ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಲ್ಲಿ ಮೀನುಗಾರಿಕೆ ವಿವಿ ತೆರೆಯಲು ಕ್ರಮ: ಸಚಿವ ಎಸ್‌. ಅಂಗಾರ

ಕೊಂಡಜ್ಜಿ ಮೀನು ಮರಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಎಸ್‌. ಅಂಗಾರ
Last Updated 18 ಸೆಪ್ಟೆಂಬರ್ 2021, 14:44 IST
ಅಕ್ಷರ ಗಾತ್ರ

ದಾವಣಗೆರೆ: ಮಂಗಳೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಎಸ್‌. ಅಂಗಾರ ಹೇಳಿದರು.

ಕೊಂಡಜ್ಜಿ ಮೀನುಮರಿ ಸಾಕಾಣಿಕೆ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

‘ಬೀದರ್‌ನಲ್ಲಿ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇದೆ. ಸಮುದ್ರದ ಮೀನುಗಾರಿಕೆ ಇರುವುದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ. ಒಳನಾಡಿನ ಮೀನುಗಾರಿಕೆ ದೊಡ್ಡಮಟ್ಟದಲ್ಲಿ ಇಲ್ಲ. ಹಾಗಾಗಿ ಆ ವಿಶ್ವವಿದ್ಯಾಲಯದಿಂದ ಮೀನುಗಾರಿಕೆಯನ್ನು ಪ್ರತ್ಯೇಕಿಸಿ ಮಂಗಳೂರಿನಲ್ಲಿ ಮಾಡಬೇಕು ಎಂಬ ಪ್ರಸ್ತಾವ ಇದೆ. ಅದಕ್ಕೆ ₹ 1200 ಕೋಟಿ ನೀಡಬೇಕು ಎಂದು ಹಿಂದಿನ ಮುಖ್ಯಮಂತ್ರಿಯವರಲ್ಲಿಯೂ ತಿಳಿಸಿದ್ದೆ. ಈಗಿನ ಮುಖ್ಯಮಂತ್ರಿಯವರಿಗೂ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ಒಳನಾಡು ಮೀನುಗಾರಿಕೆಗೆ ಈಗ ಮೀನಿನ ಮರಿಗಳಿಗಾಗಿ ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರವನ್ನು ಅವಲಂಬಿಸಬೇಕಿದೆ. ಅದನ್ನು ತಪ್ಪಿಸಬೇಕಿದ್ದರೆ ಮೀನು ಮರಿ ಸಾಕಾಣೆಯನ್ನು ನಾವು ಹೆಚ್ಚು ಮಾಡಿಕೊಳ್ಳಬೇಕು. ಎಲ್ಲಿ ಎಲ್ಲ ಅವಕಾಶ ಇದೆಯೋ ಅಲ್ಲೆಲ್ಲ ಹೆಚ್ಚು ಮಾಡಲಾಗುವುದು. ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲು ಮೀನುಗಾರಿಕೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಮೀನುಗಾರಿಕೆಗೆ ಸಂಬಂಧಿಸಿದಂತೆ ಈಗಿರುವ ಕೆಲವು ನಿಯಮಗಳನ್ನು ಬದಲಾಯಿಸಬೇಕಿದೆ. ರೈತರು ಸುಲಭದಲ್ಲಿ ತಮ್ಮ ಕೆರೆಗಳಲ್ಲಿ ಮೀನು ಮರಿಗಳನ್ನು ಹಾಕಿ ಬೆಳೆಯುವಂತೆ ಆಗಬೇಕು. ಅದಕ್ಕೆ ತಕ್ಕಂತೆ ನಿಯಮಗಳನ್ನು ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದರು.

ಕೊಂಡಜ್ಜಿಯಲ್ಲಿ ಮೀನುಸಾಕಾಣಿಕೆ ಕೇಂದ್ರದ ಕೆರೆಯೊಂದರಲ್ಲಿ ಹುಲ್ಲು ಬೆಳೆದಿರುವಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘ಅದನ್ನೆಲ್ಲ ಸ್ವಚ್ಛಗೊಳಿಸಿ ಮೀನು ಸಾಕಾಣಿಕೆಗೆ ಬಳಸಿಕೊಳ್ಳಿ. ಅದನ್ನೆಲ್ಲ ಸರಿಯಾಗಿ ನಿರ್ವಹಣೆ ಮಾಡೋದೇ ಇಲ್ಲ. ಕಟ್ಟಡಗಳಿಗೆ ಹಣ ಕೇಳಬೇಡಿ. ಇಂಥ ಕೆಲಸಗಳನ್ನು ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿಷೇಧಿತ ಕ್ಯಾಟ್‌ಫಿಶ್‌ ಮೀನುಗಾರಿಕೆ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅನಿರೀಕ್ಷಿತವಾಗಿ ನಾನು ಭೇಟಿ ನೀಡುತ್ತೇನೆ. ಆಗ ಕ್ಯಾಟ್‌ಫಿಶ್‌ ಕಂಡು ಬಂದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು ಎಂದು ಹರಿಹರದಲ್ಲಿ ನಡೆಯುತ್ತಿರುವ ಕ್ಯಾಟ್‌ಫಿಶ್‌ ಮೀನುಗಾರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT