ಕೆಎಸ್ಆರ್‌ಟಿಸಿ ಬಸ್‌ಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮಲೇಬೆನ್ನೂರು: ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ದಲಿತ ಸಂರಕ್ಷಣಾ ವೇದಿಕೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಪಾಳೇಗಾರ್ ನೇತೃತ್ವದಲ್ಲಿ ಸಮರ್ಪಕ ಬಸ್ ಸೇವೆಗೆ ಆಗ್ರಹಿಸಿ ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
‘ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಬಸ್ ಬರದೇ ದಾವಣಗೆರೆ, ಹರಿಹರಕ್ಕೆ ತೆರಳುವ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಸಿಬ್ಬಂದಿ ಅಸಭ್ಯ ವರ್ತನೆ ತೋರಿ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.
‘ಬೆಳಗಿನ ವೇಳೆ ಬಸ್ ಸಮಸ್ಯೆ ಹೆಚ್ಚು. ಪ್ರತಿ ಸೋಮವಾರ ಶಾಲೆ–ಕಾಲೇಜಿಗೆ ಹೋಗುವುದು ದುಸ್ತರವಾಗಿದೆ. ಮೊದಲ ಅವಧಿ ತಪ್ಪುವುದು ಸಾಮಾನ್ಯ. ಪಟ್ಟಣದಲ್ಲಿ ರಾತ್ರಿ ತಂಗುವ ಬಸ್ ವ್ಯವಸ್ಥೆ ಮಾಡುವಂತೆ ಕೋರಿದ್ದರೂ ಪ್ರಯೋಜನವಾಗಿಲ್ಲ. ಶಿವಮೊಗ್ಗ ಹೊನ್ನಾಳಿಯಿಂದಲೇ ಭರ್ತಿಯಾಗಿ ಬರುತ್ತವೆ. ಕುಂಬಳೂರು, ನಂದಿತಾವರೆ ಗ್ರಾಮದ ವಿದ್ಯಾರ್ಥಿಗಳ ತೊಂದರೆ ಹೇಳ ತೀರದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವೇಗದೂತ ಬಸ್ ಹರಿಹರ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಸಂಚರಿಸುತ್ತಿದ್ದು, ಮಲೇಬೆನ್ನೂರಿಗೆ ಮಾತ್ರ ನಾಸ್ ಸ್ಟಾಪ್. ಹರಿಹರ, ಹೊನ್ನಾಳಿ, ಶಿವಮೊಗ್ಗದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಬಹುತೇಕ ಬಸ್ ಪ್ರಯಾಣಿಕರಿಲ್ಲದೇ ಸಂಚರಿಸಿ ಸಂಸ್ಥೆಗೆ ನಷ್ಟ ತರುತ್ತಿವೆ’ ಎಂದು ದೂರಿದರು.
‘ಒಂದು ವೇಳೆ ನಾನ್ ಸ್ಟಾಪ್ ಬಸ್ ನಿಲುಗಡೆ ಮಾಡದಿದ್ದರೆ ಬೇರೆ ಮಾರ್ಗದ, ಮೂಲಕ ತೆರಳಲಿ. ಅದೇ ರೀತಿ ಶಿವಮೊಗ್ಗ–ಪಣಜಿ, ಸೇಲಂ ಬಸ್ ನಿಲುಗಡೆ ಮಾಡಬೇಕು’ ಎಂದು ಕೋರಿದರು.
ನಾಗರಾಜ್, ಬಸವರಾಜ್, ಅಲ್ತಾಫ್, ಅಕ್ಬರ ಅಲಿ, ಸುಷ್ಮಾ, ಮುಸ್ಕಾನ್, ನಜ್ಮಾ, ಸಲ್ಮಾ ಉಪಸ್ಥಿತರಿದ್ದು ಸಮಸ್ಯೆ ಅನಾವರಣ ಮಾಡಿದರು.
ಹರಿಹರದಿಂದ ಡಿಪೊ ವ್ಯವಸ್ಥಾಪಕ ಸಂದೀಪ್, ಸಂಚಾರ ನಿಯಂತ್ರಕ ಸತೀಶ್, ನಿರಂಜನಮೂರ್ತಿ ಆಗಮಿಸಿ ಸಮಸ್ಯೆ ಆಲಿಸಿದರು. ಒಂದು ಹಂತದಲ್ಲಿ ವಿದ್ಯಾರ್ಥಿಗಳು ‘ಡಿಪೊ ವ್ಯವಸ್ಥಾಪಕರ ಮಾತಿನಲ್ಲಿ ಭರವಸೆ ಇಲ್ಲ, ಒಂದೆರಡು ದಿನ ಬಸ್ ಓಡಿಸಿ ನಿಲ್ಲಿಸುತ್ತಾರೆ’ ಎಂದು ಹೇಳಿ ಡಿಸಿ ಅವರನ್ನು ಕರೆಸಲು ಪಟ್ಟು ಹಿಡಿದರು.
ಪಿಎಸ್ಐ ರವಿಕುಮಾರ್ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳ ಮನವೊಲಿಸಿ ಧರಣಿ ನಿಲ್ಲಿಸಲು ಯಶಸ್ವಿಯಾದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬೇಗ ಪರಿಹರಿಸುವಂತೆ ಹರಿಹರ ಡಿಪೊ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು. ಸಮಸ್ಯೆ ಪರಿಹಾರ ಕಾಣದಿದ್ದಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಬಸ್ ತಡವಾಗಿ ಸಂಚರಿಸಿದವು. ಪ್ರಯಾಣಿಕರು ಹಿಡಿಶಾಪ ಹಾಕಿದರು.
‘ಸಂಜೆಯಾದೊಡನೆ ಢಾಬಾಗಳಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಬೆಳಗಿನ ವೇಳೆ ಮಾತ್ರ ಬಸ್ ನಿಲ್ದಾಣದ ಹೋಟೆಲ್‌ಗಳ ಮುಂದೆ ನಿಲುಗಡೆ ಮಾಡುತ್ತಾರೆ. ಎಲ್ಲ ಬಸ್ ನಿಲ್ದಾಣದ ಹೋಟೆಲ್‌ಗಳ ಮುಂದೆಯೇ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಲು, ಬಸ್ ವೇಳಾಪಟ್ಟಿ ಬರೆಸಲು’ ನಾಗರಿಕರು ಆಗ್ರಹಿಸಿದ ಘಟನೆ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.