ಭಾನುವಾರ, ಆಗಸ್ಟ್ 1, 2021
22 °C
ಪರೀಕ್ಷಾ ಯುದ್ದ ಗೆದ್ದ ವಿದ್ಯಾರ್ಥಿಗಳಲ್ಲಿ ನಿರುಮ್ಮಳ ಭಾವ

ನಿರಾತಂಕವಾಗಿ ಮುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತೃತೀಯ ಭಾಷೆ ಹಿಂದಿ ವಿಷಯ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಎಲ್ಲರಿಗೂ ಯುದ್ಧ ಗೆದ್ದ ಭಾವ ಮೂಡಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆಯ ದಿನವಾದ ಶುಕ್ರವಾರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಿರುಮ್ಮಳರಾದರು.

ಕೋವಿಡ್‌–19 ಆತಂಕದ ನಡುವೆಯೂ ಜಿಲ್ಲೆಯಲ್ಲಿ ಪರೀಕ್ಷೆ ಯಶಸ್ವಿಯಾಗಿ ಜರುಗಿತು. ಮಧ್ಯಾಹ್ನ 1.30ಕ್ಕೆ ಬೆಲ್ ಹೊಡೆಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಬಂದರು. ಪರೀಕ್ಷಾ ಕೇಂದ್ರದ ಒಳಗಡೆ ಒಬ್ಬೊಬ್ಬರೇ ಸಾಗುತ್ತಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಗಿದಾಗ ಕೊಂಚ ಅಂತರ ಮರೆತಂತೆ ಕಂಡಿತು.

ಮಕ್ಕಳನ್ನು ಬಿಡಲು ಬಂದಿದ್ದ ಪೋಷಕರ ಮುಖದಲ್ಲೂ ಮಂದಹಾಸ ಅರಳಿತ್ತು. ಪರೀಕ್ಷೆ ಮುಗಿಯುವ ಕ್ಷಣಕ್ಕಾಗಿ ಕೇಂದ್ರದ ಹೊರಗೆ ಕಾಯುತ್ತ ಕುಳಿತಿದ್ದರು. ನಂತರ ಹೊರಗೆ ಬಂದ ಮಕ್ಕಳನ್ನು ಕರೆದುಕೊಂಡು ಮನೆಗೆ ತೆರಳಿದರು.

‘ಆರಂಭದಲ್ಲಿ ಪರೀಕ್ಷೆ ದಿನಾಂಕ ಘೋಷಿಸಿದಾಗ ಆತಂಕವಾಗಿತ್ತು. ಆದರೆ ಸುಸೂತ್ರವಾಗಿ ಆಯಿತು. ಚೆನ್ನಾಗಿ ಬರೆದಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ವಿದ್ಯಾರ್ಥಿನಿಯರಾದ ಸಾನಿಯಾ, ಶಿರೀಶಾ ಹಾಗೂ ಸಂಜನಾ ಅಭಿಪ್ರಾಯ ವ್ಯಕ್ತಪಡಿಸಿದರು.

‘ಪರೀಕ್ಷಾ ಕೇಂದ್ರದಲ್ಲಿ ತುಂಬ ಕಟ್ಟುನಿಟ್ಟಾಗಿ ನಡೆಯಿತು. ಕೊರೊನಾ ಹರಡುತ್ತಿದ್ದ ರೀತಿ ನೋಡಿದರೆ ಪರೀಕ್ಷೆ ಬೇಡವಾಗಿತ್ತು ಅನಿಸುತ್ತಿತ್ತು. ಆದರೆ ಒಳಗೆ ಹೋಗುವಾಗ ಹಾಗೂ ಹೊರಗಡೆ ಬರುವಾಗ ಅಂತರ ಕಾಯ್ದುಕೊಂಡೆವು. ಆದರೆ ಮೂರುವರೆ ಗಂಟೆ ಮಾಸ್ಕ್ ಧರಿಸಿಕೊಂಡು ಪರೀಕ್ಷೆ ಬರೆಯುವುದು ಕಷ್ಟವಾಯಿತು’ ಎಂದು ವಿದ್ಯಾರ್ಥಿ ಮಾಲತೇಶ್ ಹೇಳಿದ.

1118 ವಿದ್ಯಾರ್ಥಿಗಳು ಗೈರು: ಶುಕ್ರವಾರ ನಡೆದ ತೃತಿಯ ಭಾಷೆ ಹಿಂದಿ ಪರೀಕ್ಷೆಯಲ್ಲಿ  21,548 ವಿದ್ಯಾರ್ಥಿಗಳ ಪೈಕಿ 20,430 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 1,118 ವಿದ್ಯಾರ್ಥಿಗಳು ಗೈರಾಗಿದ್ದರು.

ಇಂಗ್ಲಿಷ್‌, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಪ್ರಶ್ನೆ ಪತ್ರಿಕೆಗಳ ನಂತರ ನಡೆದ ಆರನೇ ಪ್ರಶ್ನೆ ಪತ್ರಿಕೆ ಹಿಂದಿ ಪತ್ರಿಕೆಯ ಪರೀಕ್ಷೆ ಶುಕ್ರವಾರ ಜಿಲ್ಲೆಯ 93 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ರಚಿಸಿರುವ ಕಂಟೈನ್‌ಮೆಂಟ್‌ ಪ್ರದೇಶಗಳ 85 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಮತ್ತು ಅನಾರೋಗ್ಯದ ಹಿನ್ನೆಲೆಯ ಇಬ್ಬರು ವಿದ್ಯಾರ್ಥಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

‘ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 446 ವಿದ್ಯಾರ್ಥಿಗಳ ಪೈಕಿ 357 ವಿದ್ಯಾರ್ಥಿಗಳು ಹಾಜರಾಗಿದ್ದರು. 89 ಮಂದಿ ಗೈರಾಗಿದ್ದರು. ವಲಸೆ ಕಾರಣದಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿದ್ದ 392 ವಿದ್ಯಾರ್ಥಿಗಳ ಪೈಕಿ 390 ಜನರು ಪರೀಕ್ಷೆ ಬರೆದರೆ 2 ವಿದ್ಯಾರ್ಥಿಗಳು ಗೈರಾಗಿದ್ದರು’ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು