ಶುಕ್ರವಾರ, ಜೂನ್ 25, 2021
29 °C
17ನೇ ಸ್ಥಾನಕ್ಕಿಳಿಯಲು ಕೊರೊನಾ ಕಾರಣ ಎಂದು ಪರಿತಪಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು

ದಾವಣಗೆರೆ | ಕುಸಿತ ಕಂಡ ಎಸ್ಸೆಸ್ಸೆಲ್ಸಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಭಾರಿ ಕುಸಿತ ಕಂಡಿದ್ದು, 17 ಸ್ಥಾನಕ್ಕಿಳಿದಿದೆ. ಕೊರೊನಾ ಲಾಕ್‌ಡೌನ್‌ನಿಂದ ಮೂರೂವರೆ ತಿಂಗಳು ಕಲಿಕೆಯ ಸಂಪರ್ಕ ತಪ್ಪಿ ಹೋಗಿರುವುದೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017–18ರಲ್ಲಿ ಶೇ 81.56 ಫಲಿತಾಂಶ ಪಡೆದು 15ನೇ ಸ್ಥಾನದಲ್ಲಿದ್ದ ಜಿಲ್ಲೆ ಕಳೆದ ವರ್ಷದ ಶೇ 85.94 ಫಲಿತಾಂಶ ಪಡೆದು 9ನೇ ಸ್ಥಾನಕ್ಕೇರಿತ್ತು. ಈ ಬಾರಿ ಅಂದಾಜು ಶೇ 14ರಷ್ಟು ಕುಸಿತಕಂಡಿದೆ. ಶೇ 75ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಗಳನ್ನು ಎ, ಶೇ 60ರಿಂದ ಶೇ 75 ಪಡೆದ ಜಿಲ್ಲೆಗಳನ್ನು ‘ಬಿ’, ಶೇ 60ಕ್ಕಿಂತ ಕಡಿಮೆ ಇರುವುದನ್ನು ‘ಸಿ’ ಕೆಟಗರಿ ಎಂದು ಗುರುತಿಸಿದೆ. ದಾವಣಗೆರೆ ‘ಬಿ’ ಕೆಟಗರಿಯಲ್ಲಿದೆ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಹರಿಹರ ಎಂಕೆಟಿಎಲ್‌ಕೆ ಪ್ರೌಢ ಶಾಲೆಯ ಅಭಿಷೇಕ್‌ ಎಂ. 623 ಅಂಕ ಗಳಿಸಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರೆ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಕೆ‍ಪಿಎಸ್‌ ಪ್ರೌಢಶಾಲೆಯ ದಿವ್ಯತೇಜಾ 622 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಅನುಭವ ಮಂಟಪ ಎಸ್‌ಟಿಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಂಹಿತಾ ಎಸ್‌., ಜ್ಞಾನಶ್ರೀ ಎಸ್‌., ಸಿದ್ಧಗಂಗಾ ಪ್ರೌಢಶಾಲೆಯ ಆಕಾಶ್‌ ಆರ್‌. 623 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಅನುಭವ ಮಂಟಪ ಎಸ್‌ಟಿಜೆಯ ಸಂಜನಾ ಎಸ್‌.ಆರ್‌., ಹೊನ್ನಾಳಿ ಸ್ಟೆಲ್ಲಾ ಮೇರಿಸ್‌ ಪ್ರೌಢಶಾಲೆಯ ನಿತ್ಯಾಶ್ರೀ, ತುರ್ಚಘಟ್ಟ ಗುರುಕುಲದ ಲಕ್ಷ್ಮೀ ಎನ್‌. 622 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಗಳೂರು ಎನ್‌ಎಂಕೆಎಚ್‌ನ ಅಮಿತ್‌ ಡಿ.ಕೆ., ಚನ್ನಗಿರಿ ನವಚೇತನದ ಕೀರ್ತನಾ ಬಿ. 621 ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಜಿಲ್ಲೆಯಲ್ಲಿ 133 ಸರ್ಕಾರಿ ಪ್ರೌಢಶಾಲೆ, 172 ಅನುದಾನಿತ ಪ್ರೌಢಶಾಲೆ, 143 ಅನುದಾನ ರಹಿತ ಪ್ರೌಢಶಾಲೆಗಳ 21 ಸಾವಿರ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು.

ವಲಯವಾರು ಗ್ರೇಡ್ ನೀಡಲಾಗಿದ್ದು ಜಗಳೂರು ವಲಯ ಎ ಗ್ರೇಡ್‌ ಪಡೆದಿದೆ. ಹರಿಹರ, ಹೊನ್ನಾಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಚನ್ನಗಿರಿ ವಲಯಗಳು ಬಿ ಗ್ರೇಡ್‌ ಪಡೆದಿವೆ.

ಎಲ್ಲರನ್ನು ತಲುಪಲು ಕೊರೊನಾ ಅಡ್ಡಿ: ಡಿಡಿಪಿಐ

‘ಕೊರೊನಾ ಕಾಲದಲ್ಲಿ ಆನ್‌ಲೈನ್‌ ತರಗತಿ ಮಾಡಿದೆವು. ಆದರೆ ಅದು ಎಲ್ಲರನ್ನು ತಲುಪಲಿಲ್ಲ. ಕೆಲವರಲ್ಲಿ ಸ್ಮಾರ್ಟ್‌ಫೋನ್‌ ಇರಲಿಲ್ಲ. ಇದ್ದವರಿಗೆ ನೆಟ್‌ವರ್ಕ್‌ ಸಮಸ್ಯೆ. ಹಾಗಾಗಿ ಶೇ 25 ಮಂದಿಗೆ ನಮ್ಮ ಪ್ರಯತ್ನ ತಲುಪಲಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

ಅವರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಮೂರೂವರೆ ತಿಂಗಳು ಸಮಸ್ಯೆ ಆಯಿತು. ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಿದ್ದೆವು. ನಾಲ್ಕೈದು ಬಾರಿ ಪರೀಕ್ಷೆ ಮಾಡಿದ್ದೆವು. ಆದರೆ ಈ ದೀರ್ಘ ರಜೆ ಮಕ್ಕಳನ್ನು ಪುಸ್ತಕದಿಂದ ದೂರ ಮಾಡಿತು’ ಎಂದು ವಿವರಿಸಿದರು.

‘ಪೂರ್ವತಯಾರಿ ಪರೀಕ್ಷೆ ಆದ ಮೇಲೆ ಎಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಗುರುತಿಸುತ್ತೇವೆ. 21 ಸಾವಿರ ವಿದ್ಯಾರ್ಥಿಗಳಲ್ಲಿ 3,500 ಮಕ್ಕಳನ್ನು ಈ ರೀತಿಯಲ್ಲಿ ಗುರುತಿಸಲಾಗಿತ್ತು. ಈ ರೀತಿ ಗುರುತಿಸಿದ ಮಕ್ಕಳನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಏನು ಮಾಡಬೇಕು ಎಂದು ಕೊನೇ ತಿಂಗಳಲ್ಲಿ ಅವರಿಗೆ ಪರೀಕ್ಷೆ ಮಾಡಿ, ವಿವಿಧ ಚಟುವಟಿಕೆ ಹಮ್ಮಿಕೊಂಡು ಮೇಲಕ್ಕೆತ್ತಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಬಾರಿ ಅದು ಸಾಧ್ಯವಾಗಲಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು