ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ‘ನೆರಳು ಬೆಳಕಿನಾಟ’ ದರ್ಶನ

26ರಂದು ಕಂಕಣ ಸೂರ್ಯಗ್ರಹಣ ವೀಕ್ಷಣಗೆ 100 ಶಾಲೆಗಳಲ್ಲಿ ಸಿದ್ಧತೆ
Last Updated 21 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲೆಯ ಸುಮಾರು 100 ಶಾಲೆಗಳಲ್ಲಿ ಡಿಸೆಂಬರ್‌ 26ರಂದು ನಡೆಯುವ ‘ಕಂಕಣ ಸೂರ್ಯಗ್ರಹಣ’ದ ವೀಕ್ಷಣೆಗೆ ಏರ್ಪಾಡು ಮಾಡುವ ಮೂಲಕ ಮೌಢ್ಯದ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ 26ರಂದು ಬೆಳಿಗ್ಗೆ 8.04ರಿಂದ 11.04ರವರೆಗೆ ಭಾಗಶಃ ಸೂರ್ಯಗ್ರಹಣವನ್ನು ನೋಡಬಹುದಾಗಿದೆ.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಲಾ 22 ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಸೂರ್ಯಗ್ರಹಣ ವೀಕ್ಷಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಅಂದು ಬೆಳಿಗ್ಗೆ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ಪ್ರಕ್ರಿಯೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮಕ್ಕಳಿಗೆ ಸುರಕ್ಷಿತವಾದ ಕನ್ನಡಕಗಳನ್ನು ತೊಡಿಸಿ ಸೂರ್ಯಗ್ರಹಣ ವೀಕ್ಷಣೆ ಮಾಡಿಸಲಿದ್ದಾರೆ.

ಜೊತೆಗೆ ಪರ್ಯಾಯ ವಿಧಾನಗಳನ್ನು ಬಳಸಿಕೊಂಡು ಗೋಡೆ ಹಾಗೂ ಪರದೆ ಮೇಲೆ ಸೂರ್ಯನ ಬಿಂಬ ಬೀಳುವಂತೆ ಮಾಡಿ ಗ್ರಹಣದ ದೃಶ್ಯಗಳನ್ನು ತೋರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸೂರ್ಯಗ್ರಹಣದ ಬಗ್ಗೆ ವಿವರಗಳಿರುವ ಕರಪತ್ರಗಳನ್ನು ಡಿ. 25ರಂದು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಕಳುಹಿಸಿಕೊಡುತ್ತಿದ್ದೇವೆ. ಸುರಕ್ಷಿತ ವಿಧಾನಗಳ ಮೂಲಕ ಗ್ರಹಣವನ್ನು ವೀಕ್ಷಿಸಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮರುದಿನ ಗ್ರಹಣ ವೀಕ್ಷಣೆಗೆ ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡುತ್ತಿದ್ದೇವೆ. ಗ್ರಹಣ ವೀಕ್ಷಣೆ ಮಾಡಿಸಿದ ಬಳಿಕ ವಿದ್ಯಾರ್ಥಿಗಳ ಅನುಭವ ಹಂಚಿಕೊಂಡ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

‘ಈ ಭಾಗದಲ್ಲಿ ಶೇ 70ರಿಂದ 80ರಷ್ಟು ಮಾತ್ರ ಸೂರ್ಯ ಗ್ರಹಣ ಗೋಚರಿಸಲಿದೆ. 45 ವರ್ಷಗಳ ನಂತರ ಇಂತಹ ಸೂರ್ಯಗ್ರಹಣ ಬರಲಿದೆ. ನಿಸರ್ಗದ ಈ ನೆರಳು ಬೆಳಕಿನಾಟವನ್ನು ಎಲ್ಲರೂ ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೆಲವು ಸಂಘಟನೆಗಳ ಆಶ್ರಯದಲ್ಲಿ ಗ್ರಹಣ ವೀಕ್ಷಣೆ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ವೀಕ್ಷಣೆ: ‘ವಿಜ್ಞಾನ ಪರಿಷತ್ತಿನ ಆಶ್ರಯದಲ್ಲಿ ನಗರದ ಹೈಸ್ಕೂಲ್‌ ಮೈದಾನದಲ್ಲಿ ಸಾರ್ವಜನಿಕರಿಗಾಗಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. 100 ಸೋಲಾರ್‌ ಫಿಲ್ಟರ್‌ ಕನ್ನಡಕಗಳನ್ನು ಗ್ರಹಣ ವೀಕ್ಷಣೆಗಾಗಿ ಇಡಲಾಗುವುದು. ಎಲ್ಲಾ ತಾಲ್ಲೂಕುಗಳಲ್ಲೂ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಗುರುಸಿದ್ದಸ್ವಾಮಿ ಮಾಹಿತಿ ನೀಡಿದರು.

ಶಾಲೆಗಳಿಗೆ ಕನ್ನಡಕ ವಿತರಣೆ

ಬರಿಗಣ್ಣಿನಿಂದ ಗ್ರಹಣ ನೋಡುವುದು ಅಪಾಯಕಾರಿ. ಹೀಗಾಗಿ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆ ಮಾಡಿಸುವ ಸಲುವಾಗಿ 100 ಶಾಲೆಗಳಿಗೂ ತಲಾ 20 ಸೋಲಾರ್‌ ಫಿಲ್ಟರ್‌ ಕನ್ನಡಕಗಳನ್ನು ವಿತರಿಸಲಾಗುತ್ತಿದೆ ಎಂದು ಗುರುಸಿದ್ದಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT