ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಪಘಾತ ಮಾಡಿದ ನಾಲ್ಕು ಗಂಟೆಗಳಲ್ಲೇ ಚಾಲಕ ಪತ್ತೆ

ಚನ್ನಗಿರಿ ಪೊಲೀಸರ ಕಾರ್ಯಾಚರಣೆ
Last Updated 12 ಜೂನ್ 2020, 9:05 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ರೊಪ್ಪದಹಟ್ಟಿ ಗ್ರಾಮದ ಕ್ರಾಸ್‌ ಬಳಿ ಬುಧವಾರ ರಾತ್ರಿ ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಕಾರು ಹಾಗೂ ಚಾಲಕನನ್ನು ನಾಲ್ಕುವರೆ ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಲಕ ಮಹಾರಾಷ್ಟ್ರದವನಾಗಿದ್ದು, ಈತನನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದರಿಂದ ಹೆಸರು ಬಹಿರಂಗಪಡಿಸಿಲ್ಲ.

ಅಜ್ಜಂಪುರದ ವಿಠಲಪುರ ಗ್ರಾಮದಲ್ಲಿ ಪೇಂಟಿಂಗ್‌ ಕೆಲಸ ಮುಗಿಸಿ ಒಂದೇ ಬೈಕಲ್ಲಿ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಇದಾಯತ್‌ ಮತ್ತು ರಂಗಪ್ಪ ಸ್ಥಳದಲ್ಲೇ ಮೃತಪಟ್ಟರೆ ಮಹಮ್ಮದ್‌ ಸೈಫುಲ್ಲಾ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದರು.

ಚನ್ನಗಿರಿ ಡಿವೈಎಸ್‌ಪಿ ನೇತೃತ್ವದಲ್ಲಿ 6 ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತವಾಗಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಮೊದಲನೇ ತಂಡ ಅಪಘಾತವಾದ ಸ್ಥಳದಲ್ಲಿ ಬಿದ್ದಿದ ವಾಹನದ ಚೂರನ್ನು ಸಂಗ್ರಹಿಸಿ ಬಣ್ಣದ ಆಧಾರದ ಮೇಲೆ ಯಾವ ಕಂಪನಿಯ ಎಂಬುದನ್ನು ಖಚಿತಪಡಿಸಿಕೊಂಡಿತು.

ಎರಡನೇ ತಂಡವು ವಾಹನದ ಎಡಭಾಗದ ಹೆಡ್‌ಲೈಟ್ ನಜ್ಜುಗುಜ್ಜಾಗಿರುವ ಆಧಾರದ ಮೇಲೆ ವಾಹನವು ಹಾದುಹೋಗಿರುವ 12 ಕಡೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲೆಯಾಗಿರುವ ತುಣುಕುಗಳನ್ನು ಕಲೆಹಾಕಿದರೆ ಮತ್ತೊಂದು ತಂಡ ವಾಹನ ಹಾದುಹೋಗಿರುವ ಪಾಂಡೊಮಟ್ಟಿ ಹಾಗೂ ಗೊಪ್ಪೆನಗಳ್ಳಿಯ ಸಣ್ಣದಾರಿಗಳನ್ನು ಹುಡುಕಿತು.

‘ಮಂಡ್ಯದ ಕುಟುಂಬವೊಂದು ಮಹಾರಾಷ್ಟ್ರದಲ್ಲಿ ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಿರೂರಿನ ಗ್ಯಾರೇಜ್‌ನಲ್ಲಿ ರಿಪೇರಿಗಾಗಿ ನಿಲ್ಲಿಸಿದಾಗ ಕಾರಣ ಕೇಳಿದಾಗ ಟ್ರಕ್‌ ಡಿಕ್ಕಿ ಹೊಡೆದಿದೆ ಎಂದು ಕಾರು ಚಾಲಕ ಹೇಳಿದ್ದಾನೆ. ಆದರೆ ಅಪಘಾತ ನಡೆದ ಸ್ಥಳದ ಸಾಕ್ಷಿಗೂ ಕಾರಿಗೆ ಹೊಂದಿಕೆಯಾಗುತ್ತಿದ್ದವು. ಯಾವುದೇ ವಾಹನವನ್ನು ಬಿಡದಂತೆ ಪೊಲೀಸರು ಸೂಚನೆ ನೀಡಿದ್ದರಿಂದ ಕಾರಿನ ಚಾಲಕ ಸಿಕ್ಕಿಬಿದ್ದಿದ್ದಾನೆ. ಬುಕ್ಕಾಂಬುಧಿ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಇದನ್ನು ಖಚಿತಪಡಿಸಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT