ಗುರುವಾರ , ಅಕ್ಟೋಬರ್ 29, 2020
19 °C
ಪಾಪುಗುರು ಅವರ ‘ಸೂಜಿ’ ಕಾದಂಬರಿ ಬಿಡುಗಡೆ ಮಾಡಿದ ವೈ.ಎಸ್‌.ವಿ. ದತ್ತಾ

ಪ್ರತಿಭೆ ವಿವಿ ವಿದ್ವಾಂಸರಿಗೆ, ಜಾತಿಗೆ ಸೀಮಿತವಲ್ಲ: ವೈ.ಎಸ್‌.ವಿ. ದತ್ತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರತಿಭೆ, ಪಾಂಡಿತ್ಯ ಎನ್ನುವುದು ಯಾವುದೋ ಒಂದು ಜಾತಿಗೆ, ವಿಶ್ವವಿದ್ಯಾಲಯದ ವಿದ್ವಾಂಸರಿಗೆ ಸೀಮಿತವಲ್ಲ. ಜೀವನಾನುಭವದ ಮೂಸೆಯಲ್ಲಿ ಅರಳುವಂಥದ್ದು ಎಂದು ಜೆಡಿಎಸ್‌ ನಾಯಕ ವೈ.ಎಸ್‌.ವಿ. ದತ್ತಾ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಿ. ಶಿವಲಿಂಗಪ್ಪ ಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಪಾಪುಗುರು ಅವರ ‘ಸೂಜಿ’ ಕಾದಂಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅನಿವಾರ್ಯ ಸಂಕಟಗಳ ನಡುವೆ ಅನುಭವಕ್ಕೆ ಒಂದು ರೂಪ ನೀಡುವುದಕ್ಕೆ ತಾನು ಮತ್ತು ಸಮಾಜ ಬೆಳೆಯಬೇಕು ಎಂದು ಬಯುಸುವುದಕ್ಕೆ ಸಾಟಿಯಾದುದು ಬೇರೊಂದಿಲ್ಲ. ರಾಜಕಾರಣಿಗಳು, ಪ್ರಾಧ್ಯಾಪಕರು ಏಕತಾನತೆಗೆ ಒಳಗಾಗಿದ್ದಾರೆ. ಒಂದು ಚೌಕಟ್ಟಿನ ಒಳಗೆ ಸ್ವಾರಸ್ಯವಿಲ್ಲದೇ ನೀರಸವಾಗಿ ಯಾಂತ್ರಿಕವಾಗಿ ಬದುಕುತ್ತಿದ್ದಾರೆ. ಪಾಪುಗುರು ಅವರು ಈ ಯಾವ ಬಂಧನವೂ ಇಲ್ಲದೇ ಮುಕ್ತ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾರೆ ಎಂದರು.

ಕಾಮ, ಪ್ರೇಮವೇ ಈ ಕಾದಂಬರಿಯ ವಸ್ತು. ಕಾಮ, ಪ್ರೇಮಗಳು ಯಾವತ್ತೂ ಒಂದಷ್ಟು ಮುಕ್ತವೂ, ಒಂದಷ್ಟುಯ ಗುಪ್ತವೂ ಆಗಿರುತ್ತದೆ. ಅದನ್ನು ಬರಹಗಾರ ಸಮನ್ವಯ ಮಾಡಬೇಕಾಗುತ್ತದೆ ಎಂದು ಹೇಳಿದರು.

‘ಕನ್ನಡಕ್ಕಾಗಿ ರಕ್ತವನ್ನು ಕೊಟ್ಟೇವು ಎಂದು ಹೇಳುವ ಕನ್ನಡ ಪ್ರೇಮಿಗಳನ್ನು ಎಲ್ಲ ಕಡೆ ಕಾಣುತ್ತೇವೆ. ರಕ್ತ ಅಮೂಲ್ಯವಾದುದು. ಹಾಗೆಲ್ಲ ಕೊಡಬೇಡಿ. ಕನ್ನಡ ಪ್ರೇಮ ಇದ್ದರೆ ಕನ್ನಡ ಪುಸ್ತಕಗಳನ್ನು ತೆಗೆದುಕೊಂಡು ಓದಿ’ ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ, ‘ಸಾಹಿತ್ಯ ರಚನೆ ಕಲಿಸಿ ಬರುವಂಥದ್ದಲ್ಲ. ಅಂತರಂಗದ ತುಡಿತ, ಅನುಭವ, ಅನುಭಾವ, ಸೃಜನಶೀಲತೆಯಿಂದ ಬರುತ್ತದೆ. ಅಹಂಕಾರ, ಪೂರ್ವಗ್ರಹ ಇರುವ ಸಾಹಿತ್ಯ ಎಲ್ಲರನ್ನು ತಲುಪಲಾರದು. ಜಾತಿ, ಧರ್ಮ ಸಹಿತ ಎಲ್ಲ ಮಾನಸಿಕ ಗೋಡೆಗಳನ್ನು ಒಡೆಯುವ ಕೆಲಸ ಬರಹಗಾರರಿಂದ ಆಗಬೇಕು’ ಎಂದು ತಿಳಿಸಿದರು.

ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ ಕೃತಿ ಬಗ್ಗೆ ಮಾತನಾಡಿ, ‘ಹಸಿವು, ಸಂಕಟ, ಅಪಮಾನಗಳು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯಗಳೂ ಕಲಿಸಲಾರವು. ಕಾವ್ಯದ ಛಾಪು ಇರುವ ಈ ಕಾದಂಬರಿ ಪ್ರಗತಿಶೀಲ ಕಾಲದ ಕಾದಂಬರಿಗಳನ್ನು ನೆನಪಿಸುತ್ತದೆ. ಕಾದಂಬರಿಯ ಮುಖ್ಯ ಪಾತ್ರವೇ ಹೆಣ್ಣು. ಹೆಣ್ಣಿನ ಸ್ಥಿತಿ ಈಗಲೂ ಹೇಗಿದೆ ಎಂಬುದನ್ನು ಈ ಕಾದಂಬರಿ ಬಿಂಬಿಸುತ್ತದೆ’ ಎಂದರು.

ಕಾಮವು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಅದೊಂದು ಮನೋಸ್ಥಿತಿ ಎಂಬುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ ಎಂದು ಹೇಳಿದರು.

ರೈತಮುಖಂಡ ತೇಜಸ್ವಿಪಟೇಲ್‌ ಮಾತನಾಡಿ, ‘ಬರಹಗಳು ಓದುಗನನ್ನು ಇನ್ನಷ್ಟು ಬಂಧನಕ್ಕೆ ಒಳಗು ಮಾಡಬಾರದು. ಮುಕ್ತನನ್ನಾಗಿ ಮಾಡಬೇಕು. ಪ್ರವಾಹದ ವಿರುದ್ಧ ಈಜುವವರೇ ನೈಜ ಬರಹಗಾರರಾಗುತ್ತಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ‘ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರಿಂದ ಬಿಡುಗಡೆಗೊಳ್ಳುವ ಮೊದಲೇ ಎರಡನೇ ಮುದ್ರಣವನ್ನು ಈ ಕಾದಂಬರಿ ಕಾಣುತ್ತಿದೆ. ಹಸಿವು ಮತ್ತು ಅಸಹಾಯಕತೆ ಕಾದಂಬರಿಯ ಸ್ಥಾಯಿ ಭಾವ. ದೇಹದ ವಾಂಛೆ ಮತ್ತು ಕಾಮದ ಕನವರಿಕೆ ಸಂಚಾರಿ ಭಾವ’ ಎಂದು ವಿಶ್ಲೇಷಿಸಿದರು.

ಗಂಗಾಧರ ಬಿ. ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು. ಸಂಗೀತ ರಾಘವೇಂದ್ರ ಗೀತೆ ಹಾಡಿದರು. ದಾಗಿನಕಟ್ಟೆ ಪರಮೇಶ್ವರಪ್ಪ ಸ್ವಾಗತಿಸಿದರು. ಎ. ಫಕೃದ್ದೀನ್‌ ವಂದಿಸಿದರು.

ದತ್ತ ಹೇಳಿದ ಕನ್ನಡ ಪ್ರೇಮದ ಕಥೆ

‘40 ವರ್ಷಗಳ ಹಿಂದೆ ಒಬ್ಬರು ಕುವೆಂಪು ಅವರ ಎಲ್ಲ ಕೃತಿಗಳ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಸೂಕ್ತಿ ತರಹದ 500 ಪುಟದ ಕೃತಿ ಸಂಪಾದಿಸಿದ್ದರು. ಅದನ್ನು ಪರಿಷತ್ತು, ಅಕಾಡೆಮಿ, ವಿಶ್ವವಿದ್ಯಾಲಯಗಳು ಯಾರೂ ಪ್ರಕಟಿಸಲು ಒಪ್ಪಿರಲಿಲ್ಲ. ಆಗ ಬೇಸತ್ತ ಆ ಬರಹಗಾರ ಇಂಥ ದಿನ ಸಂಜೆ 4ಕ್ಕೆ ಸುಟ್ಟು ಹಾಕಲಾಗುವುದು ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು. ಸುಟ್ಟು ಹಾಕುವುದನ್ನು ನೋಡುವುದಕ್ಕಾಗಿ ತರುಣನಾಗಿದ್ದ ನಾನು ಹೋಗಿದ್ದೆ. ಅಲ್ಲಿ ನೋಡಿದರೆ ಸಾಹಿತ್ಯವಲಯದ ಘಟಾನುಘಟಿಗಳು ಹಸ್ತಪ್ರತಿಯನ್ನು ಸುಡುವುದನ್ನು ನೋಡಲು ನೆರೆದಿದ್ದರು. ನನ್ನನ್ನು ನೋಡಿದ ಬರಗೂರು ಅವರು ದತ್ತ ನೀನೇ ಅದನ್ನು ಪ್ರಕಟಿಸು. ಸುಮ್ಮನೆ ಸುಟ್ಟು ಹಾಕುವುದು ಬೇಡ ಅಂದರು. ಅವರ ಮಾತಿನಂತೆ 50 ಪೈಸೆ, ಒಂದು ರೂಪಾಯಿ ಎಲ್ಲ ಚಂದಾ ಎತ್ತಿ ಸ್ವಲ್ಪ ದುಡ್ಡು ಸಂಗ್ರಹಿಸಿ ಪ್ರಕಟಿಸಿದೆ. ಸಾವಿರಾರು ಸಾಹಿತಗಳು ನೆರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಈ ಕೃತಿಯನ್ನು ಬಿಡುಗಡೆ ಮಾಡಿದ್ದರು. ಗೋರೂರು ಅಧ್ಯಕ್ಷತೆ ವಹಿಸಿದ್ದರು. ಬರಗೂರು ಪ್ರಾಸ್ತಾವಿಕವಾಗಿ ಮಾತನಾಡಿದ್ದರು’ ಎಂದು ಹಳೇ ಘಟನೆಯನ್ನು ದತ್ತ ನೆನಪಿಸಿಕೊಂಡರು.

‘₹ 45 ಮುಖಪುಟ ಬೆಲೆಯ ಈ ಕೃತಿಯನ್ನು ಇಂದು ₹ 25ಕ್ಕೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದು ಎಲ್ಲರು ಹೋದ ಮೇಲೆ ನೋಡಿದರೆ ಎರಡೇ ಪುಸ್ತಕಗಳು ಮಾರಾಟವಾಗಿದ್ದವು. ಎಲ್ಲವೂ ನನ್ನ ಬಾಡಿಗೆ ಮನೆಯಲ್ಲಿ ಇದ್ದವು. ಸಾಲಗಾರರ ಕಾಟ ಆರಂಭಗೊಂಡಿತು. ಇದೇ ಸಮಯದಲ್ಲಿ ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಅದನ್ನೇ ನೆಪವಾಗಿ ಇಟ್ಟುಕೊಂಡು ನಾನು ಮತ್ತು ನಮ್ಮ ಹುಡುಗರು ಬಸ್‌ನಿಲ್ದಾಣಗಳಿಗೆ ಹೋಗಿ ಕುವೆಂಪು ಅವರಿಗೆ ಅಕಾಡೆಮಿ ಪ್ರಶಸ್ತಿ ಬಂದಿರುವ ಕಾರಣ ₹ 45 ಬೆಲೆ ಪುಸ್ತಕ ₹ 5ಕ್ಕೆ ಲಭ್ಯ ಎಂದು ಕೂಗುತ್ತಾ ಮಾರಾಟ ಮಾಡಿದೆವು. ಇಂಥ ಸ್ಥಿತಿ ಕನ್ನಡಕ್ಕೆ ಬರಬಾರದು’ ಎಂದರು.

ಪಾಪುಗುರು ಯಾರು?:

ದಿವಂಗತ ಎಚ್‌.ಕೆ. ಶಿವಲಿಂಗಪ್ಪ–ಸಮ್ಮ ದಂಪತಿಯ ಮಗ ಗುರು ಬಸವರಾಜ್‌ ಅವರು ‘ಪಾಪುಗುರು’ ಎಂಬುದನ್ನು ತನ್ನ ಕಾವ್ಯನಾಮವಾಗಿ ಇಟ್ಟುಕೊಂಡಿದ್ದಾರೆ. ಐಟಿಐ ಓದಿದ ಬಳಿಕ ಕಾರ್ಪೆಂಟರ್‌ ಆಗಿ ಹೆಸರು ಗಳಿಸಿದ್ದಾರೆ. ಜತೆಗೆ ಎಲೆಕ್ಸ್ಟ್ರೀಶಿಯನ್‌, ತರಗಾರ ಕೆಲಸ, ಮಿಕ್ಸಿ ರಿಪೇರಿ ಹೀಗೆ ನಾನಾ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ‘ಪ್ರಜಾವಾಣಿ’ ಸಹಿತ ಪತ್ರಿಕೆಗಳನ್ನು ಹಂಚುವ ಕೆಲಸ ಮಾಡುತ್ತಾರೆ. ‘ಮುಳ್ಳೆಲೆಯ ಮದ್ದು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು