ಗುರುವಾರ , ಫೆಬ್ರವರಿ 27, 2020
19 °C
ಕೇಂದ್ರ ಆಯವ್ಯಯದ ಬಗ್ಗೆ ಉಪನ್ಯಾಸ

ಬಜೆಟ್‌ಗಿಂತ ಮಾತಿಗೆ ಆದ್ಯತೆ ಹೆಚ್ಚು: ಡಾ. ರಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಅರ್ಥ ಸಚಿವರು ತಿಳಿಸಿದ್ದಾರೆ. ಆದರೆ ಬಜೆಟ್‌ನ ಅಂಕಿ ಅಂಶ ನೋಡಿದರೆ ಮೊದಲ ಆದ್ಯತೆ ಕಾಣುತ್ತಿಲ್ಲ. ಇದು ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗೆ ನೀನು ತುಂಬಾ ಬುದ್ಧಿವಂತ ಎಂದು ಹೊಗಳಿ 20ರಲ್ಲಿ 8 ಅಂಕ ನೀಡಿದಂತಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕಲಾನಿಕಾಯದ ಮತ್ತು ಅರ್ಥಶಾಸ್ತ್ರದ ಮುಖ್ಯಸ್ಥ ಡಾ. ಕೆ.ಬಿ. ರಂಗಪ್ಪ ಹೋಲಿಕೆ ಮಾಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ ಮಂಗಳವಾರ ನಡೆದ ‘ಕೇಂದ್ರ ಆಯವ್ಯಯ’ ಚರ್ಚೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಕಳೆದ ಬಜೆಟ್‌ಗೆ ಹೋಲಿಸಿದರೆ ಶೇ 2.47ರಷ್ಟು ಮಾತ್ರ ಹೆಚ್ಚು ಅನುದಾನ ಇಡಲಾಗಿದೆ. ನೀರಿ ಮತ್ತು ನೈರ್ಮಲ್ಯಕ್ಕೆ ಶೇ 3.8 ಹಾಗೂ ಶಿಕ್ಷಣ ಮತ್ತು ಕೌಶಲಕ್ಕೆ ಶೇ 4.7ರಷ್ಟು ಹೆಚ್ಚು ಇಟ್ಟಿರುವುದನ್ನು ತೋರಿಸಲಾಗಿದೆ. ಇದನ್ನು ಹಣದುಬ್ಬರದ ಜತೆಗೆ ಸಮನ್ವಯಗೊಳಿಸಿದಾಗ ಇದು ನಕಾರಾತ್ಮಕ ಅಭಿವೃದ್ಧಿಯಾಗಲಿದೆ ಎಂದು ವಿಶ್ಲೇಷಿಸಿದರು.

ಕೈಗಾರಿಕೆಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದರೂ ಅಲ್ಲಿಯೂ ಶೇ 0.6 ಮಾತ್ರ ಹೆಚ್ಚಿಗೆ ಮೀಸಲಿಡಲಾಗಿದೆ. ಉದ್ಯೋಗ, ಬರ, ನೆರೆ ವಿಕೋಪಗಳು ಇನ್ನಿತರ ವಿಭಾಗಗಳನ್ನು ನಿರ್ಲಕ್ಷಿಸಿರುವುದು ಕಾಣುತ್ತದೆ. ಆದರೆ ಟ್ರಾನ್ಸ್‌ಪೋರ್ಟ್‌ ಸಾಮಗ್ರಿಗಳಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ ಎಂದು ವಿವರಿಸಿದರು.

