ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಐಎಎಸ್‌, ಐಎಫ್‌ಎಸ್‌, ಪ್ರಸೂತಿತಜ್ಞೆ, ವಿಜ್ಞಾನಿಯಾಗುವ ಗುರಿ ಇಟ್ಟುಕೊಂಡಿರುವ ಮಕ್ಕಳು

ಎಸ್ಸೆಸ್ಸೆಲ್ಸಿ: ಟಾಪರ್‌ಗಳ ಕಣ್ಣುಗಳಲ್ಲಿ ಕನಸಿನ ಹೊಳಪು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿರುವ ಎಲ್ಲ ಮಕ್ಕಳು ಭವಿಷ್ಯದಲ್ಲಿ ಏನಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. 625ಕ್ಕೆ 625 ಅಂಕ ಗಳಿಸಿದ ನಾಲ್ವರು ತಮ್ಮ ಕನಸುಗಳನ್ನು ‘ಪ್ರಜಾವಾಣಿ ಜತೆಗೆ ಹಂಚಿಕೊಂಡಿದ್ದಾರೆ.

ಐಎಫ್‌ಎಸ್‌ ಗುರಿ: ‘ಸಿದ್ಧಗಂಗಾ ಶಾಲೆಯ ಎಲ್ಲ ಶಿಕ್ಷಕರ ಪ್ರೋತ್ಸಾಹ, ಹೆತ್ತವರ ಬೆಂಬಲ, ಅಣ್ಣ ಆದರ್ಶನ ಸಲಹೆ, ಯೇಸುಕ್ರಿಸ್ತರ ಅನುಗ್ರಹದಿಂದ ಈ ಸಾಧನೆ ಸಾಧ್ಯವಾಗಿದೆ. ಸದ್ಯ ವಿಜ್ಞಾನ (ಪಿಸಿಎಂಬಿ) ಆರಿಸಿಕೊಂಡು ಓದುತ್ತೇನೆ. ಎಂಬಿಬಿಎಸ್‌ ಮಾಡಬೇಕು. ಮುಂದೆ ಐಎಎಫ್‌ಎಸ್‌ ಮಾಡಿ ದೇಶ ಸೇವೆ ಮಾಡಬೇಕು’ ಎಂದು ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ ಗ್ರೇಸ್‌ ಡಿ. ಚಿಂದವಾಳ್‌ ಕನಸು ಬಿಚ್ಚಿಟ್ಟಿದ್ದಾಳೆ.

‘625 ಪಡೆಯುತ್ತೇನೆ ಎಂದು ಎಸ್ಸೆಸ್ಸೆಲ್ಸಿ ಆರಂಭದಲ್ಲೇ ಅವಳ ರೀಡಿಂಗ್‌ ರೂಂನಲ್ಲಿ ಅನುಷಾ ಬರೆದಿಟ್ಟಿದ್ದಳು. ಅವಳ ಮುಂದಿನ ಕನಸು ನೆರವೇರಿಸಲು ನಾವು ಪ್ರೋತ್ಸಾಹ ನೀಡುತ್ತೇವೆ’ ಎಂದು ಡಿಸಿಎಂ ಟೌನ್‌ಶಿಪ್‌ ನಿವಾಸಿ, ಬೋಧಕ (ಚರ್ಚ್‌) ಡ್ಯಾನಿಯಲ್‌ ಚಿಂದವಾಳ್‌– ಐಗೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಂಪಾಕಲಿ ದಂಪತಿ  ತಿಳಿಸಿದ್ದಾರೆ.

ಐಎಎಸ್‌ ಮಾಡುವೆ: ‘ಪಾಠ ಆಗುತ್ತಿದ್ದಂತೆ ಓದುತ್ತಿದ್ದೆ. ಅದಕ್ಕಾಗಿಯೇ ಎಂದು ಸಮಯ ನಿಗದಿ ಮಾಡಿರಲಿಲ್ಲ. ಅಜ್ಜ, ಅಜ್ಜಿ, ಅಮ್ಮ, ತಂಗಿ ಭೂಮಿಕಾಳ ನೆರವು, ಸಿದ್ಧಗಂಗಾ ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದಾಗಿ ಶೇ 100 ಅಂಕ ಗಳಿಸುವ ನಿರೀಕ್ಷೆ ಇತ್ತು. ಮುಂದೆ ವಿಜ್ಞಾನ ಓದಿ, ಬಳಿಕ ಐಎಎಸ್‌ ಮಾಡುತ್ತೇನೆ’ ಎಂದು ವಿಜೇತಾ ಬಸವರಾಜ ಮುತ್ತಗಿ ತಿಳಿಸಿದ್ದಾಳೆ.

‘ಆಕೆಯ ಇಚ್ಚೆಯಂತೆ ಓದಿಸುತ್ತೇವೆ’ ಎಂದು ವಿಜೇತಾಳ ಅಜ್ಜ ನಿಟುವಳ್ಳಿಯ ಎಚ್‌. ನಾಗೇಂದ್ರಪ್ಪ ತಿಳಿಸಿದ್ದಾರೆ. ಶಾರದಾ ಮುತ್ತಗಿ–ದಿವಂಗತ ಬಸವರಾಜ ಮುತ್ತಗಿ ಅವರ ಇಬ್ಬರು ಮಕ್ಕಳಲ್ಲಿ ದೊಡ್ಡವಳು ಈ ವಿಜೇತಾ.

ಗೈನಾಕಲಜಿಸ್ಟ್‌ ಆಗುವೆ: ‘ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ, ಹೆತ್ತವರ, ಅಣ್ಣ ಚೇತನ್‌ ಎಂ.ಎನ್‌. ಅವರ ಬೆಂಬಲ, ಶಿಕ್ಷಕರು ನೀಡಿದ ಉತ್ತಮ ಶಿಕ್ಷಣದಿಂದ 625 ಅಂಕ ಗಳಿಸಲು ಸಾಧ್ಯವಾಗಿದೆ. ನೀಟ್‌ ಪರೀಕ್ಷೆ ಬರೆದು ಪ್ರಸೂತಿ ತಜ್ಞೆಯಾಗಬೇಕು’ ಎಂದು ತರಳಬಾಳು ಪ್ರೌಢಶಾಲೆಯ ಮೋನಿಷಾ ಎಂ.ಎನ್‌. ಹೇಳಿಕೊಂಡಿದ್ದಾಳೆ.

ತಂದೆ ಪಿಯು ಉಪನ್ಯಾಸಕ ನಾಗರಾಜಪ್ಪ, ತಾಯಿ ಶಾರದಾ ಎಂ.ಡಿ. ಅವರು ಸಿ.ಜಿ. ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌. ‘ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆವಿಬಿ ವಿದ್ಯಾಮಂದಿರದಲ್ಲಿ ಓದುತ್ತಿರುವಾಗ ಕ್ವಾಟ್ರರ್ಸ್‌ನಲ್ಲಿದ್ದ ಡಾ. ಜಯಂತಿ ಪ್ರಸಿದ್ಧ ಪ್ರಸೂತಿ ತಜ್ಞರಾಗಿದ್ದರು. ಅವರ ಪ್ರಭಾವ ಮೋನಿಷಾ ಮೇಲೆ ಉಂಟಾಗಿದೆ’ ಎಂದು ಹೆತ್ತವರು ವಿವರಿಸಿದರು.

ರೈತನ ಮಗಳಿಗೆ ಡಿಆರ್‌ಡಿಒ ಕನಸು
ಬಾಗಲಕೋಟೆ ಜಿಲ್ಲೆಯ ಮುದೋಳ ತಾಲ್ಲೂಕಿನ ಚಿಕ್ಕೂರಿನ ರಕ್ಷಿತಾ ಉಮೇಶ್‌ ಪಾಟೀಲ್‌ ಎಂಬ ರೈತನ ಮಗಳಿಗೆ ವಿಜ್ಞಾನಿಯಾಗಿ ಡಿಆರ್‌ಡಿಒದಲ್ಲಿ ಕೆಲಸ ಮಾಡಬೇಕು ಎಂಬ ಕನಸಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಎರೆ ಹೊಸಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನದ ವಿದ್ಯಾರ್ಥಿನಿಯಾಗಿ 625 ಅಂಕ ಗಳಿಸಿದ್ದಾಳೆ. ಈಗ ಇದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಓದಿದ್ದಳು.

ಚಿಕ್ಕೂರಿನ ಉಮೇಶ್‌ ಪಾಟೀಲ್‌–ನೀಲವ್ವ ಪಾಟೀಲ್‌ ಎಂಬ ರೈತ ದಂಪತಿಯ ಇಬ್ಬರು ಮಕ್ಕಳಲ್ಲಿ ದೊಡ್ಡವಳು. ವೆಂಕಟೇಶ್‌ ಎರಡನೇಯವನು. ‘ಆಕೆಯ ಇಚ್ಚೆಯಂತೆ ಓದಿಸುತ್ತೇವೆ’ ಎಂದು ಹೆತ್ತವರು ಹೇಳಿದ್ದಾರೆ.

**
ಐದು ಮಂದಿ 625 ಅಂಕ ಗಳಿಸುವ ನಿರೀಕ್ಷೆ ಇತ್ತು. ಇಬ್ಬರು ಪಡೆದಿದ್ದಾರೆ. ಎಲ್ಲರ ಫಲಿತಾಂಶದಿಂದ ಖುಷಿಯಾಗಿದೆ.
-ಜಸ್ಟಿನ್‌ ಡಿಸೋಜ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ

***

10ಎಕ್ಸ್‌ ಪ್ಲಸ್‌ ತರಬೇತಿ ಮೂಲಕ ಉತ್ತಮ ಫಲಿತಾಂಶ ಬಂದಿದೆ. ಶಾಲೆಯ ಎಲ್ಲ ಶಿಕ್ಷಕರು, ಆನ್‌ಲೈನ್ ತರಗತಿ ಯಶಸ್ವಿಯಾಗಿ ನಡೆಸಿದ ಪ್ರಶಾಂತ್‌ಗೆ ಶ್ರೇಯಸ್ಸು ಸಲ್ಲಬೇಕು.
-ಡಾ. ಜಯಂತ್‌, ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ

***

ಕೊರೊನಾ ಕಾಲದಲ್ಲಿಯೂ ಮನೆಗೆ ಹೋಗದೇ ವಸತಿನಿಲಯದಲ್ಲಿಯೇ ಇದ್ದು ಓದಿದ್ದಾಳೆ. ನಮ್ಮ ಶಾಲೆಯ ಎಲ್ಲ ಬೋಧಕರು ಇಟ್ಟಿದ್ದ ನಿರೀಕ್ಷೆಯನ್ನು ರಕ್ಷಿತಾ ನಿಜಗೊಳಿಸಿದ್ದಾಳೆ.
-ಬಸವರಾಜ ಎಂ.ಎಂ., ಮುಖ್ಯ ಶಿಕ್ಷಕರು, ಜ್ಞಾನಾಕ್ಷಿ ವಿದ್ಯಾನಿಕೇತನ ಪ್ರೌಢಶಾಲೆ

***

ಮೋನಿಷಾ ತುಂಬಾ ಬುದ್ಧಿವಂತೆ. ಶಿಸ್ತುಬದ್ಧವಾಗಿ ಓದುತ್ತಿದ್ದಳು. ಅವಳು ಮತ್ತು ವಿಷ್ಣುತೀರ್ಥ 625 ತೆಗೆಯಬಹುದು ಎಂಬ ನಿರೀಕ್ಷೆ ಇತ್ತು. ವಿಷ್ಣುತೀರ್ಥನಿಗೆ ಎರಡು ಅಂಕ ಕಡಿಮೆ ಆಯಿತು.
-ರವಿಕುಮಾರ್‌ ಎಚ್‌.ಎಸ್‌, ವೆಂಕಟೇಶ್‌ ಎ.,
ಮುಖ್ಯಶಿಕ್ಷಕರು ಮತ್ತು ಪ್ರಭಾರ ಮುಖ್ಯಶಿಕ್ಷಕರು, ತರಳಬಾಳು ಪ್ರೌಢಶಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.