ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಬನ್ನಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಲಹೆ
Published 24 ಜನವರಿ 2024, 7:37 IST
Last Updated 24 ಜನವರಿ 2024, 7:37 IST
ಅಕ್ಷರ ಗಾತ್ರ

ದಾವಣಗೆರೆ: ‘ಇಂದು ಮಹಿಳೆಯರಿಗೆ ಅನೇಕ ಸವಾಲುಗಳು ಎದುರಾಗಿದ್ದು, ಹೆಸರು, ಸ್ಥಾನಮಾನಗಳು ಸುಲಭವಾಗಿ ಸಿಗುತ್ತಿಲ್ಲ. ಎಲ್ಲವನ್ನೂ ಸಂಘರ್ಷದಿಂದಲೇ ಪಡೆಯಬೇಕಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

‘ಆತ್ಮಿ’ ಅಸೋಸಿಯೇಷನ್  ಬಿ.ಎಸ್. ಚನ್ನಬಸಪ್ಪ ಮಳಿಗೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸತ್ವಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ಪಿಯುಸಿ ಹಾಗೂ ಯುಪಿಎಸ್‌ಸಿಯಲ್ಲಿ ಹೆಣ್ಣು ಮಕ್ಕಳು ರ‍್ಯಾಂಕ್ ಪಡೆದರೂ ಅವರನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಲಾಗುತ್ತಿದೆ. ಮಹಿಳೆಯರು ಉನ್ನತ ಸ್ಥಾನಕ್ಕೆ ಏರಿ ನೆಲೆ ನಿಲ್ಲಲು ಬಸವಣ್ಣ ಹಾಗೂ ಅಂಬೇಡ್ಕರ್ ಕಾರಣ. ಬಸವಣ್ಣನವರ ಅನುಭವ ಮಂಟಪ ಮಹಿಳೆಯರಿಗೆ ಸಮಾನ ಲಿಂಗತ್ವ ಕಲ್ಪಿಸಿದ್ದರಿಂದಲೇ ಸಮಾನತೆ ಸಾಧ್ಯವಾಯಿತು. ಹೆಜ್ಜೆ ಹೆಜ್ಜೆಗೂ ಸವಾಲುಗಳ‌ನ್ನು ಮೆಟ್ಟಿ ನಿಂತು ಗುರಿ ಮುಟ್ಟಲು ಸಾಗಬೇಕಿದೆ. ದೇಶ ಕಟ್ಟುವ ಜವಾಬ್ದಾರಿ ಮಹಿಳೆಯರ ಮೇಲಿದ್ದು, ಮಕ್ಕಳನ್ನು ಶಿಕ್ಷಣ ಕೊಡಿಸಿ ಆರೋಗ್ಯವಂತರನ್ನಾಗಿ ಮಾಡಿದಾಗ ಈ ದೇಶ ಸಮೃದ್ಧಿಯತ್ತ ಸಾಗಲು ಸಾಧ್ಯ’ ಎಂದು ಹೇಳಿದರು.

‘ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಗೃಹಲಕ್ಷ್ಮಿ, ‘ಶಕ್ತಿ’ ಯೋಜನೆಗಳು ಮಹಿಳೆಯರನ್ನು ಸಬಲೀಕರಣದತ್ತ ಸಾಗಿಸುತ್ತಿವೆ. ಮಲ್ಲಿಗೆ ಹೂವು, ತೆಂಗಿನ ಕಾಯಿ ಮಾರಾಟ ಮಾಡುವವರು, ಪಾತ್ರೆ ತೊಳೆದು ಜೀವನ ಸಾಗಿಸುತ್ತಿರುವ ಅನೇಕ ಮಹಿಳೆಯರಿಗೆ ಕಡಿಮೆ ಕೂಲಿ ನೀಡುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದ ಬರುವ ಹಣ ಸಂಸಾರ ಸಾಗಿಸಲು ನೆರವಾಗಿವೆ’ ಎಂದರು.

‘ಆತ್ಮಿ’ ಅಸೋಸಿಯೇಷನ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಇಲಾಖೆಯಿಂದ ನೆರವು ನೀಡಿ ಅನುಕೂಲ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ,‘ಹೆಣ್ಣು ಮಕ್ಕಳಿಗೆ ಅಧಿಕಾರ ನೀಡದೇ ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ಕಾಲದಲ್ಲಿ ಬಸವಣ್ಣನವರು ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರು. ಹೆಣ್ಣು ಮಕ್ಕಳು ಸೈನಿಕ, ಪೈಲೆಟ್‌, ವೈದ್ಯರಾಗಿ, ಐಎಎಸ್‌ಗಳಂತಹ ಉನ್ನತ ಹುದ್ದೆಯಲ್ಲಿದ್ದರೂ ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲಾಗುತ್ತಿದೆ. ಉತ್ತರ ಭಾರತದಲ್ಲಿ ಇದು ಹೆಚ್ಚಾಗಿದ್ದು, ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರಿಗೆ ನ್ಯಾಯಾಲಯಗಳು ಕಠಿಣ ಶಿಕ್ಷೆ ವಿಧಿಸಬೇಕು’ ಎಂದರು.

ಎಸ್‌.ಎಸ್.ಕೇರ್ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ‘ಜನಕಲ್ಯಾಣ ಟ್ರಸ್ಟ್‌, ಎಸ್‌.ಎಸ್.ಕೇರ್ ಟ್ರಸ್ಟ್ ಮೂಲಕ 16,000 ಡಯಾಲಿಸಿಸ್ ಚಿಕಿತ್ಸೆ, 450 ಹೆರಿಗೆ, 60 ಉಚಿತ ಆರೋಗ್ಯ ಶಿಬಿರ, 2000 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅರಿವು, ‘ಪ್ರತಿಜ್ಞಾ’ ಕಾರ್ಯಕ್ರಮದ 10 ಸರ್ಕಾರಿ ಶಾಲೆಗಳ ಮಕ್ಕಳಿಗೆ ರಕ್ತಹೀನತೆಯ ಬಗ್ಗೆ ಅರಿವು ಮೂಡಿಸಲಾಗಿದೆ. ಎಚ್ಐವಿಪೀಡಿತ ಮಕ್ಕಳಿಗೆ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

ಸಮಾಜ ಸೇವಾ ಕಾರ್ಯಕರ್ತ ಘನಶ್ಯಾಮ್ ಟಿ.ಬಾಂಡಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಬಿ.ಎಸ್.ಚನ್ನಬಸಪ್ಪ ಮಳಿಗೆಯ ಬಿ.ಸಿ. ಚಂದ್ರಶೇಖರ್, ಆತ್ಮಿ ಸಂಸ್ಥೆಯ ಅಧ್ಯಕ್ಷೆ ಪ್ರಸನ್ನ ಬಿ., ಕಾರ್ಯದರ್ಶಿ ಶೋಭಶಿವರಾಜ್, ಖಜಾಂಚಿ ಲಕ್ಷ್ಮಿ ಅಜಿತ್, ಉಪಾಧ್ಯಕ್ಷೆ ನಂದಿನಿ ಗಂಗಾಧರ್ ಇತರರು ಇದ್ದರು.

ದಾವಣಗೆರೆಯಲ್ಲಿ ‘ಆತ್ಮಿ’ ಅಸೋಶಿಯೇಷನ್ ಆಯೋಜಿಸಿದ್ದ ‘ಸತ್ವಸಂಗಮ’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಸಂಘದ ಪದಾಧಿಕಾರಿ ವಸ್ತುಗಳನ್ನು ವೀಕ್ಷಿಸಿದರು.
ದಾವಣಗೆರೆಯಲ್ಲಿ ‘ಆತ್ಮಿ’ ಅಸೋಶಿಯೇಷನ್ ಆಯೋಜಿಸಿದ್ದ ‘ಸತ್ವಸಂಗಮ’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಸಂಘದ ಪದಾಧಿಕಾರಿ ವಸ್ತುಗಳನ್ನು ವೀಕ್ಷಿಸಿದರು.

30 ಫಿಸಿಯೊಥೆರಪಿ ಯಂತ್ರ ವಿತರಣೆ ಹೊಲಿಗೆ ಯಂತ್ರ, ಗ್ರೈಂಡರ್ ವಿತರಣೆ ಹೃದಯ ಚಿಕಿತ್ಸೆಗೆ ಧನಸಹಾಯ

‘ರಜೆ ವಿಚಾರದಲ್ಲಿ ರಾಜಕಾರಣ ಮಾಡುವ ದರಿದ್ರ ಪರಿಸ್ಥಿತಿ ಬಂದಿಲ್ಲ’ ದಾವಣಗೆರೆ: ರಜೆ ನೀಡುವ ವಿಚಾರದಲ್ಲಿ ರಾಜಕಾರಣ ಮಾಡುವ ದರಿದ್ರ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ದಿವಸ ಕರ್ನಾಟಕದಲ್ಲಿ ರಜೆ ಘೋಷಿಸದೇ ಇರುವ ಕುರಿತು ಪ್ರತಿಕ್ರಿಯಿಸಿ ರಾಮ ಎಲ್ಲಾ ಕಡೆಗಳಲ್ಲಿಯೂ ಇದ್ದು ಕಾಯಕವೇ ಕೈಲಾಸ ಅಂತ ಅನ್ನುವವರು ನಾವು. ಕಾಯಕದಲ್ಲೂ  ಭಗವಂತನನ್ನ ಕಾಣಬಹುದು. ನಮಗೂ ಭಕ್ತಿ ಭಾವನೆಗಳಿದ್ದು ವೈಯಕ್ತಿಕವಾಗಿ ಅಯೋಧ್ಯೆಗೆ ಹೋಗಿ ದರ್ಶನ ಪಡೆಯುತ್ತೇನೆ’ ಎಂದು ಹೇಳಿದರು. ‘ಗಾಂಧೀಜಿ ಬಗ್ಗೆ ಪ್ರಬಂಧ ಸ್ಫರ್ಧೆಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಮಹಾತ್ಮ ಗಾಂಧಿ ಬಗ್ಗೆ ಟೀಕೆಗಳು‌ ಸಾಧ್ಯವೇ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವ್ಯಕ್ತಿಯವರು. ಸಾಯುವಾಗಲೂ ಹೇ ರಾಮ್‌ ಅಂತ ಜಪಿಸಿದರು’ ಎಂದು ಸ್ಮರಿಸಿದರು. ‘ನಾವು ಆ ರಾಮ ಈ ರಾಮಾ ಅಂತಿಲ್ಲ. ಒಟ್ಟಿನಲ್ಲಿ ನಾವು ರಾಮನ ಭಕ್ತರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿಯೂ ರಾಮ ಇದ್ದಾನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ನೀಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಲವೊಂದು ಸಮಯದಲ್ಲಿ ಅಚಾತುರ್ಯಗಳು ನಡೆದಿರುತ್ತದೆ. ಇದು ಗಮನಕ್ಕೆ ಬಂದಾ ತಕ್ಷಣ ಬರೆಹರಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT