ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಿಲ್ಡರ್‌ಗಳಿಗೆ ಈಗಲೂ ಸವಿಸಮಯ

ಸುಲಿಗೆಯ ತೊಡಕುಗಳ ನಡುವೆ ನಿವೇಶನಗಳಿಗೆ ಏರುತ್ತಿದೆ ಬೇಡಿಕೆ
Last Updated 8 ಅಕ್ಟೋಬರ್ 2021, 5:41 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಾದೇಶಿಕವಾಗಿ ಕರ್ನಾಟಕದ ಮಧ್ಯದಲ್ಲಿ ಇರುವ ದಾವಣಗೆರೆಯಲ್ಲಿ ಹವಾಮಾನ ಕೂಡ ಮಧ್ಯಮ ಸ್ಥಿತಿಯದ್ದು. ಇಲ್ಲಿ ಭಾರಿ ಮಳೆ ಬರಲ್ಲ. ಸುಡುಬಿಸಿಲು ಕೂಡ ಇರಲ್ಲ. ಚಳಿ ಇದ್ದರೂ ತತ್ತರಿಸಿ ಹೋಗುವಂತಿರಲ್ಲ. ಹೀಗೆ ಎಲ್ಲವೂ ಅತಿ ಅಲ್ಲದ ದಾವಣಗೆರೆಯ ಹವಾಮಾನ ವಾಸಯೋಗ್ಯವಾಗಿದೆ. ಉತ್ತಮ ರೈಲು ಸಂಪರ್ಕ, ಸಾರಿಗೆ ಸಂಪರ್ಕ ಇದೆ. ಪಕ್ಕದ ಹರಿಹರದಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ನೀರಿನ ಕೊರತೆ ಇಲ್ಲ. ಭಾರಿ ಕೈಗಾರಿಕೆಗಳು ಇನ್ನೂ ಅಭಿವೃದ್ಧಿಯಾಗದ ಕಾರಣ ಗಾಳಿಯೂ ಭಾರಿ ಪ್ರಮಾಣದಲ್ಲಿ ಕಲುಷಿತಗೊಂಡಿಲ್ಲ.

ತಿನ್ನೋ ಆಹಾರವೂ ಬಹಳ ದೂರದಿಂದ ಬರಬೇಕಿಲ್ಲ. ಭತ್ತ ಇದೇ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಈರುಳ್ಳಿ, ಟೊಮಟೊ ಸಹಿತ ತರಕಾರಿಗಳೂ ಇಲ್ಲೇ ಬೆಳೆಯಲಾಗುತ್ತದೆ. ರಾಗಿ, ಜೋಳ ಸಹಿತ ಬಹುತೇಕ ಎಲ್ಲವೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸಿಗುತ್ತವೆ.

ಜಿಲ್ಲೆಯಲ್ಲಿ ಸದ್ಯ ಜಗಳೂರು ತಾಲ್ಲೂಕು ಒಂದೇ ಮಳೆ ಕಡಿಮೆ ಇರುವ ತಾಲ್ಲೂಕು ಆಗಿದೆ. ವಿವಿಧ ಏತ ನೀರಾವರಿ, ಕೆರೆ ಅಭಿವೃದ್ಧಿ, ಕೆರೆ ತುಂಬಿಸುವ ಯೋಜನೆಯಿಂದ ಬರದ ತಾಲ್ಲೂಕು ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳಲು ಜಗಳೂರು ಕೂಡ ತಯಾರಾಗಿದೆ.

ಕುರಿ, ಕೋಳಿಗಳು, ಮೊಟ್ಟೆ ಹೀಗೆ ಮಾಂಸಾಹಾರಕ್ಕೆ ಬೇಕಾದ ಉತ್ಪನ್ನಗಳೂ ಇದೇ ಜಿಲ್ಲೆಯಲ್ಲಿ ಇದೆ. ಈ ಎಲ್ಲ ಕಾರಣದಿಂದ ಹೊರಗಡೆಯಿಂದ ತರಬೇಕಾದಾಗ ತೆರಬೇಕಾದ ವೆಚ್ಚ ದಾವಣಗೆರೆಯ ಮಟ್ಟಿಗೆ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಹಾಗಾಗಿ ಇಲ್ಲಿ ನಿತ್ಯ ಬದುಕಿನ ವೆಚ್ಚವೂ ಕಡಿಮೆ.

ರಾಜನಹಳ್ಳಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಕುಂದವಾಡ ಕೆರೆ, ಟಿವಿಎಸ್‌ ಕೆರೆಗಳು ಕೂಡ ಕುಡಿಯುವ ನೀರಿನ ಮೂಲಗಳಾಗಿವೆ. ಜತೆಗೆ ಬಾತಿ ಕೆರೆಯನ್ನು ಕೂಡ ಅಭಿವೃದ್ಧಿ ಪಡಿಸಿ ಕುಡಿಯುವ ನೀರಿಗೆ ಬಳಸುವ ಯೋಜನೆ ಜಾರಿಯಲ್ಲಿದೆ. ಬಾತಿ ಗುಡ್ಡದಲ್ಲಿ ಬ್ಯಾರೇಜ್‌ ನಿರ್ಮಿಸಿ ಅಲ್ಲಿಗೆ ನೀರು ಪಂಪ್‌ ಮಾಡಿ, ಅಲ್ಲಿಂದ ನೈಸರ್ಗಿಕ ಗುರುತ್ವಾಕರ್ಷಕ ಶಕ್ತಿಯಲ್ಲಿ ನೀರು ಪೂರೈಕೆ ಮಾಡಲು ₹ 120 ಕೋಟಿ ಇಡಲಾಗಿದೆ. ಮಹಾನಗರ ಪಾಲಿಕೆಯಿಂದ ರಸ್ತೆ, ಒಳಚರಂಡಿ, ನೀರಿನ ವ್ಯವಸ್ಥೆಗಳು ಚೆನ್ನಾಗಿವೆ.

ದಾವಣಗೆರೆ ಜಿಲ್ಲೆಯಾದ ಮೇಲೆ ಹಲವಾರು ಮಂದಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ನಗರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅದರಲ್ಲಿ ಎಸ್‌.ಎ. ರವೀಂದ್ರನಾಥ್‌, ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಅಂದರೆ ಇಲ್ಲಿಯವರೇ ಉಸ್ತುವಾರಿ ಸಚಿವರಾಗಿರುವ ಸಮಯದಲ್ಲಿ ಅಭಿವೃದ್ಧಿ ಶರವೇಗ ಕಂಡಿದೆ.

ಶಿಕ್ಷಣ ಸಂಸ್ಥೆಗಳು ಬೇಕಾದಷ್ಟು ದಾವಣಗೆರೆಯಲ್ಲಿ ಇರುವುದರಿಂದ ಇದು ವಿದ್ಯಾಕಾಶಿ ಎಂದು ಹೆಸರಾಗಿದೆ. ಸುತ್ತಮುತ್ತಲ ತಾಲ್ಲೂಕು, ಜಿಲ್ಲೆಗಳಲ್ಲಿ ಜಮೀನು ಹೊಂದಿದ್ದರೂ ಮಕ್ಕಳನ್ನು ಓದಿಸುವುದಕ್ಕಾಗಿ ದಾವಣಗೆರೆಯಲ್ಲಿ ಒಂದು ಮನೆ ಇರಲಿ ಎಂದು ಜನ ಬಯಸುತ್ತಿದ್ದಾರೆ.

ಯಾವುದೇ ಊರು, ಜಿಲ್ಲೆಯವರಾದರೂ ಸರ್ಕಾರಿ ನೌಕರರಾಗಿ, ಇಲ್ಲವೇ ಖಾಸಗಿ ಕಂಪನಿಗಳ ನೌಕರರಾಗಿ ಒಮ್ಮೆ ದಾವಣಗೆರೆಯಲ್ಲಿ ಕೆಲಸ ಮಾಡಿದರೆ ಇಲ್ಲಿ ಮನೆ ಮಾಡಲು ಬಯಸುತ್ತಾರೆ.

ಹೀಗೆ ಮೂಲ ಅವಶ್ಯಕಗಳು ಸುಲಭದಲ್ಲಿ ಸಿಗುವ, ಮೂಲ ಸೌಕರ್ಯಗಳಿಗೆ ತೊಂದರೆ ಇಲ್ಲದ, ಹವಾಮಾನವೂ ಚೆನ್ನಾಗಿರುವ ದಾವಣಗೆರೆ ವಾಸಯೋಗ್ಯ ನಗರಗಳಲ್ಲಿ ಒಂದಾಗಿದೆ. ಹಾಗಾಗಿಯೇ ಇಲ್ಲಿ ಬೇರೆಲ್ಲ ತೊಡಕುಗಳಿದ್ದರೂ ಅವೆಲ್ಲವನ್ನು ಮೀರಿ ರಿಯಲ್‌ ಎಸ್ಟೇಟ್‌ ಬೆಳೆದಿದೆ. ಬೆಳೆಯುತ್ತಿದೆ.

ದಾವಣಗೆರೆಯಲ್ಲಿ 100ಕ್ಕೂ ಅಧಿಕ ಲ್ಯಾಂಡ್‌ ಡೆವಲಪರ್ಸ್‌ ಅಂದರೆ ಭೂಮಿ ಅಭಿವೃದ್ಧಿ ಪಡಿಸಿ ನಿವೇಶನ ಮಾಡಿ ಕೊಡುವವರು ಇದ್ದಾರೆ. 20ಕ್ಕೂ ಅಧಿಕ ಮಂದಿ ಮನೆಯನ್ನೂ ಕಟ್ಟಿಕೊಡುವವರು (ಬಿಲ್ಡರ್ಸ್‌) ಇದ್ದಾರೆ. ದಾವಣಗೆರೆ ನಗರ ಸುತ್ತಮುತ್ತ ಎಲ್ಲ ಕಡೆಗಳಲ್ಲಿ ಬಡಾವಣೆಗಳು ಏಳುತ್ತಿವೆ.

ಲ್ಯಾಂಡ್‌ ಡೆವಲಪರ್ಸ್‌ ಹೇಳುವ ತೊಡಕುಗಳು ಏನು?
* ರೈತರ ಜಮೀನು ತಗೊಂಡಿರುತ್ತಾರೆ. ಆರಂಭಿಕ ಮೊತ್ತ ನೀಡಿ, ಉಳಿದವುಗಳನ್ನು ದಾಖಲೆ ವರ್ಗಾವಣೆಗೊಂಡಾಗ ನೀಡಲಾಗಿರುತ್ತದೆ. ಇದು ಆರು ತಿಂಗಳ ಒಳಗೆ ಆಗುತ್ತದೆ ಎಂದು ಭರವಸೆ ನೀಡಲಾಗಿರುತ್ತದೆ. ಆದರೆ ಈ ಅವಧಿಯ ಒಳಗೆ ಅಧಿಕಾರಿಗಳು ಮಾಡಿ ಕೊಡುವುದಿಲ್ಲ. ಅಲ್ಲಿ ಭೂಮಿ ದರ ಹೆಚ್ಚಾಗಿರುತ್ತದೆ. ರೈತರು ಆಗ ಜಾಸ್ತಿ ಕೇಳತೊಡಗುತ್ತಾರೆ. ಇದು ಮೊದಲ ಸಮಸ್ಯೆ.

* ಅಲ್ಲಿಂದ ರಿಜಿಸ್ಟ್ರಾರ್‌ ಕಚೇರಿಗೆ ಬಂದರೆ ಅವರಿಗೆ ಕೊಡಬೇಕು, ಇವರಿಗೆ ಕೊಡಬೇಕು ಎಂದು ಪತ್ರ ಬರಹಗಾರರು ಕೇಳತೊಡಗುತ್ತಾರೆ. ಇಲ್ಲಿಂದ ಸುಲಿಗೆ ಆರಂಭಗೊಳ್ಳುತ್ತದೆ. ಅಲ್ಲಿ ಕೊಡಬೇಕಾದ್ದನ್ನು ಕೊಡದೇ ಹೋದರೆ ದಾಖಲೆಗಳು ಸರಿ ಇಲ್ಲ ಎಂದು ಫೈಲ್‌ ವಾಪಸ್‌ ಆಗುತ್ತದೆ. ಕೊಟ್ಟರೆ ಎಲ್ಲ ದಾಖಲೆಗಳು ಸರಿ ಇರುತ್ತವೆ !

* ರೈತರಿಂದ ಒಂದು ಎಕರೆ ಖರೀದಿಸಿ ಅದನ್ನು ಸರ್ವೆ ಮಾಡಿದಾಗ 2 ಗುಂಟೆ ಒತ್ತುವರಿ ಆಗಿದ್ದರೆ ಅಧಿಕಾರಿಗಳು ಬಿಡಿಸಿಕೊಡಬೇಕು. ಆದರೆ ಆ ಕೆಲಸ ಮಾಡುವುದಿಲ್ಲ. ಬಿಡಿಸಿಕೊಡಲು ಮತ್ತೆ ಹೆಚ್ಚುವರಿಯಾಗಿ ಅವರನ್ನು ನೋಡಿಕೊಳ್ಳಬೇಕು.

* 11ಇ ಮತ್ತು ಹದ್ದುಬಸ್ತಿಗೆ ಸರ್ವೆ ಇಲಾಖೆಯಿಂದ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.

* ಇದೆಲ್ಲ ಮುಗಿಸಿ ಧೂಡಕ್ಕೆ ಬಂದರೆ ಮಾರಿಹಬ್ಬ ಆರಂಭವಾಗುತ್ತದೆ. ಎನ್‌ಒಸಿ ಕೊಡಲು ಕಾನೂನಾತ್ಮಕ ಅಡ್ಡಿ ಇಲ್ಲದೇ ಇದ್ದರೂ ನೀಡಲ್ಲ. ಅವರನ್ನು ನೋಡಿಕೊಂಡಾಗ ಮಾತ್ರ ಸಿಗುತ್ತದೆ. ಸಿಡಿಪಿಯಲ್ಲಿ ಹಳದಿ ವಲಯ ಎಂದು ಮೊದಲೇ ಗುರುತಾಗಿದ್ದರೆ ಅದಕ್ಕೆ ಎನ್‌ಒಸಿ ಬೇಕಾಗಿಲ್ಲ. ಆದರೆ ಇಲ್ಲಿ ಎನ್‌ಒಸಿ ಬೇಕೆ ಬೇಕು ಎನ್ನುತ್ತಿದ್ದಾರೆ.

* ಅಲ್ಲಿಂದ ಮತ್ತೆ ಧೂಡಾಕ್ಕೆ ಬರುತ್ತದೆ. ಅಲ್ಲಿ ಪ್ರಾವಿಜನ್‌ ಪ್ಲಾನ್‌ ಆಗಬೇಕು. ಶೇ 45ರಷ್ಟು ಸರ್ಕಾರ, ಅರೆಸರ್ಕಾರ ಬಳಕೆಗೆ ನೀಡಲಾಗುತ್ತದೆ. ಉಳಿದ ಶೇ 55ರಷ್ಟು ನಿವೇಶನ ಮಾಡಲು ಸಿಗುತ್ತದೆ. ಆದರೆ ಪ್ರಾವಿಜನ್‌ ಮಾಡುವ ಅಧಿಕಾರಿ ಶೇ 52 ಅಥವಾ ಶೇ 53 ಅಷ್ಟೇ ತೋರಿಸುತ್ತಾರೆ. ಮತ್ತೆ ಲಾಸ್‌ ಆಗುವುದನ್ನು ತಪ್ಪಿಸಬೇಕಿದ್ದರೆ ಅಧಿಕಾರಿಗಳ ಜತೆಗೆ ಡೀಲ್‌ ಮಾಡ್ಕೊಬೇಕಾಗುತ್ತದೆ. ಮೊದಲು ಎಲ್ಲ ನೋಡಿ ಅವರೇ ಅನುಮತಿ ಕೊಟ್ಟಿರುತ್ತಾರೆ. ಮತ್ತೆ ಇಲ್ಲೊಂದು ರಸ್ತೆ ಆಗಬೇಕು ಎಂದು ತಗಾದೆ ತೆಗೆಯುತ್ತಾರೆ.

* ಯುಜಿಡಿ ವ್ಯವಸ್ಥೆ ಪರಿಶೀಲನೆ ಇವರದೇ ಅಧಿಕಾರಿಗಳು ಮಾಡುತ್ತಾರೆ. ಮತ್ತೆ ಧರ್ಡ್‌ಪಾರ್ಟಿ ಶುಲ್ಕ ಎಂದು ವಸೂಲಿ ಮಾಡುತ್ತಾರೆ. ಎಕರೆಗೆ ಇಷ್ಟು ಎಂದು ಮತ್ತೆ ಕೊಡಬೇಕಾಗುತ್ತದೆ.

* ಇದೆಲ್ಲ ಮುಗಿದು ಅಂತಿಮ ವಸತಿ ವಿನ್ಯಾಸ ಅಪ್ರೋಚ್‌ಗೆ ಹೋಗೇಬಕು. ಅವರು ಹೇಳಿದಂತೆ ವಿನ್ಯಾಸ ಆಗಿರುತ್ತದೆ. ಇನ್ಯಾವುದೋ ತಗಾದೆ ತೆಗೆಯುತ್ತಾರೆ. ಅದೆಲ್ಲವನ್ನು ಸರಿ ಮಾಡಿಕೊಂಡು ಬರುವ ಹೊತ್ತಿಗೆ ಸುಸ್ತು ಬಿದ್ದುಹೋಗುತ್ತದೆ.

* ಇಷ್ಟೆಲ್ಲ ಆದ ಮೇಲೆ ಪಾಲಿಕೆಗೆ ಬರುತ್ತದೆ. ಇಲ್ಲಿ ಮತ್ತೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂಬ ನೆಪಗಳು ಶುರುವಾಗುತ್ತವೆ. ಅಮಲ್ಗಮೇಶನ್‌/ಬೈಫರ್‌ಕೇಶನ್‌ (ಜೋಡಣೆ, ವಿಂಗಡಣೆ) ಮಾಡಲು ತಿಂಗಳುಗಟ್ಟಲೆ ಓಡಾಡಬೇಕಿದೆ.

ಕ್ರೆಡಾಯ್‌ ಸಂಸ್ಥೆ
ಬಿಲ್ಡರ್ಸ್‌ ಮತ್ತು ಡೆವಲಪರ್‌ಗಳ ಸಮಸ್ಯೆಗಳನ್ನು ಸರಿಮಾಡಲೆಂದೇ ಕ್ರೆಡಾಯ್‌ ಸಂಸ್ಥೆ ಕಟ್ಟಲಾಗಿದೆ. ಭಾರತದಾದ್ಯಂತ ಈ ಸಂಸ್ಥೆ ಇದೆ. ದಾವಣಗೆರೆಯಲ್ಲಿ 30 ಮಂದಿ ಡೆವಲಪರ್ಸ್‌ ಮತ್ತು ಬಿಲ್ಡರ್ಸ್‌ ಇದರ ಸದಸ್ಯರಾಗಿದ್ದಾರೆ. ಇದರ ಸದಸ್ಯರಾಗದವರ ಸಂಖ್ಯೆ ಇನ್ನೂ ದೊಡ್ಡದಿದೆ. ಕ್ರೆಡಾಯ್‌ ದಾವಣಘೆರೆಯ ಅಧ್ಯಕ್ಷರಾಗಿ ಬಿ.ಜಿ. ಅಜಯ್‌ ಕುಮಾರ್‌ ಕಾರ್ಯನಿರ್ವಹಿಸುತ್ತಿದ್ದರೆ ರಮಾಕಾಂತ್‌ ಎಸ್‌. ವರ್ಣೇಕರ್‌, ಕೆ. ಶ್ರೀನಾಥ ರೆಡ್ಡಿ ಉಪಾಧ್ಯಕ್ಷರಾಗಿದ್ದಾರೆ. ಕಂಚಿಕೆರೆ ಮಹೇಶ್‌ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್‌ ಕುಮಾರ್‌ ಡಿ., ಬಿ.ಎಚ್‌. ಶ್ರೀಧರ್‌ ಖಜಾಂಚಿಯಾಗಿ, ಬಾತಿ ಅಜಯ್‌ ಜಂಟಿ ಖಜಾಂಚಿಯಾಗಿ, ಶ್ರೀನಿವಾಸ ಹರಿಹರ, ಸುರೇಶ್‌ ಕುಮಾರ್‌ ಜಿ.ಬಿ. ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ. ಹರ್ಷ ರೆಡ್ಡಿ ಯೂತ್‌ವಿಂಗ್‌ ಅಧ್ಯಕ್ಷರಾಗಿದ್ದಾರೆ.

ಯಾರು ಏನು ಅಂತಾರೆ?
ಒಂದು ಕಾಲದಲ್ಲಿ ಹತ್ತಿ ಗಿರಾಣಿಗಳ ರಾಜಧಾನಿ ದಾವಣಗೆರೆಯಾಗಿತ್ತು. ಹರಿಹರದಲ್ಲಿ ಕಿರ್ಲೋಸ್ಕರ್‌ನಂಥ ಕಂಪನಿ ಇತ್ತು. ಈಗ ದೊಡ್ಡ ಪ್ರಮಾಣದ ಕಂಪನಿಗಳು ಇಲ್ಲ. ಸ್ಮಾರ್ಟ್‌ಸಿಟಿ ಆದರೂ ಇಲ್ಲಿ ವಿಮಾನ ನಿಲ್ದಾಣ ಇಲ್ಲ. ಐಟಿ ಹಬ್‌ ಇಲ್ಲ. ಅವೆಲ್ಲ ಆದರೆ ನಿವೇಶನ ಮತ್ತು ವಸತಿಗಳಿಗೆ ಇನ್ನಷ್ಟು ಬೇಡಿಕೆ ಬರಲಿದೆ. ಅಲ್ಲದೇ ಇಲ್ಲಿನ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ವರ್ಷಕ್ಕೆ 45 ಸಾವಿರ ನೋಂದಣಿಗಳು ನಡೆಯುತ್ತಿವೆ. ಈ ಅಗಾಧ ಸಂದಣಿಯನ್ನು ತಪ್ಪಿಸಲು ದಾವಣಗೆರೆ ಉತ್ತರ, ದಕ್ಷಿಣ ಮತ್ತು ಮಾಯಕೊಂಡಕ್ಕೆ ಪ್ರತ್ಯೇಕ ಸಬ್‌ ರಿಜಿಸ್ಟ್ರಾರ್‌ ಕಚೇರಿ ಮಾಡಬೇಕು.
-ಬಿ.ಜಿ. ಅಜಯ್‌ಕುಮಾರ್‌, ಅಧ್ಯಕ್ಷರು, ಕ್ರೆಡಾಯ್‌, ದಾವಣಗೆರೆ

ಕುಂದವಾಡದಲ್ಲಿ 194 ಸರ್ವೆ ನಂಬರ್‌ನಲ್ಲಿ ನನ್ನ ಲೇಔಟ್‌ ಇದೆ. ಅಕ್ಕಪಕ್ಕದಲ್ಲಿ ಇರುವ 193 ಮತ್ತು 195ನೇ ಸರ್ವೆ ನಂಬರ್‌ನವರಿಗೆ ಎಲ್ಲ ಅಪ್ರುವಲ್ ಸಿಕ್ಕಿದೆ. ನಂಗೆ ಮಾತ್ರ ಇದರಲ್ಲಿ ಒಂದು ಅಡ್ಡ ರಸ್ತೆ ಇದೆ ಎಂದು ಹೇಳಿದ್ದಾರೆ. ಅಕ್ಕಪಕ್ಕದಲ್ಲಿ ಇಲ್ಲದೇ ಇಲ್ಲಿ ಮಾತ್ರ ಹೇಗೆ ಕಾಣಿಸಿಕೊಂಡಿತು ಎಂಬುದು ಅರ್ಥವಾಗುತ್ತಿಲ್ಲ. ಇದೇ ರೀತಿ ಎಲ್ಲ ವಿಚಾರಗಳಲ್ಲಿ ಅನಗತ್ಯವಾಗಿ ತಗಾದೆ ತೆಗೆಯುವುದನ್ನು ಬಿಟ್ಟು ಡೆವಲಪರ್ಸ್‌ಗೆ ಪ್ರೋತ್ಸಾಹ ನೀಡಬೇಕು.
-ರಮಾಕಾಂತ ಎಸ್‌. ವರ್ಣೇಕರ್‌, ಉಪಾಧ್ಯಕ್ಷರು, ಕ್ರೆಡಾಯ್‌, ದಾವಣಗೆರೆ

ಅಪಾರ್ಟ್‌ಮೆಂಟ್‌ಗೆ ಒಳ್ಳೆಯ ಬೇಡಿಕೆ ಇದೆ. ಆದರೆ ಇಲ್ಲಿ ಜಿ ಪ್ಲಸ್‌ ಟು ಗೆ ಮಾತ್ರ ಅವಕಾಶ ಇದೆ. ಮೋದಿ ಆಶಯದಂತೆ ಇಲ್ಲಿಯೂ ನಗರವನ್ನು ವಿಸ್ತಾರದ ಬದಲು ಎತ್ತರವಾಗಿ ಬೆಳೆಸಲು ಅವಕಾಶ ನೀಡಬೇಕು. ಅಲ್ಲದೇ ಕೊಳಚೆ ನೀರು ಪುನರ್‌ಬಳಕೆ ಮಾಡಬೇಕು ಎಂಬ ನಿಯಮ ಇದೆ. ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌ ಪ್ರಕಾರ 50 ಅಪಾರ್ಟ್‌ಮೆಂಟ್‌ಕ್ಕಿಂತ ಅಧಿಕ ಇದ್ದರೆ ಮಾಡಬೇಕು. ತೆಲಂಗಾಣದಲ್ಲಿ ಅದು 100 ಅಪಾರ್ಟ್‌ಮೆಂಟ್‌ ನಂತರ ಎಂದಿದೆ. ಆದರೆ ಕರ್ನಾಟಕದಲ್ಲಿ 20 ಅಪಾರ್ಟ್‌ಮೆಂಟ್‌ ಇದ್ದರೆ ಮಾಡಬೇಕು ಎಂದಿದೆ. ಅದನ್ನು 50 ಅಪಾರ್ಟ್‌ಮೆಂಟ್‌ಗೆ ಏರಿಸಬೇಕು.
-ಸುನಿಲ್‌ ಕುಮಾರ್‌ ಡಿ., ಪ್ರಧಾನ ಕಾರ್ಯದರ್ಶಿ, ಕ್ರೆಡಾಯ್‌, ದಾವಣಗೆರೆ

ಎಲ್ಲ ದಾಖಲೆಗಳು ಸರಿ ಇದ್ದಾಗ ಜೆ. ಸ್ಲಿಪ್‌ ನೀಡಲಾಗುತ್ತದೆ. ಅಲ್ಲಿಗೆ ಎಲ್ಲ ಮುಗಿದಿರುತ್ತದೆ. ಆದರೂ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಮತ್ತೊಮ್ಮೆ 21 ಫಾರ್ಮ್‌ ಬೇಕು ಎಂದು ಹೇಳುತ್ತಾರೆ. ಇದನ್ನು ಕೈಬಿಡಬೇಕು.
-ಬಿ.ಎಚ್‌. ಶ್ರೀಧರ್‌, ಖಜಾಂಚಿ, ಕ್ರೆಡಾಯ್‌, ದಾವಣಗೆರೆ

ಒಳಚರಂಡಿ ಅಭಿವೃದ್ಧಿ ಇಲಾಖೆ ವಿಭಾಗೀಯ ಕಚೇರಿ ದಾವಣಗೆರೆಯಲ್ಲಿ ಇಲ್ಲ. ಅದಕ್ಕಾಗಿ ಚಿತ್ರದುರ್ಗಕ್ಕೆ ಹೋಗಬೇಕು. ಈ ಕಚೇರಿಯನ್ನು ದಾವಣಗೆರೆಯಲ್ಲಿಯೇ ಆರಂಭಿಸಿ ಓಡಾಟ ತಪ್ಪಿಸಬೇಕು.
-ಕೆ. ಶ್ರೀನಾಥರೆಡ್ಡಿ, ಉಪಾಧ್ಯಕ್ಷರು, ಕ್ರೆಡಾಯ್‌, ದಾವಣಗೆರೆ

ದರ ನಿಗದಿ ಮಾಡಿ ಖರೀದಿ ಪ್ರಕ್ರಿಯೆಗಳೆಲ್ಲ ನಡೆದ ಬಳಿಕವೂ ಮತ್ತೆ ದರ ನಿಗದಿಗೆ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಕುಣಿಸುತ್ತಾರೆ. ಇದನ್ನು ನಿಲ್ಲಿಸಬೇಕು.
-ಬಾತಿ ಅಜಯ್‌, ಜಂಟಿ ಖಜಾಂಚಿ,ಕ್ರೆಡಾಯ್‌, ದಾವಣಗೆರೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರ ಯಾವುದೇ ತೊಂದರೆಗಳಿಲ್ಲದೇ ಫೈಲ್‌ಗಳು ಮೂವ್‌ ಆಗುತ್ತವೆ.
-ಕೆ. ಹರ್ಷ ರೆಡ್ಡಿ, ಯೂತ್‌ವಿಂಗ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT