜೆಪಿ ಬಿಡುವ ನಿರ್ಧಾರ: ಎಂ.ಪಿ.ರೇಣುಕಾಚಾರ್ಯ

Published 18 ಅಕ್ಟೋಬರ್ 2023, 12:44 IST
Last Updated 18 ಅಕ್ಟೋಬರ್ 2023, 12:44 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲದ ಕಾರಣ, ಪಕ್ಷದ ಕೆಲ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ನಮ್ಮವರಿಗೆ ನಾನು ಬೇಡ ಅನಿಸುತ್ತದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೊನ್ನಾಳಿ– ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದೇನೆ. ಇದನ್ನೇ ತಪ್ಪಾಗಿ ಬಿಂಬಿಸಲಾಗಿದೆ. ಪಕ್ಷದ ಹಿರಿಯರನ್ನು ಕಡೆಗಣಿಸಿರುವ ನೋವು ಇದೆ. ಆದರೆ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಸೇರುವುದಿಲ್ಲ’ ಎಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಸ್ಪಷ್ಟಪಡಿಸಿದರು.

‘ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. 2019ರಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರಿಂದ ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದ ಮೇರೆಗೆ ಈ ಬಾರಿಯ ಚುನಾವಣೆಗೆ ಆಕಾಂಕ್ಷಿ ಎಂದು ಹೇಳಿದ್ದೇನೆ’ ಎಂದು ಸಮರ್ಥಿಸಿಕೊಂಡರು.

‘ಸಿದ್ದೇಶ್ವರ ಅವರಿಗಿಂತ ಹಿರಿಯ ನಾನು’

ಹೋಗುವವರು ಹೋಗಲಿ ಎಂಬ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ಸಂಸದ ಸ್ಥಾನಕ್ಕೆ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿಲ್ಲ. ಪಕ್ಷದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗಿಂತ ನಾನು ಸೀನಿಯರ್. ಅವರಿಗಿಂತ ಅನುಭವವಿದೆ. ಹೋರಾಟದಲ್ಲಿ ಎರಡು ಬಾರಿ ಜೈಲು ಸೇರಿದ್ದೇನೆ. ಅವರ ತಂದೆ ಮಲ್ಲಿಕಾರ್ಜುನಪ್ಪ ಅವರ ಕಾಲದಲ್ಲಿ ಮೂರು ಹಾಗೂ ಸಿದ್ದೇಶ್ವರ ಅವರ ನಾಲ್ಕು ಚುನಾವಣೆ ಮಾಡಿದ್ದೇನೆ. ವಯಸ್ಸಿನಲ್ಲಿ ಅವರು ಹಿರಿಯರಷ್ಟೇ’ ಎಂದರು.

‘ಪಕ್ಷದಲ್ಲಿ ಹಿರಿಯರಾದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ರಾಜಕೀಯವಾಗಿ ಮುಗಿಸಿದರು. ದಾವಣಗೆರೆಯಲ್ಲಿ ಯಾರಾದರು ಸಂಸದರ ಸ್ಥಾನಕ್ಕೆ ಟಿಕೆಟ್ ಕೇಳಿದರೆ ಸಾಕು. ಅವರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಟಿ. ಗುರುಸಿದ್ದನಗೌಡರ ‍ಪುತ್ರ ಟಿ.ಜಿ. ರವಿಕುಮಾರ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಕ್ಕೆ ಅವರು ಸೇರಿದಂತೆ ಅವರ ಪುತ್ರರನ್ನು ಉಚ್ಚಾಟಿಸಲಾಯಿತು. ನಾನು ಟಿಕೆಟ್ ಆಕಾಂಕ್ಷಿ ಎಂದಾಕ್ಷಣ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT