ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಬೆಡ್‌ ಸಂಖ್ಯೆ ಹೆಚ್ಚಿಸಲಾಗದು: ಜಿಲ್ಲಾಧಿಕಾರಿ ಸ್ಪಷ್ಟನೆ

ಆಮ್ಲಜನಕದ ಪೂರೈಕೆಯ ಮಿತಿಯಲ್ಲೇ ಉತ್ತಮ ಕೆಲಸ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 16 ಮೇ 2021, 2:40 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದಲ್ಲಿ ಆಮ್ಲಜನದ ಉತ್ಪಾದನೆ ಹೆಚ್ಚಾಗಿಲ್ಲ. ಆದರೆ ಆಮ್ಲಜನಕದ ಬೇಡಿಕೆ ಜಾಸ್ತಿ ಇದೆ. ಹಾಗಾಗಿ ಈಗ ಪೂರೈಕೆ ಆಗುತ್ತಿರುವ ಆಮ್ಲಜನಕಕ್ಕೆ ಸರಿಯಾಗಿ ಬೆಡ್‌ಗಳು ಇರಬೇಕಾಗಿರುವುದರಿಂದ ಹೆಚ್ಚುವರಿ ಬೆಡ್‌ ಮಾಡಲು ಸಾಧ್ಯವಿಲ್ಲ. ಇರುವ ಆಮ್ಲಜನಕ ಬೆಡ್‌ಗಳಲ್ಲಿಯೇ ಅತ್ಯುತ್ತ ಮವಾಗಿ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಹರಿಹರದ ಸದರ್ನ್‌ ಆಕ್ಸಿಜನ್‌ ಏಜೆನ್ಸಿ ಮೂಲಕ 10 ಕೆ.ಎಲ್. ಮತ್ತು 8.5 ಕೆ.ಎಲ್‌ನ ಎರಡು ಟ್ಯಾಂಕರ್‌ ಆಮ್ಲಜನಕ ಬರುತ್ತದೆ. 10 ಕೆ.ಎಲ್‌ನಲ್ಲಿ ದಾವಣಗೆರೆಗೆ 6 ಕೆ.ಎಲ್‌. ಹಾಗೂ ಚಿತ್ರದುರ್ಗಕ್ಕೆ 4 ಕೆ.ಎಲ್‌. ಪೂರೈಕೆಯಾಗುತ್ತದೆ. ಉಳಿದ 8.5 ಕೆ.ಎಲ್‌.ನಲ್ಲಿ ಹಾವೇರಿ, ರಾಣೆಬೆನ್ನೂರು, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ಸಹಿತ ವಿವಿಧೆಡೆ, ಖಾಸಗಿ ಆಸ್ಪತ್ರೆಗಳಿಗೆ, ನಮ್ಮಲ್ಲಿರುವ ಜಂಬೋ ಸಿಲಿಂಡರ್‌ಗಳಿಗೆ ತುಂಬಿಸಬೇಕಾಗುತ್ತದೆ. ಅಬ್ಬಬ್ಬ ಅಂದರೆ 900 ಜಂಬೋ ಸಿಲಿಂಡರ್‌ಗಳಷ್ಟೇ ಭರ್ತಿಯಾಗುತ್ತವೆ. ಅದರಲ್ಲೇ ನಿರ್ವಹಣೆ ಮಾಡಬೇಕಿದೆ. ಆಮ್ಲಜನಕ ಉತ್ಪಾದನಾ ಘಟಕ ಆಗುವವರೆಗೆ ಆಮ್ಲಜನಕ ಬೆಡ್‌ ಜಾಸ್ತಿ ಮಾಡಲು ಸಾಧ್ಯವಿಲ್ಲ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

6000 ಲೀಟರ್‌ (6 ಕೆ.ಎಲ್‌.) ಸಾಮರ್ಥ್ಯದ ಲಿಕ್ವಿಡ್‌ ಮೆಡಿಕಲ್‌ ಆಕ್ಷಿಜನ್‌ 24 ಗಂಟೆ ಬರಬೇಕು. ಆದರೆ ಈಗ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ 21 ಗಂಟೆಗಳಿಗೇ ಖಾಲಿಯಾಗುತ್ತಿದೆ. ಯಾರಿಗೆ ಎಷ್ಟು ಆಕ್ಸಿಜನ್‌ ಬೇಕೋ ಅಷ್ಟೇ ಬಳಸುವಂತೆ ಕಟ್ಟುನಿಟ್ಟಾಗಿ ತಿಳಿಸಿ ಹೇಗಾದರೂ 24 ಗಂಟೆ ಬರುವಂತೆ ಮಾಡಬೇಕು ಎಂದು ಹೇಳಿದರು.

ಸಿ.ಜಿ ಆಸ್ಪತ್ರೆಯಿಂದ ಪ್ರತಿ ದಿನ 25ರಿಂದ 30 ಜನ ಬಿಡುಗಡೆ ಯಾಗುತ್ತಾರೆ. ಅಷ್ಟೇ ಜನ ದಾಖಲಾಗುತ್ತಿದ್ದಾರೆ. ಬಿಡುಗಡೆ ಬಗ್ಗೆ ನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅವಶ್ಯಕತೆ ಇರು ವವರಿಗೆ ಅವಕಾಶ ಮಾಡಲಾ ಗುತ್ತಿದೆ. ಇಎಸ್‍ಐ ಆಸ್ಪತ್ರೆಯಲ್ಲಿ ಸ್ಟೆಪ್‍ಡೌನ್ ಕೇರ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಿ.ಜಿ. ಆಸ್ಪತ್ರೆ ಸೇರಿ 12 ಆಸ್ಪತ್ರೆಗಳು ಕೊವಿಡ್ ಡೆಸಿಗ್ನೇಟೆಡ್ ಆಸ್ಪತ್ರೆಗಳಾಗಿ ಚಿಕಿತ್ಸೆ ನೀಡುತ್ತಿವೆ. ಜಿಲ್ಲೆಯಲ್ಲಿ 873 ಜನರಲ್ ಬೆಡ್‍ಗಳಿವೆ. 695 ಆಕ್ಸಿಜನ್, 41 ಎಚ್‍ಎಫ್‍ಎನ್‍ಸಿ 41, ಐಸಿಯು ವಿತ್ ವೆಂಟಿಲೇಟರ್ 64, ಐಸಿಯು ವಿತೌಟ್ ವೆಂಟಿಲೇಟರ್ 38 ಒಟ್ಟು 1,711 ಬೆಡ್ ವ್ಯವಸ್ಥೆ ಇದೆ. ಇದರಲ್ಲಿ 1442 ಭರ್ತಿಯಾಗಿವೆ. ಜನರಲ್‌ ಬೆಡ್‌ಗಳಷ್ಟೇ ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ‘ಕೋವಿಡ್ ಲಕ್ಷಣಗಳಿ ರುವ ಮತ್ತು ಕೋವಿಡ್ ಪರೀಕ್ಷೆಗೆ ನೀಡಿ ಫಲಿತಾಂಶಕ್ಕೆ ಕಾಯುತ್ತಿರುವ ಲಕ್ಷಣ ಹೊಂದಿದವರಿಗೆ ನೀಡಲು 8 ಔಷಧಗಳುಳ್ಳ 5 ಸಾವಿರ ಕಿಟ್‍ಗಳನ್ನು ಖರೀದಿಸಲಾಗುತ್ತಿದೆ’ ಎಂದರು.

ಎಸ್‌ಪಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‍ಒ ಡಾ.ನಾಗರಾಜ್, ಡಿಎಸ್‌ ಡಾ. ಜಯಪ್ರಕಾಶ್‌, ಡಾ. ಮೀನಾಕ್ಷಿ, ಡಾ. ನಟರಾಜ್‌, ಡಾ.ಮುರುಳೀಧರ್
ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಸಂಪೂರ್ಣ ಲಾಕ್‍ಡೌನ್ ಇಲ್ಲ’

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈಗಿರುವ ಮಾರ್ಗಸೂಚಿಗಳನ್ನೇ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಿವಮೊಗ್ಗ ಮಾದರಿಯಲ್ಲಿ ಇಲ್ಲೂ ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ ಹಿಂದೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗಿರುವ ಮಾರ್ಗಸೂಚಿಗಳ ಹೊರತುಪಡಿಸಿ ಬೇರೆ ಲಾಕ್‌ಡೌನ್‌ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಆಮ್ಲಜನಕ ಕಾನ್‌ಸಂಟ್ರೇಟರ್ ದಾನ ಮಾಡಿ’

ಆಮ್ಲಜನಕ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಆಗಿರುವ ಕಾನ್ಸಂಟ್ರೇಟರ್‌ಗಳನ್ನು ದಾನಿಗಳು ಕೊಡುಗೆಯಾಗಿ ನೀಡಬೇಕು. ಇದರಿಂದ ಆಮ್ಲಜನಕ ಕೊರತೆಯನ್ನು ನೀಗಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿಕೊಂಡರು.

ಮಹಾನಗರ ಪಾಲಿಕೆಯಿಂದ 60 ಕಾನ್‌ಸಂಟ್ರೇಟರ್‌ಗಳು ಸಿಗಲಿವೆ. ಇದೇ ರೀತಿ ಮೆಡಿಕಲ್‌ ಆಕ್ಷಿಜನ್‌ ಜನರೇಟರ್‌ಗಳನ್ನೂ ನೀಡಬಹುದು ಎಂದು ತಿಳಿಸಿದರು.

‘ಕೆಲವೇ ದಿನಗಳಲ್ಲಿ ಹಲವು ಆಮ್ಲಜನಕ ಪ್ಲಾಂಟ್‌’

ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷರು 10 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಜನರೇಟರ್ ಪ್ಲಾಂಟ್‍ ಕೊಡುಗೆಯಾಗಿ ಜಿಲ್ಲಾಡಳಿತಕ್ಕೆ ನೀಡಲು ಮುಂದಾಗಿದ್ದಾರೆ. ಇದೇ ರೀತಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಹರಿಹರ, ಜಗಳೂರು ತಾಲ್ಲೂಕುಗಳಿಗೆ ಒಂದೊಂದು ಮತ್ತು ಅವರ ಹುಟ್ಟು ಜಿಲ್ಲೆಯಾದ ಚಿತ್ರದುರ್ಗಕ್ಕೆ ಒಂದು ಆಮ್ಲಜನಕ ಜನರೇಟರ್ ಪ್ಲಾಂಟ್ ನೀಡುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಇದೇ ರೀತಿಯಲ್ಲಿ ₹ 82 ಲಕ್ಷ ವೆಚ್ಚದಲ್ಲಿ ಕೆಆರ್‌ಐಡಿಎಲ್‍ನಿಂದ ಚನ್ನಗಿರಿಯಲ್ಲಿ ಆಮ್ಲಜನಕ ಪ್ಲಾಂಟ್ ಸ್ಥಾಪಿಸಲು ಚನ್ನಗಿರಿ ಶಾಸಕರು ಮುಂದಾಗಿದ್ದಾರೆ. ಹೊನ್ನಾಳಿಯಲ್ಲೂ ಆಮ್ಲಜನಕ ಘಟಕ ಸ್ಥಾಪನೆಯಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೇ ಒಂದು ಆಮ್ಲಜನಕ ಪ್ಲಾಂಟ್‌ ಆರಂಭಿಸಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಇದರ ಜತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಕೂಡ ಸಿಆರ್‍ಎಸ್ ನಿಧಿಯಲ್ಲಿ ಒಂದು ಆಮ್ಲಜನಕ ಘಟಕ ಆರಂಭಗೊಳ್ಳಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT