ದಾವಣಗೆರೆ: ‘ಭಾವೈಕ್ಯ ಮತ್ತು ಅಧ್ಯಾತ್ಮ ಜ್ಞಾನವು ಭಾರತದ ಉಸಿರು. ನಮ್ಮ ದೇಶವು ಧರ್ಮ, ದರ್ಶನಗಳ ತವರೂರು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯಿಂದ ಇಲ್ಲಿನ ರೇಣುಕ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿಯ ನಾಶವಾಗಬಾರದು. ಭಗವಂತ ನೀಡಿದ ಸಂಪತ್ತೇ ಬಾಳಿನ ಅಮೂಲ್ಯ ಸಂಪತ್ತು ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.
‘ದೇವರ ಮೇಲಿನ ನಂಬಿಕೆ, ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಬೋಧಿಸುವುದರ ಮೂಲಕ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಬೆಳೆಸಿದ ಕೀರ್ತಿ ಗುರು
ಪರಂಪರೆಗೆ ಸಲ್ಲುತ್ತದೆ’ ಎಂದರು.
‘ಪ್ರಾಚೀನ ಇತಿಹಾಸ ಮತ್ತು ಪರಂಪರೆ ಹೊಂದಿದ ವೀರಶೈವ ಧರ್ಮದ ಸಂರಕ್ಷಣೆ ಮತ್ತು ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.
‘ಗುರುವರ್ಯರು ಸೇರಿದಂತೆ ಸಾಮಾನ್ಯ ಜನರಿಗೂ ಅವರದೇ ಆದ ಶಕ್ತಿ ಇರುತ್ತದೆ. ಅದನ್ನು ಅಲ್ಲಗಳೆಯಲು ಆಗುವುದಿಲ್ಲ. ಯಾರೇ ಆಗಲಿ ಧರ್ಮದಿಂದ ನಡೆದರೆ ಭಕ್ತಿ ಪ್ರಾಪ್ತಿಯಾಗುತ್ತದೆ. ಎಲ್ಲರಿಗೂ ದೇವರು ಕೊಡಬೇಕಾಗಿದ್ದನ್ನು ಕೊಟ್ಟಿರುತ್ತಾನೆ. ಬದುಕು ನಮ್ಮ ಕೈಯಲ್ಲೇ ಇದೆ. ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಸಲಹೆ ನೀಡಿದರು.
‘ಜೀವನದಲ್ಲಿ ಮೇಲೆ ಬರಬೇಕಾದರೆ ಉತ್ತಮ ಆಲೋಚನೆ ಮಾಡಬೇಕು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು. ದುರಂಹಕಾರ, ಹೊಟ್ಟೆಕಿಚ್ಚು ಪಡಬಾರದು. ಸಮಾಜಕ್ಕೆ ಒಳ್ಳೆಯದನ್ನು ಬಯಸಬೇಕು’ ಎಂದರು.
‘ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷ ವಾಕ್ಯದಲ್ಲಿ ಎಲ್ಲಾ ಅಡಕವಾಗಿದೆ. ಸುಖ, ಶಾಂತಿ ಸಂದೇಶ ಸಾರುವ ಧರ್ಮ ಏನಾದರೂ ಇದ್ದರೆ ಅದು ಪಂಚಪೀಠಗಳಲ್ಲಿ ಮಾತ್ರ. ಪೀಠದ ಮಾರ್ಗದರ್ಶನ ಎಲ್ಲರಿಗೂ ಅಗತ್ಯವಾಗಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾದ ಮತ್ತೊಬ್ಬ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಹೇಳಿದರು.
ರಾಜನಹಳ್ಳಿ ರಮೇಶ ಬಾಬು ಅವರಿಗೆ ‘ಸಮಾಜ ಸೇವಾ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಟ್ಟೂರಿನ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವೀರಣ್ಣ ಗಡದ, ವೈ.ವಿರೂಪಾಕ್ಷಪ್ಪ, ಕರಿಶಿವಪ್ಳರ ಸಿದ್ದೇಶಿ ಇದ್ದರು.
ಜಯದೇವ ದೇವರಮನೆ ಸ್ವಾಗತಿಸಿದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧಿಕ ಶ್ರಾವಣ ಮಾಸದ ನಿಮಿತ್ತ ರಂಭಾಪುರಿ ಶ್ರೀಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.