ಮಂಗಳವಾರ, ನವೆಂಬರ್ 19, 2019
22 °C

ಬಿರುಗಾಳಿ ಮಳೆ: ಭತ್ತದ ಬೆಳೆ ಹಾನಿ

Published:
Updated:
Prajavani

ದಾವಣಗೆರೆ: ‘ಭತ್ತ ಕಾಳು ಕಟ್ಟಿದೆ. ಇನ್ನು 20 ದಿನಗಳು ಕಳೆದಿದ್ದರೆ ಫಸಲು ಕೊಯ್ಲಿಗೆ ಬರುತ್ತಿತ್ತು. ಆದರೆ ಬುಧವಾರ ಸುರಿದ ಬಿರುಗಾಳಿ ಮಳೆ ಎಲ್ಲವನ್ನೂ ಹಾಳು ಮಾಡಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಸಾಲ ಮಾಡಿ ಬೆಳೆ ಬೆಳೆದಿದ್ದೆ. ನಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಕಾಣದಾಗಿದೆ’ ಎಂದು ಅಳಲು ತೋಡಿಕೊಂಡರು ಆವರಗೊಳ್ಳದ ರೈತ ಬೆನ್ನೂರು ವೀರಭದ್ರಪ್ಪ.

ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚಾಪೆ ಹಾಸಿದ ಭತ್ತದ ಬೆಳೆಯನ್ನು ತೋರಿಸುತ್ತಾ ಅವರು ನೋವು ತೋಡಿಕೊಂಡರು. ‘ರೈತರ ಪಾಡು ಹೀಗೆಯೇ; ಮಳೆ ಇಲ್ಲದೆ ಬರ ಬಂದರೆ. ಫಸಲು ಕೊಯ್ಲಿಗೆ ಬರುವ ವೇಳೆಗೆ ಅಕಾಲಿಕ ಮಳೆ ಬಂದು ಎಲ್ಲವನ್ನೂ ಹಾಳು ಮಾಡುತ್ತದೆ’ ಎಂದು ದನಿಗೂಡಿಸಿದರು ರೈತ ಬೊಮ್ಮಯ್ಯ.

ತಾಲ್ಲೂಕಿನ ಆವರಗೊಳ್ಳ, ಕಡ್ಲೆಬಾಳು, ಬೂದಿಹಾಳು, ಬೂಸನಹಟ್ಟಿ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ.

ಮಳೆಯಿಂದ ಭತ್ತದ ಬೆಳೆ ಚಾಪೆ ಹಾಸಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆವರಗೊಳ್ಳ ಭಾಗವೊಂದರಲ್ಲೇ 40ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಬೂಸನಹಟ್ಟಿ ಭಾಗದಲ್ಲಿ 50ಕ್ಕೂ ಹೆಚ್ಚು ಎಕರೆ ಬೆಳೆಹಾನಿಯಾಗಿದೆ. ಕಡ್ಲೆಬಾಳು, ಚಿಕ್ಕಬೂದಿಹಾಳು ಸೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬೆಳೆಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

‘1 ಎಕರೆಗೆ 40 ಕ್ವಿಂಟಲ್‌ ಭತ್ತ ಬೆಳೆ ಬರುತ್ತಿತ್ತು. ಈಗ ಅಕಾಲಿಕ ಮಳೆಯಿಂದ ಎಲ್ಲ ಹಾನಿಯಾಗಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಭತ್ತ ಚಾಪೆ ಹಾಸಿರುವುದರಿಂದ ಏನು ಮಾಡಲೂ ಬರುವುದಿಲ್ಲ. 20 ದಿನ ತಡೆದಿದ್ದರೆ ಫಸಲು ಸಿಗುತ್ತಿತ್ತು’ ಎಂದು ಅಳಲು ತೋಡಿಕೊಂಡರು ರೈತ ಬೊಮ್ಮಯ್ಯ.

‘ಈಗ ಕೂಲಿಯೂ ಹೆಚ್ಚಾಗಿದೆ. ದಿನವೊಂದಕ್ಕೆ ₹ 500 ಕೂಲಿ ಕೊಡಬೇಕಾಗಿದೆ. ಭತ್ತ ಕೊಯ್ಯಲು ಯಂತ್ರಕ್ಕೆ ಗಂಟೆಗೆ ₹ 2,500 ಬಾಡಿಗೆ ಕೊಡಬೇಕು. ಒಂದು ಎಕರೆ ಭತ್ತ ಕಟಾವಿಗೆ ನಾಲ್ಕು ಗಂಟೆ ಬೇಕಾಗುತ್ತದೆ. ಎಕರೆಗೆ ಏನಿಲ್ಲವೆಂದರೂ ₹ 35 ಸಾವಿರ ಖರ್ಚಾಗುತ್ತದೆ’ ಎಂದು ವೀರಭದ್ರಪ್ಪ ಹೇಳಿದರು.

ಬೊಮ್ಮಯ್ಯ ಅವರ 6 ಎಕರೆ, ವೀರಭದ್ರಪ್ಪ ಅವರ 4 ಎಕರೆ, ದೊಡ್ಡಪ್ಪ ಎಂ. ಅವರ 6 ಎಕರೆ, ಪೀರ್‌ಸಾಬ್‌ ಅವರ 5 ಎಕರೆ, ಬಣಕಾರ ಶಿವಣ್ಣ ಅವರ 8 ಎಕರೆ ಬೆಳೆ ಹಾನಿಯಾಗಿದೆ.

‘ಬೂಸನಹಟ್ಟಿ ಗ್ರಾಮದಲ್ಲೂ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಕಾಳು ಕಟ್ಟಿದ್ದ ಭತ್ತ ಹಾಳಾಗಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಈಗ ಬೆಳೆಹಾನಿಯಾಗಿದೆ. ಸಂಬಂಧಪಟ್ಟವರು ಪರಿಹಾರ ನೀಡಬೇಕು‘ ಎಂದು ಬೂಸನಹಟ್ಟಿ ಗ್ರಾಮದ ರೈತ ರೇವಣಪ್ಪ ಒತ್ತಾಯಿಸಿದರು.

ಧಾರಾಕಾರವಾಗಿ ಸುರಿದ ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)