ಸೋಮವಾರ, ಆಗಸ್ಟ್ 2, 2021
23 °C
ಅವಳಿ ತಾಲ್ಲೂಕಿನಲ್ಲಿ ಚುರುಕು ಪಡೆದ ಕೃಷಿ ಚಟುವಟಿಕೆ

ಹೊನ್ನಾಳಿ: 5,746 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ಅವಳಿ ತಾಲ್ಲೂಕಿನಲ್ಲಿ ನಾಲ್ಕೈದು ದಿನಗಳಿಂದ ಹದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 48,985 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದು, ಆ ಪೈಕಿ 5,746 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ತಾಲ್ಲೂಕಿನ 9 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯುವ ಗುರಿ ಹೊಂದಲಾಗಿದ್ದು, ರಾಷ್ಟ್ರೀಯ ಭದ್ರತಾ ಯೋಜನೆಯಡಿ 4,650 ತೊಗರಿ ಕಿಟ್‌ಗಳನ್ನು (4 ಕೆ.ಜಿ.) ಉಚಿತವಾಗಿ 32 ಹಳ್ಳಿಗಳಲ್ಲಿ ರೈತರಿಗೆ ವಿತರಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಒಟ್ಟು 2,131 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 1,311 ಕ್ವಿಂಟಲ್‌ ಪೂರೈಕೆ ಮಾಡಲಾಗಿದೆ. ಅದರಲ್ಲಿ ಈಗಾಗಲೇ 710 ಕ್ವಿಂಟಲ್‌ ವಿತರಣೆಯಾಗಿದೆ. 602 ಕ್ವಿಂಟಲ್‌ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಮಾಹಿತಿ ನೀಡಿದರು.

2021–22 ನೇ ಸಾಲಿನಲ್ಲಿ ರಸಗೊಬ್ಬರ ಬೇಡಿಕೆ ಜೂನ್‌ವರೆಗೆ 17,672 ಮೆಟ್ರಿಕ್ ಟನ್ ಇದ್ದು, ಈಗಾಗಲೇ 13,462 ಮೆಟ್ರಿಕ್ ಟನ್ ವಿತರಿಸಲಾಗಿದೆ. ಜೂನ್ ತಿಂಗಳಲ್ಲಿ 9,909 ಮೆಟ್ರಿಕ್ ಟನ್‌ಗೆ ಬೇಡಿಕೆ ಇದ್ದು, ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.

ರಿಯಾಯಿತಿ ದರಕ್ಕೆ ಬಿತ್ತನೆ ಬೀಜ: ತಾಲ್ಲೂಕಿನಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಊಟದ ಜೋಳ, ಶೇಂಗಾ, ತೊಗರಿ, ಹತ್ತಿ, ತೊಗರಿ ಬೆಳೆಗಳ ಜೊತೆಗೆ ಇನ್ನಿತರ ದ್ವಿದಳ ದಾನ್ಯಗಳ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿ, ನ್ಯಾಮತಿ, ಸಾಸ್ವೆಹಳ್ಳಿ, ಚೀಲೂರು, ಗೋವಿನಕೋವಿ, ಕುಂದೂರು ಹೋಬಳಿಗಳಲ್ಲಿ ಹಾಗೂ ನಗರದ ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ.

ರೈತರು ಬಿತ್ತನೆ ಮಾಡುವ ಮುನ್ನ ಆಯಾ ರೈತಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಬಿತ್ತನೆ ಬೀಜದ ಬಗ್ಗೆ ಚರ್ಚೆ ಮಾಡಿ ಬೀಜ ಖರೀದಿ ಮಾಡಬೇಕು. ಕಳಪೆ ಬೀಜ ಖರೀದಿಯಿಂದ ಮುಂದಾಗುವ ತೊಂದರೆಗಳನ್ನು ಈಗಲೇ ಪರಿಹರಿಸಿಕೊಂಡರೆ ರೈತನಿಗೆ ಹೆಚ್ಚು ಅನುಕೂಲ ಎಂದು ಸುರೇಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು