ಮಂಗಳವಾರ, ಡಿಸೆಂಬರ್ 7, 2021
24 °C
ಸಂತೇಬೆನ್ನೂರಿನಲ್ಲಿ ಭವಿಷ್ಯ ನುಡಿದ ಯಡಿಯೂರಪ್ಪ

ಕೇಂದ್ರದಲ್ಲಿ ಇನ್ನೂ 25 ವರ್ಷ ಕಾಂಗ್ರೆಸ್ ಅಧಿಕಾರವಿಲ್ಲ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಕಾಂಗ್ರೆಸ್‌ನವರು ಹಣ, ಹೆಂಡ, ಜಾತಿ ವಿಷಬೀಜದಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದಯಾನೀಯ ಸೋಲು ಅನುಭವಿಸಿದರು. ಇನ್ನು ಮುಂದೆ 25 ವರ್ಷಗಳ ನಂತರವೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಗಳಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಇಲ್ಲಿನ ನಂಜುಂಡೇಶ್ವರ ಸಮುದಾಯ ಭವನದಲ್ಲಿ ಬುಧವಾರ ವಿಧಾನ ಪರಿಷತ್ ಚುನಾವಣೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್ ಉಸಿರಾಡುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ 20 ಸ್ಥಾನಗಳಿಗೆ ಬಿಜೆಪಿ ಸ್ಪರ್ಧೆಗಿಳಿಸಿದೆ. ಶಿವಮೊಗ್ಗ ಕ್ಷೇತ್ರದ ಡಿ.ಎಸ್. ಅರುಣ್ ಗೆಲುವು ಸೇರಿದಂತೆ 15 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿಯೂ ಕಾಂಗ್ರೆಸ್ ಉಸಿರಾಟ ನಿಲ್ಲಿಸಲಿದೆ ಎಂದು ತಿಳಿಸಿದರು.

ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಚನ್ನಗಿರಿ ಮಾದರಿ ಕ್ಷೇತ್ರ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಭಿವೃದ್ಧಿಗೆ ಹಣ ಕೇಳಿದಾಗ ಇಲ್ಲ ಎಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕಾಂಗ್ರೆಸ್ 70 ವರ್ಷದ ಆಡಳಿತದಲ್ಲಿ ದೇಶದ 20 ಕೋಟಿ ಮನೆಗಳಲ್ಲಿ ಕೇವಲ 3 ಕೋಟಿ ಮನೆಗಳಿಗೆ ನೀರು ಕೊಟ್ಟಿದೆ. ಪ್ರಧಾನಿ ಮೋದಿ 7 ವರ್ಷದಲ್ಲಿ 7 ಕೋಟಿ ಮನೆಗಳಿಗೆ ನೇರ ನೀರಿನ ಸಂಪರ್ಕ ಒದಗಿಸಿದ್ದಾರೆ’ ಎಂದರು.

‘ಚನ್ನಗಿರಿಯಿಂದಲೇ ಮೊದಲ ಪ್ರಚಾರ ನಡೆಸಿದ್ದೇನೆ. ನನ್ನನ್ನು ಗೆಲ್ಲಿಸಿ’ ಎಂದು ಅಭ್ಯರ್ಥಿ ಡಿ.ಎಸ್. ಅರುಣ್ ಮನವಿ ಮಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಕೆಎಸ್‌ಡಿಎಲ್ ಅಧ್ಯಕ್ಷ ಕೆ.ಮಾಡಾಳ್ ವಿರೂಪಾಕ್ಷಪ್ಪ, ಶ್ರೀನಿವಾಸ್ ಮಾತನಾಡಿದರು. ಕುವೆಂಪು ವಿವಿ ಸೆನೆಟ್ ಸದಸ್ಯ ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಂತೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಮರುಳ ಸಿದ್ದೇಶ್, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ಬಸವರಾಜ್, ಸಿದ್ದೇಶ್, ಸುರೇಶ್ ದೊಡ್ಡಬಾಯಿ, ನಾಗರಾಜ್ ಹುಣಸೇಮರ, ಜಿ.ಎನ್.ಸುರೇಶ್ ಇದ್ದರು. ಲೋಹಿತ್ ಕುಮಾರ್ ಸ್ವಾಗತಿಸಿದರು. ಮಾರುತಿ ಕಾರ್ಯಕ್ರಮ ನಿರೂಪಿಸಿದರು. ಹುಚ್ಚಂಗಿ ಪ್ರಸಾದ್ ವಂದಿಸಿದರು.

ಜೆಡಿಎಸ್ ಜೊತೆ ಹೊಂದಾಣಿಕೆಗೆ ಶೀಘ್ರ ನಿರ್ಧಾರ

ಜೆಡಿಎಸ್ ಜೊತೆ ಹೊಂದಾಣಿಕೆ ಬಗ್ಗೆ ಇಷ್ಟರಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಜೆಡಿಎಸ್ ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಾರೋ ನೋಡಿಕೊಂಡು ನಿರ್ಧರಿಸಲಾಗುವುದು. ಈ ಕುರಿತು ಜೆಡಿಎಸ್ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.