ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ ಐದು ವರ್ಷಗಳಿಂದ ಶೇ 100 ಫಲಿತಾಂಶದ ಗುರಿ ಸಾಧಿಸಿಕೊಂಡು ಬಂದ ಹಿರಿಮೆ ತಾಲ್ಲೂಕಿನ ಹಾಲುವರ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯದ್ದು. ಇದಕ್ಕೆ ಮುಖ್ಯ ಕಾರಣ ಶಿಕ್ಷಕರ ಸಾಮೂಹಿಕ ಪ್ರಯತ್ನ.
ಹಾಲುವರ್ತಿ ಸೇರಿ ಕೆಂಚಮ್ಮನಹಳ್ಳಿ, ಹೊಸಹಳ್ಳಿ ತಾಂಡಾ, ಹೆಬ್ಬಾಳು ಬಡಾವಣೆಯಿಂದ ಮಕ್ಕಳು ಶಾಲೆಗೆ ಬರುತ್ತಾರೆ. 2019–20ರಲ್ಲಿ 23, 2020–21ರಲ್ಲಿ 18, 2021–22ರಲ್ಲಿ 31, 2022–23ರಲ್ಲಿ 27 ಹಾಗೂ 2023–24ರಲ್ಲಿ 27 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಕಲಿತಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ನೂರರ ಗುರಿ ಸಾಧನೆಗಾಗಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ.
ವಿದ್ಯಾರ್ಥಿಗಳು 8ನೇ ತರಗತಿ ಓದುತ್ತಿರುವಾಗಿನಿಂದಲೇ ಅವರ ಮೇಲೆ ಶಿಕ್ಷಕರು ವಿಶೇಷ ಗಮನ ಹರಿಸುತ್ತಾರೆ. ಇದುವೇ ‘ಶತಕ’ದ ಸಾಧನೆಯ ಗುಟ್ಟು. ವಿದ್ಯಾರ್ಥಿ ಶಾಲೆಗೆ ಗೈರಾದರೆ ಕೂಡಲೇ ಶಿಕ್ಷಕರು ಮನೆಗೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿ ಹಾಗೂ ಪಾಲಕರ ಮನವೊಲಿಸಿ ಶಾಲೆಗೆ ಕರೆ ತರುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ ನಡೆಸಿ ಪರೀಕ್ಷೆಗೆ ಸಜ್ಜುಗೊಳಿಸುತ್ತಾರೆ.
‘ವಿವಿಧ ವಿಷಯಗಳ ಶಿಕ್ಷಕರು ತಲಾ ನಾಲ್ಕು ವಿದ್ಯಾರ್ಥಿಗಳನ್ನು ದತ್ತು ಪಡೆದು ಮುಂಜಾನೆ ಅವರು ಏಳುವುದರಿಂದ ರಾತ್ರಿ ಮಲಗುವವರೆಗಿನ ಚಟುವಟಿಕೆ ಬಗ್ಗೆ ನಿಗಾ ವಹಿಸಿದೆವು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ, ವಿಷಯಗಳನ್ನು ಮನದಟ್ಟು ಮಾಡಲು ಘಟಕ ಪರೀಕ್ಷೆ ಜೊತೆಗೆ ರಸಪ್ರಶ್ನೆ, ಪ್ರಬಂಧ, ಕಂಠಪಾಠ, ಆಶುಭಾಷಣ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಿದ್ದೆವು. ಹೆಚ್ಚು ಅಂಕ ಗಳಿಸುವವರಿಗೆ ಸ್ಕೋರಿಂಗ್ ಪ್ಯಾಕೇಜ್, ಕಲಿಕೆಯಲ್ಲಿ ಹಿಂದುಳಿದವರಿಗೆ ಪಾಸಿಂಗ್ ಪ್ಯಾಕೇಜ್ ಅಡಿ ಪ್ರಶ್ನೆ–ಉತ್ತರಗಳನ್ನು ಬರೆಯಿಸಿ ಪರೀಕ್ಷೆಗೆ ಸಜ್ಜುಗೊಳಿಸಿದ್ದೆವು’ ಎಂದು ಕನ್ನಡ ಶಿಕ್ಷಕ ಬಿ.ಎಸ್.ಈಶ್ವರಪ್ಪ ತಿಳಿಸಿದರು.
‘ಇಂಗ್ಲಿಷ್ ವ್ಯಾಕರಣವನ್ನು 9ನೇ ತರಗತಿಯಲ್ಲಿರುವಾಗಲೇ ಸಂಪೂರ್ಣ ಮನದಟ್ಟು ಮಾಡಿಸುತ್ತೇವೆ. ಶಾಲೆಯಲ್ಲಿ ಗುಣಾತ್ಮಕ ಕಲಿಕೆಗೆ ಒತ್ತು ನೀಡಿರುವ ಕಾರಣ ಪ್ರತಿವರ್ಷ 2–3 ವಿದ್ಯಾರ್ಥಿಗಳು ಸರ್ಕಾರದಿಂದ ನೀಡುವ ಲ್ಯಾಪ್‌ಟಾಪ್ ಪಡೆದುಕೊಂಡಿದ್ದಾರೆ’ ಎಂದು ಇಂಗ್ಲಿಷ್ ಶಿಕ್ಷಕ ಎಸ್.ದ್ವಾರಕೀಶ ನಾಯ್ಕ ಹೆಮ್ಮೆ ವ್ಯಕ್ತಪಡಿಸಿದರು.
‘ದಿನಕ್ಕೊಂದು ಮಗ್ಗಿ, ದಿನಕ್ಕೊಂದು ಪ್ರಶ್ನೆ, ದಿನಕ್ಕೊಂದು ಸೂತ್ರವನ್ನು ಪ್ರತಿದಿನ ಐದು ವಿದ್ಯಾರ್ಥಿಗಳಿಗೆ ಕೇಳುತ್ತಿದ್ದೆವು. ರಂಗೋಲಿ ಸ್ಪರ್ಧೆ ಮೂಲಕವೂ ಗಣಿತವನ್ನು ಸುಲಭವಾಗಿ ಕಲಿಸಿದ್ದೆವು’ ಎಂದು ಗಣಿತ ಶಿಕ್ಷಕಿ ಮಮತಾ ಎಸ್.ಆರ್. ತಿಳಿಸಿದರು.
ಶಾಲೆಯಲ್ಲಿ ಓದಿದ ಕೆಲವರು ನೀಟ್ ಸಿಇಟಿಯಲ್ಲಿ ಉತ್ತೀರ್ಣರಾಗಿ ಎಂಬಿಬಿಎಸ್ ಕೃಷಿ ವಿಜ್ಞಾನ ಇತ್ಯಾದಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸ ತಂದಿದೆ. ಪ್ರಸಕ್ತ ವರ್ಷ 26 ವಿದ್ಯಾರ್ಥಿಗಳು ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು ಈ ವರ್ಷವೂ ಶೇ 100 ಫಲಿತಾಂಶ ಪಡೆಯುವ ವಿಶ್ವಾಸವಿದೆ.ಎಸ್.ಶೋಭಾ, ಮುಖ್ಯಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ ಹಾಲುವರ್ತಿ
‘ದಿನಕ್ಕೊಂದು ನಕಾಶೆ, ಸ್ಥಳ ಗುರುತಿಸುವುದು, ಪ್ರಶ್ನೆಗೆ ಉತ್ತರ ಹೇಳಿಸಿದ್ದೆವು. ಕಲಿಯಲು ಕಷ್ಟಪಡುವ ವಿದ್ಯಾರ್ಥಿಯ ಪಾಲಕರೊಂದಿಗೆ ಸಭೆ ನಡೆಸಿ, ಪರಿಹಾರ ಕ್ರಮಗಳನ್ನು ಅನುಸರಿಸಿದ್ದೆವು’ ಎಂದು ಸಮಾಜ ವಿಜ್ಞಾನ ಶಿಕ್ಷಕ ಸಿ.ಮಹಾಂತೇಶ್ ವಿವರಿಸಿದರು.
ಸುಲಭದಿಂದ ಕ್ಲಿಷ್ಟತೆಯೆಡೆಗೆ ನಿಯಮದಂತೆ ಹಿಂದಿ ವಿಷಯವನ್ನು ವರ್ಣಮಾಲೆ, ಕಾಗುಣಿತದಿಂದ ಆರಂಭಿಸಿ, ಪಾಠಗಳನ್ನು ಪಟ ಪಟನೇ ಓದುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ಹಿಂದಿ ಶಿಕ್ಷಕಿ ಜಿ.ಪೂರ್ಣಿಮಾ, ಪ್ರಯೋಗಗಳ ಮೂಲಕ ವಿಜ್ಞಾನವನ್ನು ಸರಳವಾಗಿ ಅರ್ಥೈಸುತ್ತಿರುವ ವಿಜ್ಞಾನ ಶಿಕ್ಷಕ ಕುಮಾರ್ ಟಿ. ನಾಯ್ಕ ಮತ್ತು ವಿದ್ಯಾರ್ಥಿಗಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕ್ರಿಯಾಶೀಲಗೊಳಿಸುವ ದೈಹಿಕ ಶಿಕ್ಷಣ ಶಿಕ್ಷಕ ಬಿ.ಜಗದೀಶ್ ಹೀಗೆ ಎಲ್ಲರ ಅವಿರತ ಶ್ರಮ ಉಳಿದವರಿಗೆ ಮಾದರಿಯಾಗಿದೆ.
ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ತಂಡ
ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕಿಯರು
ತ್ಯಾಜ್ಯ ಸುರಿಯುತ್ತಿದ್ದ ಹರಿಹರ ತಾಲ್ಲೂಕಿನ ಅಮರಾವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ರೂಪ ನೀಡಿದವರು ಅಲ್ಲಿನ ಮುಖ್ಯಶಿಕ್ಷಕಿ ಎಸ್.ಗಿರಿಜಾಂಬಾ. ಇವರ ಸೇವೆಗೆ ಶಾಲೆಯ ಇನ್ನೊಬ್ಬ ಶಿಕ್ಷಕಿ ನಸೀಮುನ್ನೀಸಾ ಅವರೂ ಅಳಿಲು ಸೇವೆ ನೀಡಿದ್ದಾರೆ.
ಗಿರಿಜಾಂಬಾ ಅವರು ಶಾಲೆಗೆ ವರ್ಗಾವಣೆಯಾಗಿ ಬಂದಾಗ ಶಾಲೆಯ ದುಃಸ್ಥಿತಿ ಕಂಡು ಏನಾದರೂ ಮಾಡಲೇಬೇಕೆಂದು ಗ್ರಾಮದಲ್ಲಿನ ಶ್ರೀಮಂತರ ಬಳಿ ನೆರವು ಕೇಳಿದ್ದರು. ಇದಕ್ಕೆ ಯಾರೂ ಕಿವಿಗೊಡಲಿಲ್ಲ. ಇದರಿಂದ ವಿಚಲಿತರಾಗದೆ ತಮ್ಮ ಕೈಯಿಂದಲೇ ಹಣ ಹಾಕಿ ಶಾಲಾ ಕಟ್ಟಡಗಳ ದುರಸ್ತಿ ಮಾಡಿಸಿ ಸುಣ್ಣ–ಬಣ್ಣ ಬಳಿಸಿದರು. ಶಾಲಾ ಕಾಂಪೌಂಡ್ ಗೇಟ್ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಿದರು. ಇದಕ್ಕಾಗಿ ವ್ಯಯಿಸಿದ ಹಣದ ಲೆಕ್ಕವನ್ನು ಇಂದಿಗೂ ಇಟ್ಟಿಲ್ಲ.
ಶಿಕ್ಷಕಿ ನಸೀಮುನ್ನೀಸಾ ಅವರು 20 ಲೀ ಬಣ್ಣ ಕೊಡಿಸುವ ಮೂಲಕ ಶಾಲಾಭಿವೃದ್ಧಿಗೆ ಎಸ್.ಗಿರಿಜಾಂಬಾ ಅವರೊಂದಿಗೆ ಕೈಜೋಡಿಸಿದ್ದಾರೆ.
‘ಪುಸ್ತಕ ಓದುವ ಹವ್ಯಾಸದಿಂದ ನನ್ನಲ್ಲಿ ಸಹಾಯ ಮನೋಭಾವ ಗಟ್ಟಿಗೊಂಡಿತು. ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾದ ಮೀರಾಬಾಯಿ ಮತ್ತು ವೆಂಕಟೇಶ್ ಅವರಿಂದ ದಾನ–ಧರ್ಮದ ಗುಣಗಳನ್ನು ಕಲಿತೆ. ಶಾಲಾ ವಿದ್ಯಾರ್ಥಿಗಳಿಂದ ನಾವು ಒಂದು ತುತ್ತು ಉಣ್ಣುತ್ತಿದ್ದು ಪ್ರತಿಯಾಗಿ ಏನಾದರೂ ಮಾಡುವುದು ನಮ್ಮ ಧರ್ಮ’ ಎಂದು ಶಿಕ್ಷಕಿ ಗಿರಿಜಾಂಬಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.