ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಜನಸಂದಣಿ: ವ್ಯಾಪಾರಿಗಳಿಗೆ ದಂಡದ ಬಿಸಿ

ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 20 ಮೇ 2021, 4:20 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ವಿವಿಧ ಕಡೆಗಳಲ್ಲಿ ತಳ್ಳುಗಾಡಿಯಲ್ಲಿ ಗುಂಪುಗೂಡಿ ವ್ಯಾಪಾರ ಮಾಡುತ್ತಿರುವವರನ್ನು ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತು ಅಧಿಕಾರಿ ತಂಡ ಬುಧವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.

ಮಂಗಳವಾರ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಿದ್ದರೂ ವ್ಯಾಪಾರ ಮಾಡುತ್ತಿದ್ದರು. ಅಧಿಕಾರಿಗಳು ಅಂತಹ ಗಾಡಿಗಳ ತೂಕದ ಯಂತ್ರ, ಕಲ್ಲು, ಬುಟ್ಟಿಗಳನ್ನು ಕಸಿದುಕೊಂಡು ಪಾಲಿಕೆ ಆಟೊದಲ್ಲಿ ಹಾಕಿದರು.

‘ನಾವಿಲ್ಲಿ ವ್ಯಾಪಾರ ಮಾಡೊಲ್ಲ ಎಂದು ಭರವಸೆ ನೀಡಿದ್ದೀರಿ. ಆದರೆ ಪುನಃ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದೀರಿ’ ಎಂದು ಸಿಟ್ಟಿಗೆದ್ದ ಪಾಲಿಕೆ ಆಯುಕ್ತರು 100ಕ್ಕೂ ಹೆಚ್ಚು ಗಾಡಿಗಳನ್ನು ಮಾರುಕಟ್ಟೆ ಪ್ರದೇಶದಿಂದ ಹೊರ ಹಾಕಿದರು. ಕೆಲವರಿಗೆ ದಂಡದ ಬಿಸಿ ಮುಟ್ಟಿಸಿದರು.

ಬ್ಯಾರಿಕೇಡ್ ಅಳವಡಿಕೆ:

ಮಾರುಕಟ್ಟೆಯಲ್ಲಿ ಜನಸಂದಣಿಯಾಗಿರುವುದನ್ನು ಗಮನಿಸಿದ ಗಡಿಯಾರ ಕಂಬದ ಬಳಿ ಬ್ಯಾರಿಕೇಡ್‌ ಅಳವಡಿಸಲಾಯಿತು.

ಹಳ್ಳಿಗಳಿಂದ ವ್ಯಾಪಾರಿಗಳು ಹಣ್ಣು, ತರಕಾರಿಗಳನ್ನು ತಂದು ಗಡಿಯಾರ, ಚಾಮರಾಜಪೇಟೆ, ಹಾಸಭಾವಿ ವೃತ್ತ, ಚೌಕಿಪೇಟೆ, ಜಗಳೂರು ರಸ್ತೆಯ ಬಳಿ ಮಾರಾಟ ಮಾಡುತ್ತಿದ್ದು, ಇದರಿಂದ ಜನಸಂದಣಿ ಏರ್ಪಡುತ್ತಿತ್ತು. ಇದನ್ನು ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಯಿತು.

ಚಾಮರಾಜಪೇಟೆಯಲ್ಲಿ ಜನರನ್ನು ಗುಂಪುಗೂಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಅಂಗಡಿಯೊಂದಕ್ಕೆ ₹ 10 ಸಾವಿರ ದಂಡ ವಿಧಿಸಿದರು. ಅಲ್ಲದೇ ಟ್ರೇಡ್ ಲೈಸನ್ಸ್ ಅನ್ನೂ ಪರಿಶೀಲಿಸಿದರು.

‘ದೊಡ್ಡವರನ್ನು ಬಿಟ್ಟು ನಮ್ಮ ಅಂಗಡಿಗೆ ಬಂದಿದ್ದೀರಾ, ನಾವೇಕೆ ಹಣ ಕಟ್ಟಬೇಕು, ಹಣ ಕಟ್ಟುವುದಿಲ್ಲ’ ಎಂದು ಅಂಗಡಿ ಮಾಲೀಕನ ಪರ ವಹಿಸಿಕೊಂಡು ಬಂದ ವ್ಯಕ್ತಿಗೆ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಿದರು.

ಕೆಲವು ಬಟ್ಟೆ ಅಂಗಡಿಗಳಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಯುತ್ತಿದೆ ಎಂಬ ಮಾಹಿತಿ ಅರಿತ ಆಯುಕ್ತರು ಅಲ್ಲಿಗೆ ಹೋಗುವಷ್ಟರಲ್ಲಿ ಖರೀದಿಗೆ ಬಂದ ಜನರನ್ನು ಅಂಗಡಿಯವರು ಹೊರಗೆ ಕಳುಹಿಸಿದ್ದರು. ಹಣ್ಣು, ತರಕಾರಿ ಮಾರಾಟ ಮಾಡುವವರು ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲ ನೀಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಅಂತಹ ಕವರ್‌ಗಳನ್ನು ವಶಪಡಿಸಿಕೊಂಡರು.

ಅಜ್ಜಿಗೆ ಊಟದ ವ್ಯವಸ್ಥೆ

ವಿಜಯಲಕ್ಮೀ ರಸ್ತೆಯಲ್ಲಿ ದಿಕ್ಕಿಲ್ಲದೇ ಕುಳಿತಿದ್ದ ಅಜ್ಜಿಗೆ ಪ್ರತಿ ದಿವಸ ಊಟದ ವ್ಯವಸ್ಥೆ ಮಾಡುವಂತೆ ಪಾಲಿಕೆ ಅರೋಗ್ಯ ನಿರೀಕ್ಷಕಿ ಮಧುಶ್ರೀ ಅವರಿಗೆ ಸೂಚಿಸಿದರು.

ಆರೋಗ್ಯ ನಿರೀಕ್ಷಕ ಪ್ರಕಾಶ್, ಶಶಿಧರ್, ಅಲ್ತಾಮಶ್, ಪಾಲಿಕೆ ನಾಮನಿರ್ದೇಶಿತ ಸದಸ್ಯ ಶಿವನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಲೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT