ಸೋಮವಾರ, ಡಿಸೆಂಬರ್ 6, 2021
25 °C
ಹೊನ್ನಾಳಿಯಲ್ಲಿ ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್ ಆರೋಪ

ಬಿಜೆಪಿ ನೇತೃತ್ವದ ಸರ್ಕಾರ ₹ 4.50 ಕೋಟಿ ಬಿಡುಗಡೆ ಮಾಡಿಲ್ಲ: ಪ್ರಸನ್ನಕುಮಾರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: 6 ವರ್ಷದ ಅವಧಿಯಲ್ಲಿ ನಮಗೆ ₹ 12 ಕೋಟಿ ಅನುದಾನ ಬರುತ್ತದೆ. ಸಿದ್ಧರಾಮಯ್ಯ ಸರ್ಕಾರ ಇದ್ದಾಗ ನನಗೆ ಅನುದಾನ ಸರಾಗವಾಗಿ ಬಂತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ನನಗೆ ಕೊಡಬೇಕಿದ್ದ ₹ 4.50 ಕೋಟಿ ಅನುದಾನವನ್ನು ಕೊಡಲಿಲ್ಲ ಎಂದು ಶಿವಮೊಗ್ಗ ವಿಧಾನಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಹಾಲಿ ಸದಸ್ಯ ಆರ್. ಪ್ರಸನ್ನಕುಮಾರ್ ಆರೋಪಿಸಿದರು.

ಮಂಗಳವಾರ ಹೊನ್ನಾಳಿ ಸರ್ಕಾರಿ ನೌಕರರ ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಅವಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಆದರೂ ನನಗೆ ಬಿಡುಗಡೆಯಾದ ಅನುದಾನದ ಪೈಕಿ ಶೇ 24ರಷ್ಟು ಹೊನ್ನಾಳಿ ಮತ್ತು ನ್ಯಾಮತಿ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದೇನೆ’ ಎಂದು ತಿಳಿಸಿದರು.

‘ಒಬ್ಬ ವಿಧಾನಪರಿಷತ್ ಸದಸ್ಯರಿಗೆ 10 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 375 ಗ್ರಾಮ ಪಂಚಾಯಿತಿಗಳು, ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳು ಸೇರಿ ಒಟ್ಟು 395 ಸ್ಥಳೀಯ ಸಂಸ್ಥೆಗಳು ಇವೆ. 4165 ಮತದಾರರು ಇದ್ದು, ಈ ಪೈಕಿ 3900 ಗ್ರಾ.ಪಂ. ಸದಸ್ಯರು ಬರುತ್ತಾರೆ, ತನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ’ ಎಂದು ಕೋರಿದರು.

ಸಿದ್ದರಾಮಯ್ಯ ಸರ್ಕಾರವಿದ್ದಾಗ 10 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟರು. ಈ ಸರ್ಕಾರ ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ. ಕೇವಲ ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ ಬಿಜೆಪಿಯದ್ದಾಗಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ‘ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರವನ್ನೇ ನೀಡಿಲ್ಲ. ಈಗ ಮತ್ತೇ ವಿಕೋಪದಡಿ ಸಾಕಷ್ಟು ಹಾನಿಯಾಗಿದೆ. ಇವುಗಳಿಗೆ ಪರಿಹಾರ ಸಿಗುವುದು ಕನಸಿನ ಮಾತು’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ‘ಪ್ರಸನ್ನಕುಮಾರ್ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ಹಾಗೂ ಬಸವಾಪಟ್ಟಣ ಹೋಬಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ’ ಎಂದರು.

ಮುಖಂಡ ಬಿ. ಸಿದ್ದಪ್ಪ, ‘ಪ್ರಸನ್ನಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಸೂಡಾ ಅಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನುಭವ ಸಾಕಷ್ಟಿದೆ. ಆದರೆ ಯಾವುದೇ ಅನುಭವ ಇಲ್ಲದ ಬಿಜೆಪಿ ಅಭ್ಯರ್ಥಿ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ನಮ್ಮ ಕ್ಷೇತ್ರದ ಪರಿಚಯವೇ ಇಲ್ಲ’ ಎಂದು ಹೇಳಿದರು.

ಗೋವಿನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನಟರಾಜ್, ಬೆನಕನಹಳ್ಳಿ ಗ್ರಾಮಪಂ. ಉಪಾಧ್ಯಕ್ಷೆ ಪುಷ್ಪಾಬಾಯಿ ಹಾಗೂ ಸೊರಟೂರು ಗ್ರಾಮ ಪಂಚಾಯಿತಿ ಸದಸ್ಯ ಸುಮಾ, ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ್, ಡಾ. ಈಶ್ವರನಾಯ್ಕ, ಸುಲೇಮಾನ್ ಖಾನ್ ಅವರು ಮಾತನಾಡಿದರು.

ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಗೀಶ್, ಮುಖಂಡರಾದ ಆರ್. ನಾಗಪ್ಪ, ಎಂ. ರಮೇಶ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.