ಈಗ ಜಿಡಿಪಿ ದರ ಶೇ 4.5 ಇದ್ದು, ಅದನ್ನು ಶೇ 9 ಅಥವಾ 10ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಅದು ಹೇಗೆ ಎರಡುಪಟ್ಟು ಹೆಚ್ಚಳವಾಗಲಿದೆ ಎಂಬುದನ್ನು ಅವರೇ ವಿವರಿಸಬೇಕಷ್ಟೇ. ಅಭಿವೃದ್ಧಿ ದರ ಕಡಿಮೆಯಾಗಿರುವ, ಆದಾಯ ಪ್ರಮಾಣ ಕುಂಠಿತವಾಗಿರುವ ಈ ವರ್ಷ ಆದಷ್ಟು ಸಮತೋಲನ ಮಾಡಲು ಪ್ರಯತ್ನಿಸಿರುವುದು ಮಾತ್ರ ಕಂಡು ಬಂದಿದೆ ಎಂದರು.

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸರ್ಕಾರ ಬಜೆಟ್ ಮೂಲಕ ಎಲ್ಲರ ಆಸೆ, ನಿರೀಕ್ಷೆಗಳಿಗೆ ಸ್ಪಂದಿಸುವುದು ಸವಾಲಿನ ಕೆಲಸ. ಸರ್ಕಾರದ ಆದ್ಯತೆ, ಅಭಿವೃದ್ಧಿಯ ಪಥಕ್ಕೆ ಬಜೆಟ್ ದಿಕ್ಸೂಚಿ. ಇಂತಹ ಬಜೆಟ್ ಅಭಿವೃದ್ಧಿ ಪರವಾಗಿರಬೇಕು. ತಕ್ಷಣದ ಅಗತ್ಯ ಈಡೇರಿಸುವಂತಹ ಜನಪ್ರಿಯ ಯೋಜನೆಗಳ ಬದಲು ದೀರ್ಘಾವಧಿ ಲಾಭ ತರುವ ಯೋಜನೆ, ಕಾರ್ಯಕ್ರಮಗಳು ಇರುವುದು ಒಳ್ಳೆಯದು ಎಂದರು.

ದೇಶದ ಸದ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಜನರಿಗೆ ಊಟ, ಬಟ್ಟೆಗೆ ಸಮಸ್ಯೆ ಇಲ್ಲ. ಆದರೆ ಎಲ್ಲರ ಕೈಯಲ್ಲಿ ಮೊಬೈಲ್ ಇರುವುದನ್ನು ಬಿಟ್ಟರೆ ನಗರ ಹಾಗೂ ಹಳ್ಳಿಗಳ ನಡುವಿನ ಅಂತರ ಹೆಚ್ಚಾಗಿದೆ. ಇದರಿಂದಾಗಿ ಉತ್ಪನ್ನಗಳಿಗೆ ಬೇಡಿಕೆ ಕುಸಿದು, ಅನೇಕ ಕೈಗಾರಿಕೆಗಳು ಮುಚ್ಚಿ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆರ್ಥಿಕ ಬೆಳವಣಿಗೆ ದರವು ಹಿಂದಿನ 5 ವರ್ಷಗಳಲ್ಲೇ ಕನಿಷ್ಠ ಮಟ್ಟ ತಲುಪಿದೆ. ಶೇ 1ರಷ್ಟು ಜನರಲ್ಲಿ ದೇಶದ ಶೇ 85 ಸಂಪತ್ತು, ಆದಾಯ ಇರುವುದು ಒಳ್ಳೆಯ ಲಕ್ಷಣವಲ್ಲ. ಇನ್ನಾದರೂ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ದೀರ್ಘಾವಧಿ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಕೆ. ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ತಿಪ್ಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಪ್ರೊ.ಟಿ. ವೀರೇಶ, ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಂ. ದಿನೇಶ, ಪ್ರಭಾರ ವ್ಯವಸ್ಥಾಪಕಿ ಎಸ್.ಮಂಜುಳಾ ಅವರೂ ಇದ್ದರು. ಪ್ರೇಮಸಾಗರ್ ಪ್ರಾರ್ಥಿಸಿದರು. ಭೀಮಣ್ಣ ಸುಣಗಾರ್ ಸ್ವಾಗತಿಸಿದರು. ಡಾ. ಶಾಂತಕುಮಾರಿ ವಂದಿಸಿದರು. ಪ್ರೊ.ಕೆ.ಎಂ. ರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು